ಚಿಕ್ಕಮಗಳೂರು: ಗಾಂಜಾ ಕೇಸ್​ನಲ್ಲಿ ಬಂಧಿತನಾದ ಕೈದಿಗೂ ಕೊರೋನಾ; ಕಾಫಿನಾಡಲ್ಲಿ ಮೂರು ದಿನಕ್ಕೆ ನಾಲ್ಕು ಸಾವು​

ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಗಾಂಜಾ ಕಳ್ಳನಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ಹಾಕಬೇಕಾಗಿದೆ. ಸಾಲದಕ್ಕೆ ಆ ನಾಲ್ವರನ್ನ ಬಂಧಿಸಿದ ಸುಮಾರು  ಎಂಟಕ್ಕೂ ಅಧಿಕ ಪೊಲೀಸರು ಕೂಡ ಕ್ವಾರಂಟೈನ್​​ಗೆ ಒಳಗಾಗಬೇಕಿದೆ.

news18-kannada
Updated:July 16, 2020, 12:02 PM IST
ಚಿಕ್ಕಮಗಳೂರು: ಗಾಂಜಾ ಕೇಸ್​ನಲ್ಲಿ ಬಂಧಿತನಾದ ಕೈದಿಗೂ ಕೊರೋನಾ; ಕಾಫಿನಾಡಲ್ಲಿ ಮೂರು ದಿನಕ್ಕೆ ನಾಲ್ಕು ಸಾವು​
ಚಿಕ್ಕಮಗಳೂರು ಕಾರಾಗೃಹ
  • Share this:
ಚಿಕ್ಕಮಗಳೂರು (ಜು.16) : ಜಿಲ್ಲೆಯಲ್ಲಿ ಕಳೆದೊಂದು ವಾರದ ಹಿಂದೆ ಗಾಂಜಾ ಕೇಸಲ್ಲಿ ಅಂದರ್ ಆಗಿದ್ದ ಕೈದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಈತನ್ನು ಜೈಲಿನಿಂದ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈತನ ಸಂಪರ್ಕದಲ್ಲಿದ್ದವರಿಗೆ ಈಗ ಆತಂಕ ಎದುರಾಗಿದೆ. 

ಕಳೆದೊಂದು ವಾರದ ಹಿಂದೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಮಾರುತಿ 800 ಕಾರಿನಲ್ಲಿ 50 ಕೆ.ಜಿ. ಗಾಂಜಾವನ್ನ ಸಾಗಿಸುತ್ತಿದ್ದ ನಾಲ್ವರನ್ನ ಪೊಲೀಸರು ಬಂಧಿಸಿದ್ದರು. ಬಂಧಿತ ನಾಲ್ವರನ್ನು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿತ್ತು. ಆದರೀಗ, ಆ ನಾಲ್ವರಲ್ಲಿ ಓರ್ವನಿಗೆ ಕೊರೋನಾ ಸೋಂಕು ದೃಢವಾಗಿದ್ದು,  ಸೋಂಕಿತ ಖೈದಿಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಧಿತ ನಾಲ್ವರು ಆಂಧ್ರಪ್ರದೇಶದದಿಂದ 80 ಕೆ.ಜಿ. ಗಾಂಜಾ ತರಿಸಿ 30 ಕೆಜಿಯನ್ನ ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದರು. ಉಳಿದ 50 ಕೆ.ಜಿ. ಗಾಂಜಾವನ್ನ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮಾರುತಿ 800 ಕಾರಿನಲ್ಲಿ ಮಂಗಳೂರಿಗೆ ಸಾಗಿಸುವಾಗ ಪೊಲೀಸರ ಅಥಿತಿಯಾಗಿದ್ದರು. ಇದೀಗ, ಆ ನಾಲ್ವರಲ್ಲಿ ಓರ್ವವನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ದೊಡ್ಡ ಗಾಂಜಾ ರೇಡ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚಿಂದ್ರ ಸಿಬ್ಬಂದಿಗಳನ್ನ ಶ್ಲಾಘಿಸಿದ್ದರು.

ಈಗ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಗಾಂಜಾ ಕಳ್ಳನಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಬಂದೋಬಸ್ತ್ ಗೆ ಹಾಕಬೇಕಾಗಿದೆ. ಸಾಲದಕ್ಕೆ ಆ ನಾಲ್ವರನ್ನ ಬಂಧಿಸಿದ ಸುಮಾರು  ಎಂಟಕ್ಕೂ ಅಧಿಕ ಪೊಲೀಸರು ಕೂಡ ಕ್ವಾರಂಟೈನ್​​ಗೆ ಒಳಗಾಗಬೇಕಿದೆ. ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಮಾಹಿತಿ ಕಲೆಹಾಕಿ ಬಂಧಿಸಿದ ಪೊಲೀಸರಿಗೆ ಅರೆಸ್ಟ್ ಮಾಡಿದ ಮೇಲೂ ಕೋವಿಡ್ ಆಸ್ಪತ್ರೆಯ ಮುಂಭಾಗ ಪಿಪಿಇ ಕಿಟ್ಟ ಧರಿಸಿ ಅವರನ್ನು ಕಾಯುವಂತ ಸ್ಥಿತಿ ನಿರ್ಮಾಣವಾಗಿರೋದು ನಿಜಕ್ಕೂ ವಿಪರ್ಯಾಸ.

ಮೂರು ದಿನದಲ್ಲಿ ಕಾಫಿನಾಡಲ್ಲಿ ನಾಲ್ಕು ಸಾವು, ಕಾಫಿನಾಡಿಗರಲ್ಲಿ ಹೆಚ್ಚಾದ ಆತಂಕ:

ಸೋಮವಾರ ಎರಡು, ಮಂಗಳವಾರ ಒಂದು, ಬುಧವಾರ ಒಂದು. ಜಿಲ್ಲೆಯಲ್ಲಿ ಮೂರು ದಿನದಲ್ಲಿ ಕೊರೊನಾಗೆ ನಾಲ್ಕು ಜನ ಪ್ರಾಣ ತೆತ್ತಿದ್ದು ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಜಿಲ್ಲೆಯ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ನಿನ್ನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ 72 ವರ್ಷದ ವೃದ್ಧೆ ಕೊರೊನಾ ಬಲಿಯಾಗಿದ್ದಾರೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಗೆ ಪ್ರಾಣ ತೆತ್ತವರ ಸಂಖ್ಯೆ ಏಳಕ್ಕೆ ಏರಿದೆ. ಜಿಲ್ಲೆಯಲ್ಲಿ ಪ್ರಸ್ತುತ 170 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. 170 ರಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಅವುಗಳಲ್ಲಿ ಮೂರೇ ದಿನಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದು ಜಿಲ್ಲೆಯ ಜನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ತಮಗೆ ತಾವೇ ವಿಮರ್ಶೆ ಮಾಡಿಕೊಂಡು ಭಯದಲ್ಲಿ ಬದುಕುವಂತಾಗಿದೆ. ಜಿಲ್ಲೆಯಲ್ಲಿ ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೇ ಒಂದು ಕರೋನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಆದರೆ ಮೇ 19ಕ್ಕೆ ಆರಂಭವಾದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 55 ದಿನಕ್ಕೆ 170 ಗಡಿ ತಲುಪಿದೆ. ಆ 170 ಪ್ರಕರಣಗಳಲ್ಲಿ ಏಳು ಜನ ಪ್ರಾಣ ಕಳೆದುಕೊಂಡಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಗುಣಮುಖವಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಹೆಚ್ಚಿದೆ. ಆದರೆ ಈ ಮಧ್ಯೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.
Published by: Rajesh Duggumane
First published: July 16, 2020, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading