ಜೀವದ ಹಂಗು ತೊರೆದು ದುಡಿಯುತ್ತಿರುವ ಸರ್ಕಾರಿ ಕೊರೋನಾ ವಾರಿಯರ್ಸ್ ಗೆ 5 ತಿಂಗಳಿಂದ ಸಂಬಳ ಇಲ್ಲ: ಇವರ ಗೋಳು ಕೇಳೋರಿಲ್ಲ

ಈ ಸಿಬ್ಬಂದಿ ತಮ್ಮ ವೇತನದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಿದರೆ, ಮೇಲಾಧಿಕಾರಿಗಳಿಂದ ಶಿಸ್ತು ಕ್ರಮದ ಭಯವಿದೆ ಎಂದು ಹಿಂಜರಿಯುತ್ತಾರೆ.

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ

  • Share this:
ವಿಜಯಪುರ(ಡಿ. 23 ):  ಇದು ಜೀವದ ಹಂಗು ತೊರೆದು ಪರರ ಆರೋಗ್ಯ ಕಾಪಾಡುವ ವಾರಿಯರ್ಸ್ ಸ್ಟೋರಿ.  ಕೊರೋನಾ ಸಂದರ್ಭದಲ್ಲಿಯೂ ಎದೆಗುಂದದೆ ಸೇವೆ ನೀಡಿದ ವಾರಿಯರ್ಸ್ ಗೆ ಸಂಬಳದ ಸಮಸ್ಯೆ ಎದುರಾಗಿದೆ. ಮೂರು ತಿಂಗಳಿಗೊಮ್ಮೆ ಸಂಬಳ ಪಡೆಯುವ  ಕಿರಿಯ ಆರೋಗ್ಯ ಸಹಾಯಕಿಯರು (ಎಎನ್​ಎಂ) ಕೊರೋನಾ ಸಂದರ್ಭದಲ್ಲಿ ಕೆಲಸ ಮಾಡಿದರೂ ಕಳೆದ 5 ತಿಂಗಳಿಂದ ಇವರಿಗೆ ಇನ್ನೂ ಸಂಬಳವೇ ಇನ್ನೂ ಜಮಾ ಆಗಿಲ್ಲ. ಸಮುದಾಯ ಮತ್ತು ಸರಕಾರಗಳ ಆರೋಗ್ಯ ಸೇವೆಗಳ ಕೊಂಡಿಯಾಗಿ ಸೇವೆ ಮಾಡುವ ಎಎನ್‌ಎಂ ಗಳು ಬಹುತೇಕವಾಗಿ ಗ್ರಾಮೀಣ ಭಾಗದಲ್ಲಿಯೇ ಸೇವೆ ಸಲ್ಲಿಸುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಇವರಿಗೆ ಕರ್ತವ್ಯ ವಹಿಸಲಾಗಿರುತ್ತದೆ. ವಿಜಯಪುರ ಜಿಲ್ಲೆಯಲ್ಲಿ 274 ಜನ ಖಾಯಂ ಎಎನ್‌ಎಂ ಗಳಿದ್ದು, ಎಲ್ಲರಂತೆ ಪ್ರತಿ ತಿಂಗಳು ಸಂಬಳ ಸಿಗದೇ ಮೂರು ತಿಂಗಳು ಕಾಯಲೇಬೇಕಾದ ದುಸ್ಥಿತಿಗೆ ಸಿಲುಕಿದ್ದಾರೆ.

ಇತರ ಇಲಾಖೆಯವರು ವೇತನ ಸಿಗದಿದ್ದರೆ ಬೀದಿಗಿಳಿದು ಪ್ರತಿಭಟನೆಯನ್ನಾದರೂ ಮಾಡುತ್ತಾರೆ. ಆದರೆ, ಇವರಿಗೆ ಪ್ರತಿಭಟನೆ ನಡೆಸಲೂ ಹೆದರುವ ದುಸ್ಥಿತಿ ಎದುರಾಗಿದೆ. ದಸರಾ ಬಿಡಲಿ ಈ ಬಾರಿ ದೀಪಾವಳಿಗೂ ವೇತನ ಬಾರದೆ ಇವರು ಪರದಾಡುತ್ತಿದ್ದಾರೆ. ಈಗಾಗಲೇ ಕೊರೋನಾ ಹೊಡೆತಕ್ಕೆ ಸಿಲುಕಿರುವ ಇವರು, ಸಂಬಳ ಬಾರದ ಹಿನ್ನೆಲೆಯಲ್ಲಿ ಇವರಲ್ಲಿ ಕೆಲವರು ಮಕ್ಕಳನ್ನು ಶಾಲೆಗೆ ದಾಖಲಿಸದೇ ತಮ್ಮೊಂದಿಗೆ ಕರ್ತವ್ಯಕ್ಕೆ ಕರೆದುಕೊಂಡು ಹೋಗುವಂತಾಗಿದೆ.

ಗಂಡ ಮತ್ತು ಹೆಂಡತಿ ಇಬ್ಬರೂ ನೌಕರಿ ಇದ್ದರೆ ಕುಟುಂಬವನ್ನು ಹೇಗಾದರೂ ನಿರ್ವಹಣೆ ಮಾಡಬಹುದು. ಆದರೆ, ಹೆಂಡತಿಯೊಬ್ಬರೆ ಕೆಲಸ ಮಾಡುತ್ತಿದ್ದರೆ ಕುಟುಂಬ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಸಾಲ ಕೇಳಿದರೂ ಜನ ನೀಡುತ್ತಿಲ್ಲ. ಮೇಲಾಧಿಕಾರಿಗಳು ಇವರಿಂದ ಎಲ್ಲ ಕೆಲಸ ತೆಗೆದುಕೊಳ್ಳುತ್ತಾರೆ.

ಈ ಸಿಬ್ಬಂದಿ ತಮ್ಮ ವೇತನದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಿದರೆ, ಮೇಲಾಧಿಕಾರಿಗಳಿಂದ ಶಿಸ್ತು ಕ್ರಮದ ಭಯವಿದೆ ಎಂದು ಹಿಂಜರಿಯುತ್ತಾರೆ. ಹೀಗಾಗಿ ಸಮಸ್ಯೆ ಹೇಳಿಕೊಳ್ಳಲಾಗದೆ ಬಿಸಿತುಪ್ಪದ ಪರಿಸ್ಥಿತಿಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ಅವಿರೋಧ ಆಯ್ಕೆಗೆ ಗ್ರಾಮಸ್ಥರ ವಿರೋಧ; ಗ್ರಾಮದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ

ಕೇಂದ್ರ ಸರಕಾರದಿಂದ ಇವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕೇಂಸ್ರ ಸರ್ಕಾರ ಆರೋಗ್ಯ ಇಲಾಖೆ  ಕೆಲವು ವಿಭಾಗಗಳ ಸಿಬ್ಬಂದಿಗಳಿಗೆ 03 ಹೆಡ್ ಯೋಜನೆ ಅಡಿ ಸಂಬಳ ಪಾವತಿಯಾಗುತ್ತದೆ. ಅಲ್ಲದೇ, ಈ ಯೋಜನೆಯಡಿ ಸಂಪೂರ್ಣ ಅನುದಾನವನ್ನು ಕೇಂದ್ರ ಸರಕಾರವೇ ಬಿಡುಗಡೆ ಮಾಡುತ್ತದೆ. ಈ ಹಿನ್ನೆಲೆ ಪ್ರತಿ ಬಾರಿ ಮೂರು ತಿಂಗಳಿಗೊಮ್ಮೆ ವೇತನ ಸಿಗುತ್ತಿದೆ. ಆದರೆ, ಸೇವೆ ಮಾತ್ರ ರೌಂಡ್ ದಿ ಕ್ಲಾಕ್ ಎಂಬುವಂತೆ ಮಾಡಲೇಬೇಕು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ನಮಗೆ ಇನ್ನೂ ಹಣ ಬಂದ ತಕ್ಷಣ ಎಎನ್‌ಎಂ ಗಳ ಖಾತೆಗೆ ಹಾಕುತ್ತೇವೆ ಎಂದಷ್ಟೇ ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಸಿಬ್ಬಂದಿಗೆ ಕೆಲವೊಂದು ಹೆಡ್ ಅಡಿ ವೇತನ ಪಾವತಿ ಮಾಡಲಾಗತ್ತದೆ. ಅದೇ ರೀತಿ ಈ ಕಿರಿಯ ಆರೋಗ್ಯ ಸಹಾಯಕಿರಿಗೆ ಸಂಬಳ ಬರುವುದು ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಎಎನ್‌ಎಂ ಗಳಿಗೆ ಇದೇ ರೀತಿ ಸಮಸ್ಯೆಯಾಗಿದ್ದರೂ, ಆರೋಗ್ಯ ಇಲಾಖೆಯಾಗಲಿ, ಸರ್ಕಾರ ಬಡಪಾಯಿ ಕಿರಿಯ ಆರೋಗ್ಯ ಸಹಾಯಕಿಯರ ನೆರವಿಗೆ ಮುಂದಾಗದಿರುವುದು ವಿಪರ್ಯಾಸವಾಗಿದೆ.
Published by:G Hareeshkumar
First published: