ಆನೇಕಲ್(ಮಾ.21): ದಿನದಿಂದ ದಿನಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೋನಾ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದ್ದು , ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿದೆ . ಇದರ ನಡುವೆಯು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಅತ್ತಿಬೆಲೆ ಮೂಲಕ ನಿತ್ಯ ಸಾವಿರಾರು ಮಂದಿ ರಾಜ್ಯಕ್ಕೆ ಅದರಲ್ಲೂ ಬೆಂಗಳೂರು ನಗರಕ್ಕೆ ಎಂಟ್ರಿ ನೀಡುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ .
ಹೌದು, ರಾಜ್ಯದ ಗಡಿ ಅತ್ತಿಬೆಲೆ ಮೂಲಕ ಕಾರು , ಬೈಕ್ , ಟ್ರಕ್ , ಬಸ್ ಸೇರಿದಂತೆ ವಾಹನಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ರಾಜ್ಯಕ್ಕೆ ರಾಜಾರೋಷವಾಗಿ ಪ್ರಯಾಣಿಕರು ಎಂಟ್ರಿ ಕೊಡುತ್ತಿದ್ದಾರೆ . ಈಗಾಗಲೇ ಬೆಂಗಳೂರು ನಗರದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ . ಇಂತಹ ಸನ್ನಿವೇಶದಲ್ಲಿ ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಅತ್ತಿಬೆಲೆ ಗಡಿಯಲ್ಲಿ ಹೊರ ರಾಜ್ಯದವರು ಯಾವುದೇ ತಪಾಸಣೆ ಇಲ್ಲದೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊರೊನಾ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ . ಕೇರಳ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಹೇಗೆ ಕೊರೋನಾ ಟೆಸ್ಟ್ ಕಡ್ಡಾಯ ಮಾಡಿರುವುದಲ್ಲದೆ ವಾಹನಗಳ ಆಗಮಿಸುವವರನ್ನು ತಪಾಸಣೆ ಮಾಡುವ ರೀತಿಯಲ್ಲಿ ಅತ್ತಿಬೆಲೆ ಗಡಿಯಲ್ಲಿಯೂ ಹೊರ ರಾಜ್ಯದಿಂದ ಆಗಮಿಸುವವರಿಗೆ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಆ ಮೂಲಕ ಕೊರೊನಾ ಸೋಂಕು ಹರಡುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಾದ ಅಭಿಷೇಕ್ ಒತ್ತಾಯಿಸಿದ್ದಾರೆ .
ದಕ್ಷಿಣ ಕಾಶ್ಮೀರದಲ್ಲೂ ಮೈ ಸುಡುವ ಬಿಸಿಲು; ಸೂರ್ಯನ ತಾಪಕ್ಕೆ ಬಸವಳಿದ ಕೊಡಗು ಜನ
ಇನ್ನೂ ಕೊರೋನಾ ಕಾಣಿಸಿಕೊಂಡ ಪ್ರಾರಂಭದಲ್ಲಿ ಅತ್ತಿಬೆಲೆ ಗಡಿಯಲ್ಲಿ ಹೊರ ರಾಜ್ಯದಿಂದ ಆಗಮಿಸುವ ವಾಹನಗಳನ್ನು ತಡೆದು ಥರ್ಮಲ್ ಸ್ಕ್ರೀನಿಂಗ್ , ರ್ಯಾಪಿಡ್ ಟೆಸ್ಟ್ ಸೇರಿದಂತೆ ಆರ್ಟಿಪಿಸಿಆರ್ ಕೊರೊನಾ ಟೆಸ್ಟ್ ಮಾಡಿಸುತ್ತಿದ್ದರು. ಆದ್ರೆ ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಕೊರೊನಾ ಎರಡನೇ ಅಲೆ ಜೋರಾಗಿದೆ. ತಮಿಳುನಾಡಿನಲ್ಲಿ ಕೊರೋನಾ ಅಲೆ ಇಲ್ಲದಿದ್ದರೂ ಮುಂಜಾಗ್ರತೆ ದೃಷ್ಟಿಯಿಂದ ಅತ್ತಿಬೆಲೆ ಗಡಿಯಲ್ಲಿ ಹೊರ ರಾಜ್ಯದವರ ತಪಾಸಣೆ ಮಾಡಬೇಕು.
ಈಗಾಗಲೇ ಈ ಹಿಂದೆ ನಿರ್ಮಿಸಿರುವ ಕೊರೋನಾ ತಪಾಸಣಾ ಚೆಕ್ ಪೋಸ್ಟ್ ಇದ್ದು , ಆರೋಗ್ಯ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳನ್ನು ನೇಮಿಸಿದರೆ ಕೊರೊನಾ ಹರಡದಂತೆ ತಡೆಯಬಹುದಾಗಿದೆ . ಹಾಗಾಗಿ ಕೂಡಲೇ ಆನೇಕಲ್ ತಾಲ್ಲೂಕು ಆಡಳಿತ ಅತ್ತಿಬೆಲೆ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಸ್ಥಳೀಯರಾದ ಮಹಮದ್ ಅಸ್ಲಂ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ