ಜ.25ರ ವೇಳೆಗೆ ರಾಜ್ಯದಲ್ಲಿ Corona ಸ್ಫೋಟ ಸಾಧ್ಯತೆ: ಶುಕ್ರವಾರದವರೆಗೆ ಕಾದು ನೋಡಲು ಮುಂದಾದ ಸರ್ಕಾರ

Corona Review Meeting: ಜನವರಿ 25ರ ವೇಳೆಗೆ ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ತೀವ್ರಗೊಳ್ಳಲಿದೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ವೀಕೆಂಡ್​ ಕರ್ಫ್ಯೂ, ನೈಟ್​ ಕರ್ಫ್ಯೂ ಸೇರಿದಂತೆ ಕೋವಿಡ್​ ನಿಯಮಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ.

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona) ಪರಿಸ್ಥಿತಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ವರ್ಚುವಲ್​​ ಸಭೆ (Corona Review Meeting) ನಡೆಯಿತು. ತಜ್ಞರ ಸಲಹೆ ಮೇರೆಗೆ ಸದ್ಯ ಈಗ ಜಾರಿಯಲ್ಲಿರುವ ನಿಯಮಗಳನ್ನೇ ಮುಂದುವರೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಸಿಎಂ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಆರ್​​.ಅಶೋಕ್​​, ಜನವರಿ 25ರ ವೇಳೆಗೆ ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ತೀವ್ರಗೊಳ್ಳಲಿದೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ವೀಕೆಂಡ್​ ಕರ್ಫ್ಯೂ, ನೈಟ್​ ಕರ್ಫ್ಯೂ ಸೇರಿದಂತೆ ಕೋವಿಡ್​ ನಿಯಮಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಶುಕ್ರವಾರದವರೆಗೆ (ಜ.21) ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಅಲ್ಲಿಯವರೆಗೆ ಎಲ್ಲವೂ ಯಥಾಸ್ಥಿತಿಯಲ್ಲಿರಲಿದೆ ಎಂದು ತಿಳಿಸಿದರು.

ಶುಕ್ರವಾರದ ಸಭೆಯತ್ತ ಎಲ್ಲರ ಚಿತ್ತ

ರಾಜ್ಯದ ಐದಾರು ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಕೊಂಚ ಕುಂಠಿತಗೊಂಡಿದೆ, ಆ ಬಗ್ಗೆ ಗಮನ ಹರಿಸಲಿದ್ದೇವೆ. ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡುತ್ತೇವೆ. ಲಾಕ್​ಡೌನ್ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಅಶೋಕ್​ ಮಾಹಿತಿ ನೀಡಿದರು. ಕೊರೊನಾ ಪರಿಸ್ಥಿತಿಯನ್ನು ನೋಡಿಕೊಂಡು ಶುಕ್ರವಾರದ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: Corona ಹೆಚ್ಚಳ ಹಿನ್ನೆಲೆ ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ: ಸೋಂಕನ್ನು ಗೆದ್ದ ಸಿಎಂ ಬಸವರಾಜ ಬೊಮ್ಮಾಯಿ

ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೆಯಿತು?

ಕೊರೋನಾ ಸಂಬಂಧ ನಡೆದ ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ನಿಂದ ಆಗಿರುವ ಪರಿಣಾಮದ ಬಗ್ಗೆ ವಿವರಣೆ ನೀಡಲಾಯಿತು. ಸಭೆಯಲ್ಲಿ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಂಡಿಸಿದರು. ಇಲ್ಲಿವರೆಗೂ ಸರ್ಕಾರ ಮಾಡಿರೋ ಕ್ರಮಗಳು, ಆ ಕ್ರಮಗಳಿಂದ ಕೊರೊನಾ ಎಷ್ಟು ನಿಯಂತ್ರಣ ಆಗಿದೆ. ಬೇರೆ ರಾಜ್ಯಗಳಲ್ಲಿನ ಕೊರೋನಾ ಪರಿಸ್ಥಿತಿ, ಬೇರೆ ರಾಜ್ಯಗಳಿಗೆ ಹೋಲಿಸಿ ಕೊಂಡ್ರಿ ನಮ್ಮ ರಾಜ್ಯದಲ್ಲಿನ ಕೊವೀಡ್ ಪರಿಸ್ಥಿತಿ ಹೇಗಿದೆ. ಕಳೆದ 10 ದಿನಗಳಿಂದ ರಾಜ್ಯದ ಕೊವೀಡ್ ಸೋಂಕಿನ ಪ್ರಮಾಣ, ಸಾವಿನ ಪ್ರಮಾಣ, ಸೋಂಕಿತರ ಆಸ್ಪತ್ರೆ ದಾಖಲಿನ ಬಗ್ಗೆ ವಿವರವನ್ನು ನೀಡಿದರು. ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಉಲ್ಲಂಘನೆ ಮಾಡಿದವರ ವಿರುದ್ದ ಕೇಸ್ ಗಳ ಬಗ್ಗೆಯೂ ವಿವರಣೆ ನೀಡಲಾಯಿತು.

ಫೆಬ್ರವರಿಯಲ್ಲಿ 3ನೇ ಅಲೆ ತೀವ್ರಗೊಳ್ಳುವ ಆತಂಕ

ಫೆಬ್ರವರಿಯಲ್ಲಿ ಕೋವಿಡ್ ತೀವ್ರಗೊಳ್ಳುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು. ಫೆಬ್ರವರಿ ಮೊದಲೆರಡು ವಾರದಲ್ಲಿ ಕೇಸ್ ಗಳ‌ ಹೆಚ್ಚಳ ಸಾಧ್ಯತೆ ಇದೆ. ಹಾಲಿ ಕೇಸ್ ಗಳ ಆಧರಿಸಿ‌ ಫೆಬ್ರವರಿ ಏರಿಕೆ ಬಗ್ಗೆ ಮಾಹಿತಿ ನೀಡಿದರು. ನಿತ್ಯದ ಕೇಸ್ ಗಳು 80 ಸಾವಿರದಿಂದ 1 ಲಕ್ಷ  ಬರುವ ಸಾಧ್ಯತೆ ಎಂದು ತಜ್ಞರು ಅಂದಾಜಿಸಿದ್ದಾರೆ. ಫೆಬ್ರವರಿ ಎರಡನೇ ವಾರದವರೆಗೆ ನಿರ್ಬಂಧಗಳ ಸಡಿಲಿಕೆ ಬೇಡ ಎಂದು ತಜ್ಞರು ಸಲಹೆ ನೀಡಿದರು. ಬಹುತೇಕ ಹಾಲಿ ನಿರ್ಬಂಧಗಳೇ ಮುಂದುವರಿಕೆಗೆ ಸೂಚಿಸಲಾಯಿತು.

ಇದನ್ನೂ ಓದಿ: Belagavi: ಸಿಬ್ಬಂದಿ ಬೇಜವಾಬ್ದಾರಿಯಿಂದಲೇ ಮೂರು ಮಕ್ಕಳ ದಾರುಣ ಸಾವು.. ಇಬ್ಬರು ಅಧಿಕಾರಿಗಳು ಸಸ್ಪೆಂಡ್​

ಬೆಂಗಳೂರಿನ ಬಗ್ಗೆ ಸಿಎಂ ಕಳವಳ

ಸಭೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗ್ತಿರುವ ಕೊರೋನಾ ಪ್ರಕರಣಗಳ ಬಗ್ಗೆ ಸಿಎಂ ಕಳವಳ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ದಿನೇ ದಿನೇ ಪ್ರಕರಣ ಹೆಚ್ಚುತ್ತಿವೆ‌. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಒಪಿಡಿಗಳನ್ನು ಹೆಚ್ಚಿಸಬೇಕು. ಸೋಂಕಿತರ ಕುಟುಂಬದ ಸದಸ್ಯರ ಮೇಲೆ‌ ನಿಗಾ ಇಡಬೇಕು. 5ಟಿ ಸೂತ್ರವನ್ನು ಪರಿಣಾಮಕಾರಿ ಜಾರಿಗೊಳಿಸಿ. ಸಂಘ ಸಂಸ್ಥೆಗಳಿಂದ ಸಹಾಯ ಪಡೆಯಿರಿ. ಮೂರನೇ ಅಲೆ ಬಗ್ಗೆ ಜನರಲ್ಲಿ ಮೂಡಿರುವ ಭಯವನ್ನು ಕಡಿಮೆ ಮಾಡಿ ಎಂದು ಸಚಿವರು, ಅಧಿಕಾರಿಗಳಿಗೆ ಸೂಚನೆ ನೀಡಿದರು.
Published by:Kavya V
First published: