ಚಾಮರಾಜನಗರ(ಅಕ್ಟೋಬರ್. 06): ಕೋವಿಡ್-19 ಹತ್ತಾರು ರೀತಿಯ ದುಷ್ಪರಿಣಾಮ ಬೀರಿರುವುದು ಎಲ್ಲರಿಗು ಗೊತ್ತಿರುವ ವಿಚಾರ. ಇದರ ನಡುವೆ ಒಂದು ಆಶಾದಾಯಕ ಬೆಳವಣಿಗೆಯು ನಡೆದಿದೆ ಎಂದರೆ ಅಚ್ಚರಿಯಾದರು ಸತ್ಯ. ಅದೇನೆಂದರೆ ಬೀಳುಬಿದ್ದ ಜಮೀನುಗಳಲ್ಲೂ ಬೆಳೆ ನಳ ನಳಿಸುವಂತಾಗಲು ಕಾರಣವಾಗಿದೆ ಈ ಕೊರೋನಾ. ಉದ್ಯೋಗ ಅರಸಿ ಪಟ್ಟಣ ಪ್ರದೇಶಗಳಿಗೆ ಹಳ್ಳಿಗಳಿಂದ ಗುಳೆ ಹೋಗುವುದು ಸಾಮಾನ್ಯ. ಅದರಂತೆ ಚಾಮರಾಜನಗರ ಜಿಲ್ಲೆಯಿಂದಲೂ ನೂರಾರು ಕುಟುಂಬಗಳು ಬೆಂಗಳೂರು, ಮೈಸೂರು ಸೇರಿದಂತೆ ನಗರಪ್ರದೇಶಗಳಿಗೆ ವಲಸೆ ಹೋಗಿ ಅಲ್ಲೇ ಬದುಕು ಕಂಡು ಕೊಂಡಿದ್ದವು. ಅದರೆ ಕೊರೋನಾ ಇವರೆಲ್ಲರ ಉದ್ಯೋಗಕ್ಕೆ ಕುತ್ತು ತಂದಿದೆ. ನೂರಾರು ಜನ ಕೆಲಸ ಕಳೆದುಕೊಂಡು ತಮ್ಮ ತಮ್ಮ ಊರು ಸೇರಿದ್ದಾರೆ. ಹೀಗೆ ತಮ್ಮ ಹುಟ್ಟೂರಿಗೆ ಬಂದು ಬದುಕು ಕಟ್ಟಿಕೊಳ್ಳಲು ಪ್ರಯಾಸಪಡುತ್ತಿದ್ದವರ ಕೈ ಹಿಡಿದಿದೆ ಕೃಷಿ. ಪರಿಣಾಮ ಬೀಳು ಬಿದ್ದಿದ್ದ ಜಮೀನುಗಳಿಗೆ ಜೀವ ಕಳೆ ಬಂದಿದೆ.
ನಗರ ಪ್ರದೇಶಗಳಿಂದ ವಾಪಸ್ ಬಂದ ನೂರಾರು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ವಿವಿದೆಡೆ ಬೀಳು ಬಿದ್ದಿದ್ದ ಜಮೀನುಗಳ ಪೈಕಿ 4590 ಎಕರೆ ಪ್ರದೇಶದಲ್ಲಿ ಕೃಷಿ ನಡೆಯುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಲಾಕ್ ಡೌನ್ ಪರಿಣಾಮ ಜನರು ಪಟ್ಟಣ ಪ್ರದೇಶಗಳಿಂದ ಹಿಂದಿರುಗಿದ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ವಾಡಿಕೆಗಿಂತಲು ಹೆಚ್ಚು ಮಳೆಯಾಗಿದ್ದು ಜನರು ಕೃಷಿಯತ್ತ ತೊಡಗಿಸಿಕೊಳ್ಳಲು ಇದು ಕೂಡ ಸಹಕಾರಿಯಾಯ್ತು ಎಂದು ಜಂಟೀ ಕೃಷಿ ನಿರ್ದೇಶಕಿ ಚಂದ್ರಕಲಾ ತಿಳಿಸಿದ್ದಾರೆ.
ಪಟ್ಟಣದಿಂದ ಊರು ಸೇರಿದವರ ಸಾವಿರಾರು ಜನರ ಪೈಕಿ ನಂಜನದೇವನಪುರದ ಪ್ರಕಾಶ್ ದಂಪತಿ ಕೂಡ ಒಬ್ಬರು. ಇವರು ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಗ್ರಾಮಕ್ಕೆ ಹಿಂದಿರುಗಿದರು.
ಮತ್ತೆ ಹೋಗಲು ಸಾಧ್ಯವಾಗದೆ ಊರಿನಲ್ಲೆ ಉಳಿದರು. ಉದ್ಯೋಗವಿಲ್ಲದೆ ಮನೆಯಲ್ಲಿ ಕೂರುವ ಬದಲು ನಾವೇಕೆ ಮತ್ತೆ ಕೃಷಿ ಆರಂಭಿಸಬಾರದು ಎಂದು ಚಿಂತಿಸಿದ ಈ ದಂಪತಿ ತಮ್ಮ ಪಾಳು ಬಿದ್ದಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಉಳುಮೆ ಮಾಡಿ ವ್ಯವಸಾಯ ಆರಂಭಿಸಿದ್ದಾರೆ.
ಟೊಮೆಟೋ, ಬಾಳೆ, ಮಂಗಳೂರು ಸವತೆ, ಮೆಣಸಿಕಾಯಿ ಹೀಗೆ ನಾನಾ ರೀತಿಯ ಬೆಳೆ ಹಾಕಿದ್ದಾರೆ. ಈಗಾಗಲೇ ಉತ್ತಮವಾಗಿ ಟೊಮೆಟೋ ಹಾಗು ಮಂಗಳೂರು ಸವತೆ ಬೆಳೆ ಕೈಸೇರುತ್ತಿದ್ದು ಈ ದಂಪತಿ ಕೃಷಿಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ನಮ್ಮ ಜಮೀನಿನಲ್ಲಿ ಕೃಷಿ ಮಾಡುವುದೇ ಉತ್ತಮ ಅದರಲ್ಲೇ ನಮಗೆ ನೆಮ್ಮದಿ ಸಿಗುತ್ತಿದೆ. ಮತ್ತೆ ಬೆಂಗಳೂರಿಗೆ ಹೋಗಿ ಜಂಜಾಟದಲ್ಲಿ ಸಿಲುಕುವುದಕ್ಕಿಂತ ವ್ಯವಸಾಯ ಮಾಡಿಕೊಂಡಿರುವುದೇ ಉತ್ತಮ ಎನ್ನಿಸುತ್ತಿದೆ ಎನ್ನುತ್ತಾರೆ ಪ್ರಕಾಶ್ ಹಾಗೂ ಹೆಂಡತಿ ಸೌಮ್ಯ.
ಇದನ್ನೂ ಓದಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ವಿಚಾರ ನನಗೆ ಏನು ಗೊತ್ತಿಲ್ಲ ; ಸಚಿವ ಜಗದೀಶ್ ಶೆಟ್ಟರ್
ಇದು ಪ್ರಕಾಶ್ ದಂಪತಿಯ ಯಶೋಗಾಥೆ ಮಾತ್ರವಲ್ಲ. ಇವರಂತೆ ಲಾಕ್ ಡೌನ್ ಪರಿಣಾಮ ಕೆಲಸ ಕಳೆದುಕೊಂಡು ನಗರ ಪ್ರದೇಶಗಳಿಂದ ತಮ್ಮ ತಮ್ಮ ಊರುಗಳಿಗೆ ವಾಪಸ್ ಬಂದ ನೂರಾರು ಕುಟುಂಬಗಳು ಕೃಷಿಯತ್ತ ಮುಖಮಾಡಿವೆ. ಆ ಮೂಲಕ ಸ್ವಾವಲಂಬಿ ಬದುಕು ಕಂಡುಕೊಳ್ಳಲು ಮುಂದಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ