ಡಿ. 22ಕ್ಕೆ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್; ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು?

ಹೆಚ್.ಡಿ. ರೇವಣ್ಣ ಅವರ ಸಂಕಟದ ನಡುವೆಯೂ ಅವರ ಉಪಸ್ಥಿತಿಯಲ್ಲಿ ಮೊದಲ ಬಾರಿಗೆ ರಾಹು ಕಾಲದಲ್ಲೇ ಸಂಪುಟ ಸಭೆ ಇಂದು ನಡೆಯಿತು. ಇದಲ್ಲದೆ, ಸಂಪುಟ ಸಭೆ, ಕೈ ಹಿರಿಯರ ಸಭೆ, ಸಿದ್ದರಾಮಯ್ಯ ಜೊತೆ ಕೈ ಮುಖಂಡರ ಲಾಬಿ ಹೀಗೆ ಬುಧವಾರವಿಡೀ ರಾಜಕೀಯ ಚಟುವಟಿಕೆ ನಡೆಯಿತು.

Vijayasarthy SN | news18
Updated:December 5, 2018, 11:38 PM IST
ಡಿ. 22ಕ್ಕೆ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್; ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು?
ಸಾಂದರ್ಭಿಕ ಚಿತ್ರ
Vijayasarthy SN | news18
Updated: December 5, 2018, 11:38 PM IST
- ಶ್ರೀನಿವಾಸ ಹಳಕಟ್ಟಿ / ಜನಾರ್ದನ ಹೆಬ್ಬಾರ್ / ರಮೇಶ್ ಹಿರೇಜಂಬೂರು, 

ಬೆಂಗಳೂರು(ಡಿ. 05): ಅತ್ತ ಧರಿ ಇತ್ತ ಪುಲಿ ಎಂಬಂತಿದ್ದ ಸಂಪುಟ ವಿಸ್ತರಣೆಯ ನಿರ್ಧಾರ ಕೊನೆಗೂ ಆಗಿದೆ. ಡಿಸೆಂಬರ್ 22ಕ್ಕೆ ವಿಸ್ತರಣೆಯ ದಿನಾಂಕ ಫಿಕ್ಸ್ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸದಾಶಿವನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಇಂದು ನಡೆದ ಮೈತ್ರಿ ಸರಕಾರದ ಸಮನ್ವಯ ಸಭೆಯಲ್ಲಿ ಈ ನಿರ್ಧಾರವಾಗಿದೆ. ಡಿಸೆಂಬರ್ 9ಕ್ಕೆ ಸಂಪುಟ ವಿಸ್ತರಣೆ ಮಾಡಲು ಈ ಮೊದಲು ನಿರ್ಧರಿಸಲಾಗಿದ್ದರೂ, ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹಾಗೂ ಡಿ. 19ರವರೆಗೂ ಇರುವ ಬೆಳಗಾವಿ ಅಧಿವೇಶನ ಮುಗಿಸಿಕೊಂಡು ಸಂಪುಟ ವಿಸ್ತರಣೆಗೆ ಕೈಹಾಕಲು ಸಭೆಯಲ್ಲಿ ಒಮ್ಮತದ ನಿರ್ಧಾರ ಬರಲಾಯಿತು. ರಾಹುಲ್ ಗಾಂಧಿ ಅವರೂ ಈ ದಿನಾಂಕಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯ ದಿನದಂದೇ ನಿಗಮ ಮಂಡಳಿಗಳ ನೇಮಕ ಹಾಗೂ ಸಂಸದೀಯ ಕಾರ್ಯದರ್ಶಿಗಳು, ರಾಜಕೀಯ ಕಾರ್ಯದರ್ಶಿಗಳ ನೇಮಕ ಕೂಡ ನಡೆಯಲು ನಿಶ್ಚಯಿಸಲಾಗಿದೆ. ನಿಗಮ ಮಂಡಳಿಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ 20:10 ಪ್ರಮಾಣದಲ್ಲಿ ಹಂಚಿಕೊಳ್ಳುವ ಲೆಕ್ಕಾಚಾರಕ್ಕೆ ಬರಲಾಗಿದೆ. ಹಾಗೆಯೇ, ಸಂಸದೀಯ ಕಾರ್ಯದರ್ಶಿ ನೇಮಕಕ್ಕೂ 3:1 ಸೂತ್ರ ಅಳವಡಿಸುವ ಸಾಧ್ಯತೆ ಇದೆ.

ಈ ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆಯ ಜೊತೆಗೆ ಇನ್ನೂ ಕೆಲವಾರು ವಿಷಯಗಳ ಚರ್ಚೆಯಾಯಿತು. ಆಪರೇಷನ್ ಕಮಲದ ಬಗ್ಗೆ ಗಂಭೀರ ವಿಚಾರ ವಿನಿಮಯವಾಯಿತು. ಬಿಜೆಪಿಯ ತಂತ್ರಕ್ಕೆ ಪ್ರತಿಯಾಗಿ ಕಾನೂನು ಮತ್ತು ಆಡಳಿತಾತ್ಮಕವಾಗಿ ಆಪರೇಷನ್ ಕಮಲ ತಡೆಯಲು ರಣತಂತ್ರ ರೂಪಿಸುವ ಚರ್ಚೆ ನಡೆಯಿತು.

ಇನ್ನು, ವಿಧಾನಪರಿಷತ್ ಸಭಾಪತಿ ಸ್ಥಾನ ಯಾರಿಗೆ ಹೋಗಬೇಕು ಎಂಬ ಗೊಂದಲಕ್ಕೆ ಈ ಸಭೆಯಲ್ಲಿ ಪರಿಹಾರ ಸಿಗಲಿಲ್ಲ. ಹಂಗಾಮಿ ಸಭಾಪತಿ ಹಾಗೂ ಜೆಡಿಎಸ್ ಪಕ್ಷದ ಬಸವರಾಜ್ ಹೊರಟ್ಟಿ ಅವರ ಬಗ್ಗೆ ಬಹುತೇಕ ಸದಸ್ಯರು ಒಲವು ಹೊಂದಿರುವುದರಿಂದ ಅವರೇ ಆಗಲಿ ಎಂಬುದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ವಾದ. ಆದರೆ, ಪರಿಷತ್ ಸಭಾಪತಿ ಸ್ಥಾನ ಕಾಂಗ್ರೆಸ್ ಪಕ್ಷಕ್ಕೇ ಇರಲಿ ಎಂಬುದು ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಅವರು ಪಟ್ಟು ಹಿಡಿದರು.

ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಜಿ. ಪರಮೇಶ್ವರ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಡ್ಯಾನಿಷ್ ಅಲಿ, ವೇಣುಗೋಪಾಲ್ ರಾವ್ ಅವರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೆಳಗ್ಗೆಯಿಂದ ಸಂಜೆಯವರೆಗೂ ಮೈತ್ರಿ ಸರಕಾರದಲ್ಲಿ ಚಟುವಟಿಕೆ ಗರಿಗೆದರಿತ್ತು. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ, ಸಿದ್ದರಾಮಯ್ಯ ನಿವಾಸಕ್ಕೆ ಕಾಂಗ್ರೆಸ್ ಸಚಿವಾಕಾಂಕ್ಷಿಗಳ ಭೇಟಿ, ಸಮನ್ವಯ ಸಭೆಯಲ್ಲಿ ತಯಾರಿ ನಡೆಸಲು ಹಿರಿಯ ಕಾಂಗ್ರೆಸ್ಸಿಗರ ಸಭೆ ಹೀಗೆ ಇಡೀ ಬುಧವಾರವು ಮೈತ್ರಿ ಸರಕಾರಕ್ಕೆ ಚಟುವಟಿಕೆಯ ದಿನವಾಗಿತ್ತು.

ಜಾರಕಿಹೊಳಿ ಗೈರು:
ಇವತ್ತಿನ ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಗೈರಾಗಿದ್ದು ಸಿಎಂ ಅವರ ಕಣ್ಣನ್ನು ಕೆಂಪಾಗಿಸಿತು. ಸಚಿವ ಸಂಪುಟ ಸಭೆಗೆ ಸಚಿವರು ಗೈರಾಗೋದು ಸರಿಯಲ್ಲ.  ಪ್ರತಿಬಾರಿ ಗೈರಾದ್ರೆ ತಪ್ಪು ಸಂದೇಶ ರವಾನೆಯಾಗತ್ತೆ. ಎಲ್ಲರು ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು,  ಸಚಿವ ರಮೇಶ್ ಜಾರಕಿಹೊಳಿ ಹೆಸರು ಪ್ರಸ್ತಾಪ ಮಾಡದೆಯೇ ಅಸಮಾಧಾನ ಹೊರಹಾಕಿದರು.  ಅದಕ್ಕು ಮುನ್ನ ರಾಹುಕಾಲದಲ್ಲಿ ಸಂಪುಟ ಸಭೆ ಆರಂಭಿಸೋದು ಬೇಡ ಎಂದು ಸಿಎಂ ಕುಮಾರಸ್ವಾಮಿ ಅವರನ್ನ ಸಚಿವ ರೇವಣ್ಣ ಬೇಗ ಬನ್ನಿ ಎಂದು ಕರೆದ ಘಟನೆಯೂ ನಡಯಿತು.

ರೇವಣ್ಣನವರ ರಾಹು ಕಾಲದ ಫಜೀತಿ:

ಸಚಿವ ಸಂಪುಟ ಸಭೆಗೆ ಮುನ್ನ ಸಿಎಂ ಕುಮಾರಸ್ವಾಮಿ ಅವರು ದೇವರಾಜು ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಧ್ಯಾಹ್ನ 12ಗಂಟೆಗೆ ರಾಹು ಕಾಲ ಶುರುವಾಗುವುದರಿಂದ ಆ ಘಳಿಗೆಯೊಳಗೆಯೇ ಸಂಪುಟ ಸಭೆ ಆರಂಭಿಸಬೇಕೆಂಬುದು ಸಚಿವ ಹೆಚ್.ಡಿ. ರೇವಣ್ಣನವರ ತವಕ. ಕಾರ್ಯಕ್ರಮವನ್ನು ಮಧ್ಯದಲ್ಲೇ ಬಿಟ್ಟು ಬೇಗ ಬರುವಂತೆ ತಮ್ಮ ಸೋದರ ಕುಮಾರಸ್ವಾಮಿ ಅವರಿಗೆ ರೇವಣ್ಣ ಪದೇ ಪದೇ ಸನ್ನೆ ಮಾಡಿ ಸೂಚನೆ ಕೊಡುತ್ತಿದ್ದರು. ಆದರೆ, ಕಾರ್ಯಕ್ರಮ ಬಿಟ್ಟು ಬರಲು ಮುಖ್ಯಮಂತ್ರಿಗಳು ಒಪ್ಪಲೇ ಇಲ್ಲ. ಕೊನೆಗೆ ರಾಹುಕಾಲದಲ್ಲೇ ಸಚಿವ ಸಂಪುಟದ ಸಭೆ ನಡೆಯಿತು. ಆ ಸಂದರ್ಭದಲ್ಲಿ ರೇವಣ್ಣಗೆ ಆದ ಫಜೀತಿ ಆ ದೇವರಿಗೇ ಪ್ರೀತಿ..! ರೇವಣ್ಣ ಯಾವತ್ತೂ ಕೂಡ ರಾಹು ಕಾಲದಲ್ಲಿ ಸಭೆ ಪ್ರಾರಂಭಿಸಲು ಬಿಟ್ಟವರಲ್ಲ. ಆದರೆ, ರೇವಣ್ಣ ಉಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ರಾಹುಕಾಲದಲ್ಲಿ ಸಭೆ ಪ್ರಾರಂಭವಾಗಿದ್ದು.

ಸಂಪುಟ ಸಭೆಯಲ್ಲಿ 34 ವಿಷಯಗಳ ಚರ್ಚೆ:

ಸಂಪುಟ ಸಭೆಯಲ್ಲಿ ಪ್ರಮುಖ 34 ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ತೆಗೆದುಕೊಳ್ಳಲಾದ ಕೆಲ ಪ್ರಮುಖ ನಿರ್ಣಯಗಳು ಇಂತಿವೆ:

* RTE ಕಾಯ್ದೆಗೆ ತಿದ್ದುಪಡಿ ಮಾಡಲು ಸಂಪುಟ ಸಮ್ಮತಿ
* ಸರ್ಕಾರಿ ಶಾಲೆಗಳಿಲ್ಲದೆಡೆ ಮಾತ್ರ ಶುಲ್ಕ ಭರ್ತಿ
* 6ನೇ ವೇತನ ಆಯೋಗದ ಪ್ರಮುಖ ಶಿಫಾರಸು ಜಾರಿ
* ಡ್ರೈವರ್ ಭತ್ಯೆ, ಅಸಿಸ್ಟೆಂಟ್ ಭತ್ಯೆ ಹೆಚ್ಚಳ
* ಸರ್ಕಾರಕ್ಕೆ 450 ಕೋಟಿ ಹೆಚ್ಚುವರಿ ಹೊರೆ
* ಪ್ರವಾಸಿ ತಾಣ ತೋರಿಸುವ ಚಿತ್ರಗಳಿಗೆ ಪ್ರೋತ್ಸಾಹ ಧನ
* ಚಿತ್ರಗಳಿಗೆ 1ರಿಂದ 2.5 ಕೋಟಿ ರೂ. ಪ್ರೋತ್ಸಾಹ ಧನ
* ವಿದ್ಯಾರ್ಥಿನಿಯರ ಕಾಲೇಜು ಶುಲ್ಕ ಭರಿಸಲು ನಿರ್ಧಾರ
* ಪಿಯು, ಪದವಿ ಕಾಲೇಜು ವಿದ್ಯಾರ್ಥಿಗಳ ಶುಲ್ಕ
* ವಾರ್ಷಿಕ 95 ಕೋಟಿ ರೂ ವೆಚ್ಚ ಭರಿಸಲು ನಿರ್ಧಾರ
* ಬೀದರ್ ಸಕ್ಕರೆ ಕಾರ್ಖಾನೆಗೆ 20 ಕೋಟಿ ಸಾಲ,
* ಘಟಪ್ರಭಾ ನಾಲೆ ಆಧುನೀಕರಣಕ್ಕೆ 523 ಕೋ.,
* ಕೆಆರ್ ​ನಗರದ 13 ಕೆರೆಗೆ ನೀರು ತುಂಬುವ ಕಾರ್ಯ
* 15 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬು ಕಾರ್ಯ
* ಭೂ ಪರಿವರ್ತನಾ ನಿಯಮಾವಳಿ ಸರಳೀಕರಣ
* ಕೈಗಾರಿಕಾ ಉದ್ದೇಶಕ್ಕೆ ನೀಡಲಾಗುವ ಭೂಮಿ
* ಕನಕಪುರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು
* ಬೆಂಗಳೂರಿನಲ್ಲಿ ಏರೋ ಶೋ ಆಯೋಜನೆ ಹಿನ್ನೆಲೆ
* ಏರ್​ಪೋರ್ಟ್ ಸುತ್ತ ರಸ್ತೆ ಅಭಿವೃದ್ಧಿಗೆ 30 ಕೋ. ರೂ.

ಇವು ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು. ಸಭೆ ಮುಗಿದ ಬಳಿಕವೂ ಸಿಎಂ ಕುಮಾರಸ್ವಾಮಿ ಕೆಲ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಸರ್ಕಾರ ಕೆಡವಲು ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಅಲ್ಲದೆ ಬೆಳಗಾವಿ ಅಧಿವೇಶನಕ್ಕೆ ಸಂಪೂರ್ಣ ಸಿದ್ದತೆಯೊಂದಿಗೆ ಬರಬೇಕು. ಇಲಾಖೆಯ ರಿಪೋರ್ಟ್​ ಕಾರ್ಡ್​ ಹಿಡಿದು ಬರಬೇಕು ಎಂದು ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿ ಸಚಿವರುಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಚರ್ಚೆ ನಡೆದಿತ್ತಾದ್ದರಿಂದ ಗೌಪ್ಯತೆ ಕಾಪಾಡಲು ಅಧಿಕಾರಿಗಳನ್ನು ಹೊರಕಳುಹಿಸಿ ಸಚಿವರುಗಳು ಮಾತ್ರ ಭಾಗಿಯಾಗಿದ್ದು ವಿಶೇಷ. ಕುಮಾರಸ್ವಾಮಿ, ಜಿ. ಪರಮೇಶ್ವರ್, ಡಿಕೆ ಶಿವಕುಮಾರ್, ಹೆಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಮೊದಲಾದ ಕೆಲ ಸಚಿವರು ಆಪರೇಷನ್ ಕಮಲದ ಕುರಿತು ಗಂಭೀರವಾಗಿ ಚರ್ಚೆ ನಡೆಸಿದರೆನ್ನಲಾಗಿದೆ.

ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸವು ಬೆಳಗ್ಗೆಯಿಂದಲೂ ರಾಜಕೀಯ ಶಕ್ತಿ ಕೇಂದ್ರದಂತಿತ್ತು. ಸಂಪುಟ ವಿಸ್ತರಣೆ ಬಹುತೇಕ ಖಚಿತವಾಗಿದ್ದು, ಸಮನ್ವಯ ಸಮಿತಿಯಲ್ಲಿ ಅದರ ಚರ್ಚೆ ನಡೆಯುತ್ತದೆ ಎಂಬ ಸುಳಿವನ್ನು ಪಡೆದ ಕಾಂಗ್ರೆಸ್​ನ ಸಚಿವಾಕಾಂಕ್ಷಿಗಳು ಸಿದ್ದರಾಮಯ್ಯನವರ ನಿವಾಸಕ್ಕೆ ದೌಡಾಯಿಸಿ ಲಾಬಿ ನಡೆಸಲು ಯತ್ನಿಸಿದರು. ಪಿ.ಟಿ. ಪರಮೇಶ್ವರ್ ನಾಯ್ಕ್, ಅಜೇಯ್ ಸಿಂಗ್, ಅಬ್ಬಯ್ಯ ಪ್ರಸಾದ್, ಯು.ಟಿ. ಖಾದರ್, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಮಾಗಡಿಯ ಬಾಲಕೃಷ್ಣ ಅವರು ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿದ ಕಾಂಗ್ರೆಸ್ ಮುಖಂಡರು.

ಕೆಪಿಸಿಸಿ ಕಚೇರಿಯಲ್ಲಿ ಕೈ ಸಭೆ:

ಸಮನ್ವಯ ಸಭೆಗೆ ಅಣಿಗೊಳ್ಳಲು ಕಾಂಗ್ರೆಸ್ ಪಕ್ಷವು ಒಂದು ಪೂರ್ವಬಾವಿ ಸಭೆ ನಡೆಸಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್​ನ ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಚಿವ ಆರ್.ವಿ. ದೇಶಪಾಂಡೆ, ಡಿ.ಕೆ ಶಿವಕುಮಾರ್, ಸಂಸದ ಕೆ.ಹೆಚ್.ಮುನಿಯಪ್ಪ, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಸಿ.ಎಂ ಇಬ್ರಾಹಿಂ ಸೇರಿದಂತೆ ಹಲವರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸಮನ್ವಯ ಸಮಿತಿಯಲ್ಲಿ ಯಾವ್ಯಾವ ವಿಚಾರ ಪ್ರಸ್ತಾಪಿಸಬೇಕು, ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು, ನಿಗಮ ಮಂಡಳಿಗಳ ನೇಮಕದಲ್ಲಿ ಕಾಂಗ್ರೆಸ್​ಗೆ ಪಾಲು ಎಷ್ಟು ಇರಬೇಕು, ಸಚಿವಾಕಾಂಕ್ಷಿಗಳ ಅತೃಪ್ತಿ ಹೇಗೆ ಶಮನ ಮಾಡಬೇಕು ಇತ್ಯಾದಿಗಳನ್ನ ಈ ಸಭೆಯಲ್ಲಿ ಚರ್ಚಿಸಲಾಯಿತು.

ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಕಾಂಗ್ರೆಸ್ ಮುಖಂಡರ ತಂಡವೊಂದು ಕೆಪಿಸಿಸಿ ಕಚೇರಿಗೆ ಬಂದು ಜಿಲ್ಲೆಯಲ್ಲಿ ಕೈ ಪಾಳಯಕ್ಕೆ ಎದುರಾಗಿರುವ ಸಮಸ್ಯೆಗಳನ್ನ ನಿವೇದಿಸಿಕೊಂಡಿತು. ಜಿಲ್ಲಾ ಮಟ್ಟದಲ್ಲಿ ನಮ್ಮ ಕೆಲಸಗಳು ಆಗುತ್ತಿಲ್ಲ. ನಮ್ಮ ಕಾರ್ಯಕರ್ತರ ಕೆಲಸಗಳೂ ಆಗ್ತಿಲ್ಲ. ಎಲ್ಲವೂ ಜೆಡಿಎಸ್ ನಾಯಕರು, ಕಾರ್ಯಕರ್ತರದ್ದೇ ದರ್ಬಾರು ನಡೆದಿದೆ. ಕೈ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆಯುತ್ತಿಲ್ಲ. ಸುಖಾಸುಮ್ಮನೆ ಜೆಡಿಎಸ್ ಕಾರ್ಯಕರ್ತರು ಕಿರಿಕಿರಿ ಮಾಡ್ತಾರೆ. ಬೂತ್ ಮಟ್ಟದಲ್ಲೂ ನಮ್ಮವರಿಗೆ ಕಿರಿಕಿರಿ ಮಾಡ್ತಾರೆ. ಚಿಕ್ಕಪುಟ್ಟ ಗುತ್ತಿಗೆ ಕೂಡ ಅವರಿಗೆ ಸಿಗುತ್ತಿಲ್ಲ. ಹೀಗೆ ಆದ್ರೆ ಮುಂದೆ ಪಕ್ಷ ಬಲಪಡಿಸೋದು ಹೇಗೆ? ಜೆಡಿಎಸ್ ಸಚಿವರು, ಶಾಸಕರು ಕೂಡ ಹಗೆ ಸಾಧಿಸುತ್ತಿದ್ದಾರೆ. ಪದೇ ಪದೇ ನಿಮ್ಮ‌ ಗಮನಕ್ಕೆ ತರುತ್ತಿದ್ದೇವಾದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಹೀಗೇ ಮುಂದುವರಿದರೆ ಎಲ್ಲವೂ ಕೈಮೀರಿ ಹೋಗುತ್ತದೆ ಎಂದು ಮಂಡ್ಯ ಕಾಂಗ್ರೆಸ್ಸಿಗರು ಅಲವತ್ತುಕೊಂಡರು. ಮಂಡ್ಯದ ಜಿಲ್ಲೆ ಸಮಸ್ಯೆಗಳನ್ನು ಸಮನ್ವಯ ಸಮಿತಿಯಲ್ಲಿ ಪ್ರಸ್ತಾಪಿಸಿ ಒಂದು ಪರಿಹಾರ ಹುಡುಕಿಕೊಡಿ ಎಂದು ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್ ಅವರಲ್ಲಿ ಕೈ ಮುಖಂಡರು ಮನವಿ ಮಾಡಿಕೊಂಡರು.
First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...