ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ: ಸಚಿವ ಎಸ್.ಟಿ.ಸೋಮಶೇಖರ್

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಹೈನುಗಾರಿಕೆಗೆ 2 ಲಕ್ಷ ರೂಪಾಯಿ ಸಾಲವನ್ನು ಆತ್ಮನಿರ್ಭರ ಅಡಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ರೀತಿಯಲ್ಲಿ ರಸಗೊಬ್ಬರಕ್ಕೆ ತೊಂದರೆಯಾಗುತ್ತಿಲ್ಲ. ಎಲ್ಲವನ್ನೂ ಸರಾಗವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

  • Share this:

ಬೆಂಗಳೂರು; ಪ್ರಸಕ್ತ ಸಾಲಿನಲ್ಲಿ ರೈತರಿಗೆ ನೀಡಬೇಕೆಂದಿರುವ ಬೆಳೆ ಸಾಲದ ಗುರಿಯನ್ನು ತಲುಪುವ ನಿಟ್ಟಿನಲ್ಲಿ “ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ” ಎಂಬ ಧ್ಯೇಯದೊಂದಿಗೆ ರಾಜ್ಯದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ, ಪರಿಶೀಲಿಸಿ, ಎಲ್ಲಾ ಅಂಕಿ-ಅಂಶಗಳನ್ನು ಪಡೆಯಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್  ಹೇಳಿದರು. ಹೊಸಕೋಟೆ ಹಾಗೂ ದೇವನಹಳ್ಳಿಯ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.,(ಬಿಡಿಸಿಸಿ) ಶಾಖೆಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಪ್ರಗತಿ ಪರಿಶೀಲನೆ ನಡೆಸಿ ಸಹಕಾರ ಸಚಿವರು ಮಾತನಾಡಿದರು.


ರಾಜ್ಯದ 24.50 ಲಕ್ಷ ರೈತರಿಗೆ ಶೀಘ್ರವಾಗಿ ರೂ 15,300 ಕೋಟಿ ಬೆಳೆ ಸಾಲವನ್ನು ಫೆಬ್ರವರಿ ಮಾಸಾಂತ್ಯದೊಳಗೆ ಸಂಪೂರ್ಣ ಸಾಲ ವಿತರಣೆ ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ 19.50 ಲಕ್ಷ ರೈತರಿಗೆ 12.50 ಸಾವಿರ ಕೋಟಿ ರೂಪಾಯಿ ಸಾಲವನ್ನು ವಿತರಣೆ ಮಾಡಲಾಗಿದೆ. ಯಾವ ಯಾವ ವಿಭಾಗದಲ್ಲಿ ಬಾಕಿ ಇದೆ, ಯಾವ ಸಾಲ ನೀಡಿಕೆಯಲ್ಲಿ ಹಿನ್ನಡೆಯಾಗಿದೆ, ಎಂಬ ಬಗ್ಗೆ ಮಾಹಿತಿ ಕಲೆಹಾಕಿ, ಶೀಘ್ರದಲ್ಲಿ ಗುರಿ ಮುಟ್ಟುವಂತೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.


ನೂರಕ್ಕೆ ನೂರು ಗುರಿ ಮುಟ್ಟುವತ್ತ ಹೆಜ್ಜೆಯಿಟ್ಟಿದ್ದು, ಈಗಾಗಲೇ ಮಂಡ್ಯದ ಪಾಂಡವಪುರ, ನಾಗಮಂಗಲ, ಮೈಸೂರಿನ ಟಿ.ನರಸೀಪುರ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿ ಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂಪೂರ್ಣ ಮಾಹಿತಿ ಪಡೆದು, ಸೂಕ್ತ ಮಾರ್ಗದರ್ಶನ, ಸೂಚನೆ ನೀಡಿದ್ದೇನೆ ಎಂದರು.


ಸರ್ಕಾರವು ಜನಪರ ಹಾಗೂ ರೈತಪರವಾಗಿದ್ದು, ಕೊರೋನಾ ಸಂಕಷ್ಟದ ಕಾಲದಲ್ಲಿ ಸಾಲ ಕೊಡುವುದೇ ಕಷ್ಟ ಎಂಬ ಸ್ಥಿತಿಯಲ್ಲಿಯೂ, ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಳೆದ ವರ್ಷಕ್ಕಿಂತ ಒಂದೂವರೆ ಸಾವಿರ ಕೋಟಿಗೂ ಅಧಿಕ ಅಂದರೆ 15,300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆಯಿಂದ ಹಾಕಿಕೊಳ್ಳಲಾಗಿತ್ತು. ಅದರಂತೆ ಒಟ್ಟು 24.50 ಲಕ್ಷ ರೈತರಿಗೆ ಸಾಲ ವಿತರಣೆ ಮಾಡುವ ಹೊಣೆಯನ್ನು ಅಪೆಕ್ಸ್, 21 ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಿಗೆ ವಹಿಸಲಾಗಿತ್ತು. ಈಗಾಗಲೇ 19,17,334 ರೈತರಿಗೆ 12420.10 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.


ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಿಸಿಸಿ ಬ್ಯಾಂಕ್ ಒಟ್ಟಾರೆಯಾಗಿ ವಿತರಣೆ ಮಾಡಿರುವ ಸಾಲ, ಮರುಪಾವತಿ ಹಾಗೂ ಹಾಕಿಕೊಂಡಿರುವ ಗುರಿಗಳ ಬಗ್ಗೆ ಸಚಿವರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ಅಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮಂದಿಗೆ 550 ಕೋಟಿ ರೂಪಾಯಿ ಸಾಲ ನೀಡಬೇಕೆಂಬ ಗುರಿ ಹೊಂದಲಾಗಿತ್ತು. ಈವರೆಗೆ 80060 ರೈತರಿಗೆ 421 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಇದನ್ನು ಓದಿ: ಖಾಸಗಿ ಶಾಲಾ ಶುಲ್ಕ ಭರಿಸಲು 3 ಹಂತದ ಸೂತ್ರ ಶಿಫಾರಸು, ಶೀಘ್ರವೇ ಮೊದಲನೇ ಸೂತ್ರ ಪ್ರಕಟ; ಸಚಿವ ಸುರೇಶ್ ಕುಮಾರ್


ಪ್ರಸಕ್ತ ಆರ್ಥಿಕ ವರ್ಷದೊಳಗೆ ಹಾಕಿಕೊಂಡ ಗುರಿ ಮುಟ್ಟುವ ಮೂಲಕ ಶೇ.100ರಷ್ಟು ಸಾಲ ವಿತರಣೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಬ್ಯಾಂಕ್ ಗಳ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮ ಗುರಿಯನ್ನು ಮುಟ್ಟಿದೆ.  ಹೊಸಕೋಟೆ ಶಾಖೆಯಲ್ಲಿ ಇದುವರೆಗೆ ನೀಡಿರುವ ಕೃಷಿ ಮತ್ತು ಕೃಷಿಯೇತರ ಸಾಲಗಳ ಮೊತ್ತ 34.60 ಕೋಟಿ ರೂಪಾಯಿಗಳಾಗಿವೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದಾಗ ಪ್ರತಿಕ್ರಿಯಿಸಿದ ಸಚಿವರು ಮಧ್ಯಮಾವಧಿ ಸಾಲದಡಿ ಹೈನುಗಾರಿಕೆಗೆ, ಕೋಳಿ ಸಾಕಾಣಿಕೆಗೆ, ಕುರಿ ಸಾಕಾಣಿಕೆಗೆ ಹಾಗೂ ನೇಕಾರಿಕೆಗೆ ಸಾಲ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ಪಕ್ಷದವರೂ ಆಯ್ಕೆಗೊಂಡಿದ್ದರೂ ಪ್ರಸ್ತುತವಾಗಿ ಸಹಕಾರ ರಂಗದಲ್ಲಿ ಪಕ್ಷಭೇದ ಮರೆತು ತಂಡವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಇದೇ ರೀತಿ ತಂಡ ಮುಂದುವರಿದರೆ ಸಹಕಾರ ಇಲಾಖೆ ಶೇಕಡಾ 100ರಷ್ಟು ಸಾಧನೆ ಮಾಡಲಿದೆ ಎಂದು ಹೇಳಿದರು.


ಹೈನುಗಾರಿಕೆಗೆ 2 ಲಕ್ಷ ರೂಪಾಯಿ ಸಾಲವನ್ನು ಆತ್ಮನಿರ್ಭರ ಅಡಿ ನೀಡಲಾಗುತ್ತಿದೆ. ರೈತರಿಗೆ ಯಾವುದೇ ರೀತಿಯಲ್ಲಿ ರಸಗೊಬ್ಬರಕ್ಕೆ ತೊಂದರೆಯಾಗುತ್ತಿಲ್ಲ. ಎಲ್ಲವನ್ನೂ ಸರಾಗವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

First published: