Cooking Oil Price: ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ; ಸೂರ್ಯಕಾಂತಿ ಬೆಳೆಯಲು ಮುಂದಾದ ರೈತರು

ಸೂರ್ಯಕಾಂತಿಗೆ ಎಪಿಎಂಸಿಯಲ್ಲಿ ಪ್ರತಿಕ್ವಿಂಟಾಲ್ ಗೆ 5000-6000 ರೂಪಾಯಿ ಏರಿಕೆಯಾಗಿದೆ. ಈಗ ಸೂರ್ಯಕಾಂತಿಗೆ ಡಿಮ್ಯಾಂಡ್ ಇರುವುದರಿಂದ ರೈತರು ಸೂರ್ಯಕಾಂತಿ ಬೆಳೆಯಲು ಮುಂದಾಗಿದ್ದಾರೆ.

ಸೂರ್ಯಕಾಂತಿ ಎಣ್ಣೆ

ಸೂರ್ಯಕಾಂತಿ ಎಣ್ಣೆ

  • Share this:
ಕೊಪ್ಪಳ(ಜೂ.26): ಒಂದು ಕಡೆ ತೈಲ ಬೆಲೆ ಏರಿಕೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದೇ ವೇಳೆ, ದಿನ ನಿತ್ಯ ಬಳಕೆಯ ವಸ್ತುಗಳೂ ಸಹ ದುಬಾರಿಯಾಗಿವೆ. ಅದರಲ್ಲಿಯೂ ಅಡುಗೆ ಎಣ್ಣೆಯ ದರವು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿದ್ದಂತೆ ಸೂರ್ಯಕಾಂತಿ ಬಿತ್ತನೆಯ ಪ್ರಮಾಣ ಏರಿಕೆಯಾಗಿದೆ. ಈ ಮಧ್ಯೆ ಸೂರ್ಯಕಾಂತಿ ಬೀಜಕ್ಕೆ ಡಿಮ್ಯಾಂಡ್​​ ಅಧಿಕವಾಗಿದ್ದು ಬೀಜ ಒದಗಿಸಲು ಜಿಲ್ಲಾಡಳಿತ ಹೆಣಗಾಡುತ್ತಿದೆ.

ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿ ಅಧಿಕ ಮಳೆಯಾಗಿದೆ. ವಾಡಿಕೆಯಂತೆ 140 ಎಂ ಎಂ ಮಳೆಯಾಗಬೇಕಿತ್ತು, ಆದರೆ ಆಗಿದ್ದು 169 ಎಂ ಎಂ ಮಳೆ ಇದರಿಂದಾಗಿ ವಾಡಿಕೆಗಿಂತ ಶೇ. 21 ರಷ್ಟು ಅಧಿಕ ಮಳೆಯಾಗಿದೆ. ಈ ಬಾರಿ ಮುಂಗಾರು ಪೂರ್ವ ಮಳೆಯಾಗಿದ್ದರಿಂದ ರೈತರು ಬೇಗನೆ ಬಿತ್ತನೆ ಮಾಡಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ 8831 ಹೆಕ್ಟರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆಯ ಗುರಿ ಇತ್ತು. ಆದರೆ ಈಗಾಗಲೇ 11620 ಹೆಕ್ಟರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆಯಾಗಿರುವುದು, ಪ್ರತಿ ಕೆಜಿ ಸೂರ್ಯಕಾಂತಿ ಎಣ್ಣೆ 180 ರಿಂದ 200 ರೂಪಾಯಿಯಾಗಿದೆ. ಇದೇ ವೇಳೆ ಸೂರ್ಯಕಾಂತಿಗೆ ಎಪಿಎಂಸಿಯಲ್ಲಿ ಪ್ರತಿಕ್ವಿಂಟಾಲ್ ಗೆ 5000-6000 ರೂಪಾಯಿ ಏರಿಕೆಯಾಗಿದೆ. ಈಗ ಸೂರ್ಯಕಾಂತಿಗೆ ಡಿಮ್ಯಾಂಡ್ ಇರುವುದರಿಂದ ರೈತರು ಸೂರ್ಯಕಾಂತಿ ಬೆಳೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ:C.P.Yogeshwar: ಪರೀಕ್ಷೆ ಬರೆದು ರಿಸಲ್ಟ್ ನೋಡಲು ದೆಹಲಿಗೆ ಬಂದ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

ಜಿಲ್ಲೆಯಲ್ಲಿ ಸೂರ್ಯಕಾಂತಿ ಬಿತ್ತನೆ ಪ್ರದೇಶ ಅಧಿಕಗೊಂಡ ಹಿನ್ನೆಲೆಯಲ್ಲಿ ಬೀಜಗಳ ಕೊರತೆ ಕಂಡು ಬಂದಿದೆ. ಜಿಲ್ಲೆಗೆ ಒಟ್ಟು 1086 ಕ್ವಿಂಟಾಲ್ ಸೂರ್ಯಕಾಂತಿ ಬೀಜ ಅವಶ್ಯವಿದೆ. ಅದರಲ್ಲಿ ಈಗ 222 ಕ್ವಿಂಟಾಲ್ ಬೀಜ ಸಂಗ್ರಹವಾಗಿದೆ. ಈಗಾಗಲೇ 155 ಕ್ವಿಂಟಾಲ್ ಬೀಜ ಮಾರಾಟವಾಗಿದೆ. ಸೂರ್ಯಕಾಂತಿ ಬೀಜಗಳ ಕೊರತೆಗೆ ಪ್ರಯೋಗಾಲಯಲ್ಲಿ ಬೀಜಗಳ ಗುಣಮಟ್ಟದ ಕಳಪೆಯಾಗಿದೆ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡಿದ್ದು ಹಾಗೂ ರೈತರು ನಿಗದಿತ ಪ್ರದೇಶಕ್ಕಿಂತ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರ ಕಾರಣಕ್ಕಾಗಿ ಬೀಜಗಳ ಕೊರತೆ ಇದೆ. ಆದರೂ ಜಿಲ್ಲೆಯಲ್ಲಿ ಪಕ್ಕದ ಜಿಲ್ಲೆಗಳಿಂದ ಸೂರ್ಯಕಾಂತಿ ಬೀಜ ತರಿಸಿ ಮಾರಾಟ ಮಾಡಲಾಗಿದೆ. ಈಗ ಕೊರತೆಯನ್ನು ನೀಗಿಸಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಉಪನಿರ್ದೇಶಕರು.

ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಬೆಳೆ ಅಧಿಕವಾಗಿರುವ ಹಿನ್ನಲೆಯಲ್ಲಿ ಈಗ ಮುಂದಿನ ದಿನಗಳಲ್ಲಿ ಸೂರ್ಯಕಾಂತಿಗೆ ಉತ್ತಮ ದರ ಸಿಗುತ್ತದೆ. ಇದರಿಂದ ಬೆಳೆಗೆ ಮಾಡಿರುವ ಖರ್ಚು ಹೋಗಿ ಲಾಭವಾಗುವ ನಿರೀಕ್ಷೆಯಲ್ಲಿ ರೈತರು ಈಗ ಸೂರ್ಯಕಾಂತಿ ಬೆಳೆಯತ್ತ ವಾಲಿದ್ದಾರೆ. ಸ್ವಲ್ಪ ಖರ್ಚು ಕಡಿಮೆ ಮಾಡಬೇಕಾಗಿರುವ ಸೂರ್ಯಕಾಂತಿಯು ಉತ್ತಮ ವಾತಾವರಣವಿದ್ದರೆ ಎಕರೆಗೆ 20 ಚೀಲಕ್ಕಿಂತ ಅಧಿಕ ಇಳುವರಿ ಬರುತ್ತದೆ.

ಇದೇ ಮೊದಲ ಬಾರಿಗೆ ಅಧಿಕ ದರದಲ್ಲಿ ಸೂರ್ಯಕಾಂತಿ ಮಾರಾಟವಾಗುತ್ತಿರುವುದರಿಂದ ರೈತರು ಈಗ ಸೂರ್ಯಕಾಂತಿ ಬೆಳೆಯಲು ಮುಂದಾಗಿದ್ದಾರೆ. ಮುಖ್ಯವಾಗಿ ಈಗಿರುವ ಸೂರ್ಯಕಾಂತಿ ಎಣ್ಣೆ ದರವು ರೈತ ಬೆಳೆದ ಬೆಳೆಯ ಫಸಲು ಕೈಗೆ ಬಂದಾಗ ಸಿಕ್ಕರೆ ಅದು ಲಾಭವಾಗಲಿದೆ. ಈಗ ಡಿಮ್ಯಾಂಡ್ ಇದೆ ಎಂದು ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಿದ ರೈತನ ಫಸಲು ಬಂದಾಗ ಕಡಿಮೆಯಾದರೆ ರೈತನಿಗೆ ನಿರಾಸೆಯಾಗಲಿದೆ.
Published by:Latha CG
First published: