ಹುಬ್ಬಳ್ಳಿ ಮೂರು ಸಾವಿರ ಮಠ ಉತ್ತರಾಧಿಕಾರಿ ನೇಮಕ ವಿವಾದ: ದಿಂಗಾಲೇಶ್ವರರ ಬೆನ್ನಿಗೆ ನಿಂತಿದ್ದಾರಾ ಬಿಜೆಪಿ ನಾಯಕರು?

ಕೆಲವರ ತೀವ್ರ ಒತ್ತಡದಿಂದ ಮನನೊಂದು 2015ರಲ್ಲಿ ಪೀಠತ್ಯಾಗ ಮಾಡಿದ್ದ ಮೂಜಗು ಸ್ವಾಮೀಜಿಯನ್ನು ಭಕ್ತರ ಒತ್ತಡದ ಮೇಲೆ ಮೂರು ಸಾವಿರ ಮಠಕ್ಕೆ ವಾಪಸ್ ಕರೆ ತರಲಾಗಿತ್ತು. ಈಗ ಮತ್ತದೇ ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಚರ್ಚೆಗಳು ಮೂರು ಸಾವಿರ ಮಠದ ಆವರಣದಲ್ಲಿ ಕೇಳಿ ಬರುತ್ತಿವೆ.

news18
Updated:November 7, 2019, 12:39 PM IST
ಹುಬ್ಬಳ್ಳಿ ಮೂರು ಸಾವಿರ ಮಠ ಉತ್ತರಾಧಿಕಾರಿ ನೇಮಕ ವಿವಾದ: ದಿಂಗಾಲೇಶ್ವರರ ಬೆನ್ನಿಗೆ ನಿಂತಿದ್ದಾರಾ ಬಿಜೆಪಿ ನಾಯಕರು?
ದಿಂಗಾಲೇಶ್ವರ ಸ್ವಾಮೀಜಿ
  • News18
  • Last Updated: November 7, 2019, 12:39 PM IST
  • Share this:
ಹುಬ್ಬಳ್ಳಿ(ನ. 07): ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಲಿಂಗಾಯತ ಮಠವಾದ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿನ ಉತ್ತರಾಧಿಕಾರಿ ನೇಮಕ ವಿವಾದ ಮತ್ತೊಮ್ಮೆ ತಾರಕಕ್ಕೇರಿದೆ. ಮಠದ ಉನ್ನತ ಮಟ್ಟದ ಸಮಿತಿಯ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಯನ್ನು ಮೂರು ಸಾವಿರ ಮಠದ ಪೀಠಾಧ್ಯಕ್ಷರಾಗಿ ಮಾಡಲು ಒಂದು ಬಣ ಪ್ರಯತ್ನ ನಡೆಸುತ್ತಿದೆ. ರಾಜ್ಯದ ಕೆಲವು ಪ್ರಭಾವಿ ಸ್ವಾಮೀಜಿಗಳ ಸೂಚನೆಯಂತೆ ದಿಂಗಾಲೇಶ್ವರರಿಗೆ ಪಟ್ಟಕಟ್ಟುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಬಿಜೆಪಿ ಪ್ರಭಾವಿ ನಾಯಕರ ಬೆಂಬಲ ಕೂಡ ಇದೆ.

ದಿಂಗಾಲೇಶ್ವರ ಸ್ವಾಮೀಜಿಯನ್ನ ಪೀಠಾಧ್ಯಕ್ಷ ಮಾಡಲು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಪ್ರಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ‌. ಜಗದೀಶ್ ಶೆಟ್ಟರ್ ಬೆಂಬಲಿಗರು ದಿಂಗಾಲೇಶ್ವರರ ಪೀಠಾರೋಹಣಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ತೆರೆ ಮರೆಯಲ್ಲಿ ನಡೆಯುತ್ತಿರುವ ಈ ಕಸರತ್ತು ಸಾಕಷ್ಟು ಪರ-ವಿರೋಧ ಅಲೆಯನ್ನು ಎಬ್ಬಿಸುತ್ತಿದೆ.

ಇದನ್ನೂ ಓದಿ: ‘ಅವರನ್ನು ನಂಬಬೇಡಿ’ - ಜೆಡಿಎಸ್ ಸಖ್ಯಕ್ಕೆ ಬಿಜೆಪಿಯೊಳಗೆ ಕೆಂಗಣ್ಣು

ದಿಂಗಾಲೇಶ್ವರರ ನೇಮಕ ತಡೆಯಲು ಮಠದ ಉನ್ನತ ಮಟ್ಟದ ಸಮಿತಿಯಲ್ಲಿನ ಮತ್ತೊಂದು ಬಣ ಸಜ್ಜಾಗಿದೆ. ಹಾಲಿ ಇರುವ ಮೂಜಗು ಸ್ವಮೀಜಿಯನ್ನೇ ಪೀಠಾಧ್ಯಕ್ಷರಾಗಿ ಮುಂದುವರಿಸಬೇಕೆಂದು ಈ ಬಣ ಪಟ್ಟುಹಿಡಿದಿದೆ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ರಾತೋರಾತ್ರಿ ಸಭೆ ನಡೆಸಲಾಗಿದೆ. ಸಿಎಮ್ ಕಾನೂನು ಸಲಹೆಗಾರ ಮೋಹನ್‌ ಲಿಂಬಿಕಾಯಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಸಭೆಯಲ್ಲಿ ಭಾಗವಹಿಸಿದ್ದಾರೆ. ಮೂಜಗು ಸ್ವಾಮೀಜಿಗಳನ್ನು ಸಭೆಗೆ ಆಹ್ವಾನಿಸಿ ಪೀಠ ತ್ಯಜಿಸದಂತೆ ಮನವಿ ಮಾಡಲಾಗಿದೆ. ಯಾರ ಒತ್ತಡಕ್ಕೂ ಮಣಿಯಬಾರದು. ತಾವೇ ಪೀಠಾಧ್ಯಕ್ಷರಾಗಿ ಇರಬೇಕು ಎಂದು ಸ್ವಾಮೀಜಿಗಳಿಗೆ ತಿಳಿಸಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ಶಾಂತವಾಗಿದ್ದ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಕೆಲವರ ತೀವ್ರ ಒತ್ತಡದಿಂದ ಮನನೊಂದು 2015ರಲ್ಲಿ ಪೀಠತ್ಯಾಗ ಮಾಡಿದ್ದ ಮೂಜಗು ಸ್ವಾಮೀಜಿಯನ್ನು ಭಕ್ತರ ಒತ್ತಡದ ಮೇಲೆ ಮೂರು ಸಾವಿರ ಮಠಕ್ಕೆ ವಾಪಸ್ ಕರೆ ತರಲಾಗಿತ್ತು. ಈಗ ಮತ್ತದೇ ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಚರ್ಚೆಗಳು ಮೂರು ಸಾವಿರ ಮಠದ ಆವರಣದಲ್ಲಿ ಕೇಳಿ ಬರುತ್ತಿವೆ. ಜಗದೀಶ್ ಶೆಟ್ಟರ್ ಮತ್ತವರ ತಂಡದ ಪ್ರಯತ್ನಕ್ಕೆ ಬಸವರಾಜ್ ಹೊರಟ್ಟಿ ಟೀಮ್ ಸಡ್ಡು ಹೊಡೆದಿದೆ‌. ಮಠದ ಉನ್ನತ ಮಟ್ಟದ ಸಮಿತಿಯಲ್ಲಿ ನಾನು ಇದ್ದೇನೆ. ಸಮಿತಿ ಸಭೆ ಕರೆದು ಈ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ.‌ ಸಭೆ ಕರೆದರೆ ದಿಂಗಾಲೇಶ್ವರರನ್ನು ನೇಮಕ ಮಾಡಲು ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಬಸವರಾಜ್ ಹೊರಟ್ಟಿ ಹೇಳುತ್ತಿದ್ದಾರೆ.

(ವರದಿ: ಪರಶುರಾಮ್ ತಹಶೀಲ್ದಾರ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ