ರಾಜ್ಯ ಬಿಜೆಪಿ ಸರ್ಕಾರದ ಸಚಿವರಾದ ಕೆ.ಎಸ್.ಈಶ್ವರಪ್ಪ (Minister KS Eshwarappa) ವಿರುದ್ಧ 40% ಕಮಿಷನ್ (Commission) ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil), ಮಂಗಳವಾರ ಉಡುಪಿಯ ಶಾಂಭವಿ ಲಾಡ್ಜ್ (Shambhavi Lodge, Udupi) ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂಬ ಸಂದೇಶವನ್ನು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಪ್ (Whatsapp) ಮಾಡಿದ್ದರು. ಹೀಗಾಗಿ ಸಚಿವರಾದ ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಎಫ್ ಐ ಆರ್ (FIR) ದಾಖಲಿಸಬೇಕು ಎಂದು ಕಾಂಗ್ರೆಸ್ (Congress) ಆಗ್ರಹಿಸಿತ್ತು. ಸಂತೋಷ್ ಆತ್ಮಹತ್ಯೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೊದಲ ಆರೋಪಿ ಸ್ಥಾನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಇದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಸಂಪೂರ್ಣ ಮಾಹಿತಿ ಇಲ್ಲಿದೆ.
ಅ ಕ್ರ ನಂ: 56/2022 ಕಲಂ:306 Rw 34 IPC
ಕೃತ್ಯ ನಡೆದ ದಿನಾಂಕ: ದಿನಾಂಕ:11/04/2022 ರಂದು 23:00 ಗಂಟೆಯಿಂದ 12/04/2022 ರಂದು ಬೆಳಿಗ್ಗೆ 10:00 ಗಂಟೆ ಮಧ್ಯಾವಧಿಯಲ್ಲಿ
ತಕ್ಷೀರು ಸ್ಧಳ: ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಬಳಿ ಇರುವ ಶಾಂಭವಿ ಲಾಡ್ಜ್ ರೂಮ್ ನಂ 207 ರಲ್ಲಿ
ವರದಿ ದಿನಾಂಕ:13/04/2022 ರಂದು 02:20 ಗಂಟೆಗೆ
ಪಿರ್ಯಾದುದಾರರು: ಪ್ರಶಾಂತ ಗೌಡಪ್ಪ ಪಾಟೀಲ ಪ್ರಾಯ: 42 ವರ್ಷ ತಂದೆ:ಗೌಡಪ್ಪ ವಾಸ: ಬಡಸ ಕೆ, ಎಚ್, ಗ್ರಾಮ, ಬೆಳಗಾವಿ ತಾಲೂಕು ಮತ್ತು ಜಿಲ್ಲೆ
ಆರೋಪಿತರು: 1) ಕೆ.ಎಸ್. ಈಶ್ವರಪ್ಪ 2) ಬಸವರಾಜ್ 3) ರಮೇಶ್ 4) ಇತರರು
ಸಾರಾಂಶ : ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೆನೇಂದರೆ, ಸನ್ 2020-21 ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶ್ರೀ ಲಕ್ಷ್ಮೀ ದೇವಿ ಜಾತ್ರೆ ಜರುಗುವ ಹಿನ್ನೆಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜಾತ್ರೆಯ ವಿಷಯ ತಿಳಿಸಿ ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾನ್ಯರು ಮಾಡಿಕೊಡಬೇಕೆಂದು ಗ್ರಾಮಸ್ಥರು ಸಚಿವರಲ್ಲಿ ವಿನಂತಿಸಿಕೊಂಡಿರುತ್ತಾರೆ.
ಇದನ್ನೂ ಓದಿ: Santhosh Suicide Case: ಕೆ.ಎಸ್ ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್!? ಕಾಂಗ್ರೆಸ್ಗೆ ಸಿಕ್ಕಿದೆ ಪ್ರಬಲ ಅಸ್ತ್ರ
ಆಗ ಸಚಿವರು (ಕೆ.ಎಸ್ ಈಶ್ವರಪ್ಪನವರು) ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ನಾನು ಕಾಮಗಾರಿಗಳಿಗೆ ಎಷ್ಟೇ ಹಣ ಆದರೂ ಪರವಾಗಿಲ್ಲಾ ಕೆಲಸ ಶುರು ಮಾಡಿ ಎಂದು ಈಶ್ವರಪ್ಪನವರು ತಿಳಿಸಿದ್ದರು.
4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿ
ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಿಂಡಲಗಾ ಇವರು ಸಂತೋಷ್ ಕ ಪಾಟೀಲ್ ಈತನಿಗೆ ಕೆಲಸ ಪ್ರಾರಂಭಿಸಲು ತಿಳಿಸಿರುತ್ತಾರೆ. ಅದರಂತೆ ಸಂತೋಷ್ ಕ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸೇರಿಕೊಂಡು ಹಿಂಡಲಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿರುತ್ತಾರೆ.
ಮಾಧ್ಯಮಗಳಲ್ಲಿ ಕಮಿಷನ್ ಆರೋಪ
ಈ ಕಮೀಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿರುತ್ತಾರೆ. ಅದೇ ರೀತಿ ಗುತ್ತಿಗೆದಾರರಾದ ಸಂತೋಷ್ ಕ ಪಾಟೀಲ್ ರವರು ಮಾದ್ಯಮಗಳ ಮುಖೇನ ಮಾರ್ಚ ತಿಂಗಳಿನಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ಇವರು 40 ಪರ್ಸೆಂಟ್ ಕಮೀಷನ್ ಗೆ ಬೇಡಿಕೆ ಇಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಸಂತೋಷನು ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿರುತ್ತಾರೆ.
ಸಂತೋಷರವರಿಗೆ ಪದೇ ಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ಲ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಸಚಿವರು ಇವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು.
40 ಪರ್ಸೆಂಟ್ ಕಮಿಷನ್, ಬಿಜೆಪಿ ಹೈ ನಾಯಕರಿಗೆ ದೂರು
ಇದೇ ಬಿಲ್ ಪಾಸ್ ಆಗದ ಕಾರಣ ಆರ್.ಡಿ.ಪಿ.ಆರ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ರವರ ವಿರುದ್ಧ ವಿಡಿಯೋ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ನ್ನು ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾಧ್ಯಮಗಳ ಮುಖೇನ ವಿಷಯ ಪ್ರಸ್ತಾಪಿಸಿರುತ್ತಾರೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಯಾರೆಂಬುದೇ ನನಗೆ ಗೊತ್ತಿಲ್ಲ; ರಾಜೀನಾಮೆ ನೀಡಲ್ಲ ಎಂದ KS Eshwarappa
ಸಂತೋಷ್ ಈತನು ಅನೇಕ ರೀತಿಯ ರಸ್ತೆ ಕಾಮಗಾರಿಗಳಿಗೆ ಹಣ ಹಾಕಿದ್ದರಿಂದ ಅಡಚಣೆಯಾಗಿ 40 ಪರ್ಸೆಂಟ್ ಕಮೀಷನ್ ವಿಷಯದ ಕುರಿತು ರಾಜ್ಯ ಬಿ.ಜೆ.ಪಿ ಉಸ್ತುವಾರಿಯಾದ ಶ್ರೀ ಅರುಣ ಸಿಂಗ್ ರವರಿಗೆ ಹಾಗೂ ದೆಹಲಿ ಮಟ್ಟದ ಬಿ.ಜೆ.ಪಿ ವರಿಷ್ಟರಿಗೆ ಪ್ರಧಾನ ಮಂತ್ರಿಗಳ ಕಛೇರಿಗೆ ಭೇಟಿ ನೀಡಿ ಕೆ.ಎಸ್ ಈಶ್ವರಪ್ಪ ರವರ ವಿರುದ್ಧ ಬಿಲ್ ಪಾಸು ಮಾಡದ ಹಾಗೂ 40 ಪರ್ಸೆಂಟ್ ಕಮೀಷನ್ ಕುರಿತು ಮನವಿ ಸಲ್ಲಿಸಿದ್ದು ಇರುತ್ತದೆ. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ.
ಅದೇ ವಿಷಯದಲ್ಲಿ ಸಂತೋಷ್ ಕ ಪಾಟೀಲ್ ಈತನು ಆರೋಪಿಗಳಾದ ಕೆ.ಎಸ್ ಈಶ್ವರಪ್ಪ ಹಾಗೂ ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಹಾಗೂ ಇತರರ ಬಿಲ್ಲನ್ನು ಮಂಜೂರು ಮಾಡದ ಕಾರಣ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶ್ ಮಾದ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ದಿನಾಂಕ: 11/04/2022ರ ರಾತ್ರಿ ಸುಮಾರು 11-00 ಗಂಟೆಯಿಂದ ದಿನಾಂಕ: 12/04/2022 ರ ಬೆಳಿಗ್ಗೆ 10 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾಡ್ಜ್ ನ ರೂ ನಂಬ್ರ 207 ರಲ್ಲಿ ಅನುಮಾನಾಸ್ಪದ ಸಾವು ಆಗಿದ್ದು ಈ ಸಾವಿಗೆ ಕಾರಣರಾದ ಕೆ.ಎಸ್ ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣರಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿ ಆಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ