ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Contractor Santosh Patil Case) ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆದುಕೊಂಡು ಸಂಪುಟ (Cabinet) ಸೇರಲು ತಯಾರಿಯಲ್ಲಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಚಾರ್ಜ್ಶೀಟ್ (Chargesheet) ಸಲ್ಲಿಕೆಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಸಾಕ್ಷ್ಯಗಳನ್ನ ಹಾಜರುಪಡಿಸಲು 42ನೇ ವಿಶೇಷ ನ್ಯಾಯಾಲಯ ಆದೇಶ ನೀಡಿದ್ದು, ಜನವರಿ 31ರೊಳಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡಲು ಸೂಚಿಸಲಾಗಿದೆ. ಮೃತ ಸಂತೋಷ್ ಪಾಟೀಲ್ ಬಳಸುತ್ತಿದ್ದ ಎರಡು ಮೊಬೈಲ್ಗಳ ಡೇಟಾ (Mobile Data), ಎಫ್ಎಸ್ಎಲ್ನಿಂದ (FSL Report) ಬಂದ ಎಲ್ಲಾ ತಾಂತ್ರಿಕ ಸಾಕ್ಷ್ಯ, ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ (CCTV Footage) ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅಲ್ಲದೆ, ಪೊಲೀಸರು ಮಾಡಿದ ಅನ್ಎಡಿಟೆಡ್ ವಿಡಿಯೋಗಳನ್ನ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ. ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಜನವರಿ 31ರಂದು ಹಾಜರಾಗಿ ಸಾಕ್ಷ್ಯಾಧಾರಗಳನ್ನು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ನ್ಯಾಯಾಲಯದ ಮೊರೆ ಹೋಗಿದ್ದ ಸಂತೋಷ್ ಪಾಟೀಲ್ ಸೋದರ
ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಂತೋಷ್ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್, ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆ ವೇಳೆ ಅಸಲಿ ಸಾಕ್ಷ್ಯಗಳನ್ನ ಮರೆಮಾಚಿದ್ದಾರೆ. ಪೊಲೀಸರೇ ಉಲ್ಲೇಖಿಸಿರುವ ಸಾಕ್ಷ್ಯಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಹೀಗಾಗಿ ಪೊಲೀಸರ ಬಳಿ ಇರುವ ಸಾಕ್ಷಿ ಹಾಜರುಪಡಿಸಿದರೆ ಎಲ್ಲಾ ತಿಳಿಯುತ್ತದೆ ಎಂದು ಮನವಿ ಮಾಡಿದ್ದರು.
ಹಾರ್ಡ್ ಡಿಸ್ಕ್ ಹಾಜರಿಗೆ ಸೂಚನೆ ನೀಡುವಂತೆ ಮನವಿ
ಪ್ರಶಾಂತ್ ಪಾಟೀಲ್ ಪರವಾಗಿ ವಕೀಲ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿದ್ದರು. ಎಫ್ಎಸ್ಎಲ್ ನಿಂದ 70,000 ಡೇಟಾ ನೀಡಿದ್ದಾರೆ. ಆದ್ರೆ ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ. ಕೇವಲ 55,000 ಡೇಟಾ ಬಂದಿದೆ ಎಂದು ಬಿ ರಿಪೋರ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಎಫ್ಎಸ್ಎಲ್ ನಿಂದ ಬಂದಿರುವ ಹಾರ್ಡ್ ಡಿಸ್ಕ್ ಹಾಜರಿಗೆ ಸೂಚನೆ ನೀಡಬೇಕು ಎಂದು ವಕೀಲ ಕೆ.ಬಿ.ಕೆ.ಸ್ವಾಮಿ ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.
ವಾಟ್ಸಪ್ ಚಾಟ್ ಲೀಕ್
ಇನ್ನು ಸಚಿವ ಈಶ್ವರಪ್ಪ ಪಿಎ ಬಸವರಾಜ್ ಅವರಿಗೆ ಲಂಚ ಕೊಡಲಾಗಿತ್ತು ಎಂದು ಮಾಹಿತಿ ನೀಡುವ ವಾಟ್ಸಪ್ ಚಾಟ್ವುಳ್ಳ ಸ್ಕ್ರೀನ್ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: SM Krishna Retirement: ಬಿಜೆಪಿ ನಿರ್ಲಕ್ಷ್ಯ ಮಾಡಿದ್ದಕ್ಕೆ ರಾಜಕೀಯ ನಿವೃತ್ತಿ ಹೇಳಿದ್ರಾ ಎಸ್ಎಂ ಕೃಷ್ಣ?
ಮಹತ್ವ ಪಡೆದುಕೊಂಡ ಮಹಾಂತೇಶ್ ಶಾಸ್ತ್ರೀ ಹೇಳಿಕೆ
ಮತ್ತೊಂದು ಕಡೆ ಸಂತೋಷ್ ಪಾಟೀಲ್ ಜೊತೆ ಈಶ್ವರಪ್ಪ ಅವರನ್ನು ಭೇಟಿಯಾಗಿದ್ದ ಮಹಾಂತೇಶ್ ಶಾಸ್ತ್ರಿ ಎಂಬವರ ಹೇಳಿಕೆಯನ್ನು ಬಿ ರಿಪೋರ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಸಂತೋಷ್ ಪಾಟೀಲ್ ಕೆಲಸ ಮಾಡಿಕೊಡಲು ಈಶ್ವರಪ್ಪ ಪಿಎಗೆ ಕವರ್ ಕೊಡಲಾಗಿತ್ತು ಎಂದು ಉಡುಪಿ ಪೊಲೀಸರ ಮುಂದೆಯೇ ಮಹಾಂತೇಶ್ ಶಾಸ್ತ್ರೀ ಹೇಳಿಕೆ ನೀಡಿದ್ದಾರೆ. ಮಹಾಂತೇಶ ಶಾಸ್ತ್ರೀ ನೀಡಿರುವ ಹೇಳಿಕೆ ಪ್ರತಿ ನ್ಯೂಸ್ 18ಗೆ ಲಭ್ಯವಾಗಿದೆ.
ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ
ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಏಪ್ರಿಲ್ 11ರಂದು ಉಡುಪಿಯ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ರು. ಈಶ್ವರಪ್ಪ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ರು. ಪ್ರಕರಣಲ್ಲಿ ಈಶ್ವರಪ್ಪ ಹೆಸರು ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನಕ್ಕೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ