ಬೆಂಗಳೂರು(ಮಾ. 29): ಸಿಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಾಗೂ ಡಿಕೆ ಶಿವಕುಮಾರ್ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನ ಖಂಡಿಸಿ ಮತ್ತು ಅವರ ಬಂಧನವಾಗಬೇಕೆಂದು ಆಗ್ರಹಿಸಿ ಬೆಂಗಳೂರಿನ ಕೆಲ ಕಡೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೌರ್ಯ ಸರ್ಕಲ್ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಪ್ರತಿಭಟನೆಗಳು ನಡೆದಿವೆ.
ಮೌರ್ಯ ಸರ್ಕಲ್ನಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಮೇಶ್ ಜಾರಕಿಹೊಳಿ ಅವರನ್ನ ಬಂಧಿಸಬೇಕು ಹಾಗೂ ಕೋರ್ಟ್ನಿಂದ ಸುದ್ದಿ ಪ್ರಸಾರಕ್ಕೆ ತಡೆ ತಂದ ಆರು ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರಮೇಶ್ ಜಾರಕಿಹೊಳಿ ಗೂಂಡಾ, ಇದು ಸಿಡಿ ಸರ್ಕಾರ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದರು.
ಇದೇ ವೇಳೆ, ಕಾಂಗ್ರೆಸ್ನ ಯುವ ಘಟಕದ ಮುಖಂಡರಾದ ಮಿಥುನ್ ರೈ ಮತ್ತು ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಬೈಕ್ ಮೂಲಕ ಆಗಮಿಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಕಬ್ಬನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಡೌನ್ ಡೌನ್ ಬಿಜೆಪಿ ಎಂಬಿತ್ಯಾದಿ ಘೋಷಣೆಗಳನ್ನ ಕೂಗಿ ಠಾಣೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ನಡೆಸಬೇಕಾಯಿತು. ಈ ವೇಳೆ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಕರೆದೊಯ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್ ನಲಪಾಡ್, ಪ್ರಕರಣ ಬೆಳಕಿಗೆ ಬಂದು 24 ದಿನವಾದರೂ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದಿದ್ದರೆ ಬಂಧನ ಆಗಿರುತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Chaitra Kotur - ಮಾಜಿ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರು ಮದುವೆ ಹಾದಿರಂಪ; ಒಂದೇ ದಿನಕ್ಕೆ ಬೀದಿಗೆ ಬಂದ ದಾಂಪತ್ಯ
ಬಿಡುಗಡೆಯಾಗಿರುವ ಸಿಡಿಯಲ್ಲಿರುವ ವಿಡಿಯೋ ನಕಲಿಯಾಗಿದೆ, ಎಟಿಡ್ ಆಗಿದೆ ಎಂದು ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಈ ವೇಳೆ ನಲಪಾಡ್ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಡಿಯೋವನ್ನು ಎಡಿಟಿಂಗ್ ಎನ್ನುತ್ತೀರಲ್ಲ ಎಂದು ವ್ಯಂಗ್ಯ ಮಾಡಿದ ಅವರು, ವಿಡಿಯೋ ಯಾರಾದರೂ ಮಾಡಲಿ, ಬಟ್ಟೆ ಬಿಚ್ಚಿದ್ದು ಯಾರು? ನಾವಾ? ಎಂದು ಪ್ರಶ್ನೆ ಮಾಡಿದರು.
ಮಹಿಳೆ ಮೇಲೆ ಅತ್ಯಾಚಾರ ಆಗಿದೆ. ಆದರೆ ಡಿಕೆ ಶಿವಕುಮಾರ್ ಮೇಲೆ ಆಕ್ರಮಣ ಮಾಡುತ್ತೀರಾ? ಇದು ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಿದ ಹಾಗಾಗಿದೆ. ನೀವು ಡಿಕೆ ಶಿವಕುಮಾರ್ ಅವರಿಗೆ ಈ ರೀತಿ ಮಾಡಿದರೆ ನಾವು ನಿಮಗೆ ಅದೇ ರೀತಿ ಮಾಡುತ್ತೇವೆ. ಗಲ್ಲಿ ಗಲ್ಲಿಯಲ್ಲಿ ನಿಮ್ಮನ್ನ ತಡೆಯುತ್ತೇವೆ ಎಂದು ರಮೇಶ್ ಜಾರಕಿಹೊಳಿ ಅವರಿಗೆ ಮೊಹಮ್ಮದ್ ನಲಪಾಡ್ ಎಚ್ಚರಿಕೆ ನೀಡಿದರು.
ಇನ್ನು, ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಮಾತನಾಡಿ, ಜಾರಕಿಹೊಳಿ ಅವರ ಕೈಗೊಂಬೆಯಾಗಿ ಎಸ್ಐಟಿ ಕೆಲಸ ಮಾಡುತ್ತಿದೆ. ಜಾರಕಿಹೊಳಿ ಅವರ ಬಂಧನ ಮಾಡುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ಕೂಡಲೇ ಅವರನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Siddaramaiah: ಸಿಡಿ ಯುವತಿಯ ಪ್ರಾಣಕ್ಕೆ ಅಪಾಯವಾದರೆ ಸಿಎಂ ಯಡಿಯೂರಪ್ಪ, ಬಿಜೆಪಿ ಸರ್ಕಾರವೇ ಹೊಣೆ; ಸಿದ್ದರಾಮಯ್ಯ ಎಚ್ಚರಿಕೆ
ಇದೇ ವೇಳೆ, ಸಿಡಿ ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆ ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದು, ಆ ಕಡೆ ಎಲ್ಲರ ಗಮನ ಹರಿದಿದೆ. ಯುವತಿ ಈಗಾಗಲೇ ತನ್ನ ವಕೀಲರ ಮೂಲಕ ದೂರು ದಾಖಲು ಮಾಡಿದ್ದಾರೆ. 27 ದಿನಗಳ ಹಿಂದೆ ಸಿಡಿ ಪ್ರಕರಣ ಹೊರಬಂದ ಬಳಿಕ ರಮೇಶ್ ಜಾರಕಿಹೊಳಿ ನೀಡಿದ ಪ್ರತ್ಯಾರೋಪವಿರುವ ಪತ್ರದ ಆಧಾರದ ಮೇಲೆ ಈಗಾಗಲೇ ಪ್ರಕರಣ ದಾಖಲಾಗಿದೆ. ಎಸ್ಐಟಿಯಿಂದ ವಿಚಾರಣೆ ನಡೆಯುತ್ತಿದೆ. ಯುವತಿ ನೀಡಿರುವ ದೂರನ್ನೂ ಕೂಡ ಎಸ್ಐಟಿಗೆ ವರ್ಗಾವಣೆ ಮಾಡಲಾಗಿದೆ. ಈಗ ಎರಡೂ ಪ್ರಕರಣಗಳನ್ನ ಎಸ್ಐಟಿ ತನಿಖೆ ನಡೆಸುತ್ತಿದೆ.
ಸಿಡಿ ಪ್ರಕರಣ ಬೆಳಕಿಗೆ ಬಂದ ನಂತರದಿಂದಲೂ ಅಜ್ಞಾತ ಸ್ಥಳದಲ್ಲಿರುವ ಯುವತಿ ಇಂದು ಮ್ಯಾಜಿಸ್ಟ್ರೇಟ್ ಮುಂದೆ ಯಾವ ಹೇಳಿಕೆ ದಾಖಲಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಹಾಗೆಯೇ, ಬೆಳಗ್ಗೆ 10 ಗಂಟೆಯಿಂದಲೇ ರಮೇಶ್ ಜಾರಕಿಹೊಳಿ ಅವರನ್ನು ಎಸ್ಐಟಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಸಂಜೆಯೇ ಅವರ ವಿಚಾರಣೆ ನಡೆಸಬೇಕಿತ್ತು. ಆದರೆ, ಅವರು ಸಿಗದ ಕಾರಣ ಇಂದು ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ ಗೋಕಾಕ್ ಶಾಸಕರನ್ನ ವಿಚಾರಣೆ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ