ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರದ (Varuna Constituency) ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (BJP Candidate V Somanna) ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದ ಘಟನೆ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದಲ್ಲಿ ನಡೆದಿದೆ. ಕಾರ್ಯ ಗ್ರಾಮಕ್ಕೆ ಆಗಮಿಸಿದ್ದ ವಿ ಸೋಮಣ್ಣ ಮತಗಟ್ಟೆ (Polling Booth) ಬಳಿ ತೆರಳಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿದ್ದರು. ಇತ್ತ ಬೂತ್‌ಗೆ ತೆರಳಲೇ ಬೇಕೆಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿದ ವಿ.ಸೋಮಣ್ಣ ವಸ್ತು ಸ್ಥಿತಿ ಗಮನಕ್ಕೆ ತಂದರು. ಅಲ್ಲಿ ಇರುವ ಜನರೆಲ್ಲ ಇಲ್ಲಿಯವರಲ್ಲ, ಅವರನ್ನು ಬಂದು ಒಮ್ಮೆ ವಿಚಾರಿಸಿ ಎಂದು ಹೇಳಿದರು.
ಪರ-ವಿರೋಧದ ಘೋಷಣೆಗಳ ನಡುವೆಯೇ ಮತಗಟ್ಟೆಗೆ ತೆರಳಿದ ವಿ.ಸೋಮಣ್ಣ ಪರಿಶೀಲನೆ ನಡೆಸಿ ಹೊರ ಬಂದರು.
ಕಲಬುರಗಿಯಲ್ಲಿ ಗಲಾಟೆ
ಕಲಬುರಗಿ ಉತ್ತರ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅಯ್ಯರವಾಡಿ ಗೋಲಾ ಚೌಕ್ ಬಳಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪಾಲಿಕೆ ಸದಸ್ಯ ಕಾಂಗ್ರೆಸ್ ಮುಖಂಡ ಅಜ್ಮಲ್ ಗೋಲಾ ಎಂಬವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಜ್ಮಲ್ ಗೋಲಾ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಸಂಖ್ಯೆ 216 ರಲ್ಲಿ ಮತದಾನಕ್ಕೆ ಬಂದಿದ್ದ ಮಹಿಳೆ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಗ್ರಾಮಸ್ಥರು ಮತದಾನ ಸ್ಥಗಿತ ಮಾಡಿ ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ- ರಾಜ್ಯದಲ್ಲಿ ಇದುವರೆಗೆ 37.25% ಮತದಾನ
ಮತಗಟ್ಟೆಯಲ್ಲೇ ವಾಗ್ವಾದ, ನೂಕಾಟ, ತಳ್ಳಾಟ ಸಹ ನಡೆಯಿತು. ಸಿಪಿಐ ಸದಲಗಿ ಹಾಗೂ ಗ್ರಾಮಸ್ಥರು ನಡುವೆ ತೀವ್ರ ವಾಗ್ವಾದ ಉಂಟಾಯ್ತು. ಮತದಾನಕ್ಕೆ ಹೆಚ್ಚು ಜನರು ಬಂದ ವೇಳೆ ಗ್ರಾಮದ ಹುಲಿಗೆಮ್ಮ ಅವರ ಮೇಲೆ ಲಾಠಿಯಿಂದ ಹೊಡದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸುವಂತೆ ಆಗ್ರಹಿಸಿದರು. ಗ್ರಾಮಸ್ಥರಿಗೆ ತಹಶೀಲ್ದಾರ್ ಸೂಕ್ತ ಭರವಸೆ ನೀಡಿದ ಹಿನ್ನೆಲೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ