ಬಾಗಲಕೋಟೆ: 2023ರ ವಿಧಾನಸಭಾ ಚುನಾವಣೆ (Assembly Election 2023) ಭಾಗವಾಗಿ ಕಾಂಗ್ರೆಸ್ (Congress) ರಾಜ್ಯಾಧ್ಯಂತ ಪ್ರಜಾಧ್ವನಿ ಯಾತ್ರೆ (Prajadhwani Yatra) ನಡೆಸುತ್ತಿದೆ. ಇಂದು ಬಾಗಲಕೋಟೆಯಲ್ಲಿ ಸಮಾವೇಶ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಹಲವು ಭಾಗಗಳಿಂದ ಆಗಮಿಸಿದ್ದ ಕಾರ್ಯಕರ್ತರು ಊಟದ ವ್ಯವಸ್ಥೆ ಸರಿಯಿಲ್ಲವೆಂದು ಜಗಳ ಮಾಡಿಕೊಂಡ ಘಟನೆ ನಡೆದಿದೆ. ಮಧ್ಯಾಹ್ನ ಕಾರ್ಯಕ್ರಮದ ಮಧ್ಯೆ ಊಟಕ್ಕಾಗಿ ನೂರಾರು ಕಾರ್ಯಕರ್ತರು ಆಗಮಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಆದರೆ ಕಾರ್ಯಕರ್ತರಿಗೆಂದು ಮಾಡಿದ್ದ ಪಲಾವ್ ಖಾಲಿಯಾಗಿದೆ ಎಂದು ತಿಳಿಸಿದ್ದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರೇಷನ್ ಸಾಗಿಸುತ್ತಿದ್ದ ವಾಹನ ತಡೆಹಿಡಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ಯಾತ್ರೆ (Bharat Jodo) ನಡೆಸುತ್ತಿದ್ದರೆ, ಇತ್ತ ರಾಜ್ಯದ ನಾಯಕರು ವಿಧಾನಸಭೆಗೂ ಮುನ್ನ ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶೇಷ ಬಸ್ ಮೂಲಕ ಜಂಟಿ ಪ್ರವಾಸ ಮಾಡುತ್ತಿದ್ದಾರೆ. ಈ ಬಸ್ ಅನ್ನು ಕೈ ನಾಯಕರ ಭಾವಚಿತ್ರಗಳೊಂದಿಗೆ ಸಿದ್ಧಪಡಿಸಲಾಗಿದೆ. ಬೆಳೆಗಾವಿಯ ಚಿಕ್ಕೋಡಿಯಿಂದ ಆರಂಭವಾಗಲಿರುವ ಯಾತ್ರೆ ಮೂಲಕ ಪ್ರತಿದಿನ ಎರಡು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಲಿದೆ.
ಊಟಕ್ಕಾಗಿ ಕಿತ್ತಾಡಿಕೊಂಡ ಕಾರ್ಯಕರ್ತರು
ಬುಧವಾರ ಬಾಗಲಕೋಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯುತ್ತಿದ್ದು, ಮಧ್ಯಾಹ್ನ ಭೋಜನದ ಸಮಯದಲ್ಲಿ ಕಾರ್ಯಕರ್ತರು ಊಟಕ್ಕೆ ಆಗಮಿಸಿದ ವೇಳೆ ಮಾಡಿದ್ದ ಪಲಾವ್ ಖಾಲಿಯಾಗಿದೆ ಎಂದು ಅಡುಗೆ ಮಾಡುವವರು ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ಸಮಾವೇಶಕ್ಕೆ ಬಂದವರಿಗೆ ಊಟ ಹಾಕಲು ಸಾಧ್ಯವಾಗುತ್ತಿಲ್ಲವೇ ಎಂದು ಕಿಡಿಕಾರಿದ್ದಾರೆ. ಕೊನೆಗೆ ಉಳಿದಿದ್ದ ಒಂದು ಡಬ್ಬಿ ಪಲಾವ್ ಅನ್ನು ಕಾರ್ಯಕರ್ತರೇ ತೆಗೆದುಕೊಂಡು ತಿಂದಿದ್ದಾರೆ.
ಊಟ ವೇಸ್ಟ್ ಮಾಡಿದ್ದಕ್ಕೆ ಅಡುಗೆಯವರ ಆಕ್ರೋಶ
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರು ವಿನಾಕಾರಣ ಊಟವನ್ನು ಸರಿಯಾಗಿ ತಿನ್ನದೇ ವ್ಯರ್ಥ ಮಾಡಿದ್ದಕ್ಕೆ ಅಡುಗೆ ತಯಾರಕರು ಹಾಗೂ ಜನರ ನಡುವೆ ವಾಗ್ವಾದ ನಡೆಯಿತು. ಕಾಳಿದಾಸ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಪಟ್ಟು ಬಿಡದ ಕಾರ್ಯಕರ್ತರು ಮತ್ತೆ ಪಲಾವ್ ತಯಾರಿಸುವಂತೆ ಮಾಡಿದರು. ನಂತರ ಅಡುಗೆಯವರು ವಿಧಿಯಿಲ್ಲದೇ ಮತ್ತೆ ಪಲಾವ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ
ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ
ಸಮಾವೇಶದ ಜವಾಬ್ದಾರಿ ವಹಿಸಿಕೊಂಡಿರುವ ಜಿಲ್ಲಾ ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಸರಿಯಾದ ಊಟದ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿದ್ದಕ್ಕೆ ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಅಡುಗೆಯವರನ್ನು ಹಿಡಿದು ಎಳೆದಾಡಿದ್ದಾರೆ. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ನೆರೆದಿದ್ದ ಜನರನ್ನು ಚದುರಿಸಿದ್ದಾರೆ. ಸಂಪೂರ್ಣ ಅಡುಗೆ ಮಾಡದೆ ರೇಷನ್ ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅರೋಪಿಸಿದ ನಂತರ ಮತ್ತೆ ಒಲೆ ಹೊತ್ತಿಸಿ ಅಡುಗೆ ಮಾಡಿದ್ದಾರೆ.
ಹಲವು ನಾಯಕರು ಭಾಗಿ
ಬಾಗಲಕೋಟೆಯಲ್ಲಿ ಬುಧವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮುಖಂಡರಾದ ಎಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ