ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ವಿರುದ್ಧ ಈ ಹಿಂದೆ 40% ಸರ್ಕಾರ, ಪೇ ಸಿಎಂ (Pay CM) ಅಭಿಯಾನಗಳನ್ನು ನಡೆಸಿದ್ದ ಕಾಂಗ್ರೆಸ್ (Congress) ಪಕ್ಷ ಇದೀಗ ವಿರುದ್ಧ ಮತ್ತೊಂದು ಅಭಿಯಾನ ನಡೆಸುತ್ತಿದೆ. 'ಬಿಜೆಪಿ ಪಾಪ ಪತ್ರ' ಹಾಗೂ 'ಬಿಜೆಪಿ ಪಾಪದ ಪುರಾಣ' ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣದ ಮೂಲಕ #ಬಿಜೆಪಿ ಪಾಪದ ಪುರಾಣ ಎಂಬ ಹ್ಯಾಷ್ಟ್ಯಾಗ್ನಡಿ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಕುರಿತು ಮಂಗಳವಾರ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ್ದು, ಅದರಲ್ಲಿ ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಎತ್ತಿ ತೋರಿಸಿದೆ.
ಈ ಟ್ವೀಟ್ಗಳಲ್ಲಿ ಕರ್ನಾಟಕ ಸರ್ಕಾರ 40 ಪರ್ಸೆಂಟ್ ಸರ್ಕಾರ, ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ರೈತರನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ, ಪ್ರಣಾಳಿಕೆಯಲ್ಲಿ ನೀಡಿದ 90% ಭರವಸೆಗಳನ್ನು ಈಡೇರಿಸಿಲ್ಲ, ಕೋವಿಡ್ ಸಂದರ್ಭದಲ್ಲಿ ಜೀವ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ, ದಿನಬಳಕೆ ವಸ್ತುಗಳ ಬೆಲೆ ಏರಿಕೆ , ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ , ಹೆಚ್ಚುತ್ತಿರುವ ನಿರುದ್ಯೋಗ , ಹಲವಾರು ಹಗರಣಗಳು, ದಲಿತರ ದೌರ್ಜನ್ಯ, ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಡಳಿತ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದೆ.
ಸಿಎಂ ಹುದ್ದೆಯಿಂದ ಹಿಡಿದು ಗ್ರೂಪ್ ಡಿ ನೌಕರರ ಹುದ್ದೆಯವರೆಗೂ ವ್ಯಾಪರಸೌಧದಲ್ಲಿ ಎಲ್ಲವೂ ಮಾರಾಟಕ್ಕಿದೆ.
ಸಿಎಂ ಹುದ್ದೆಯಿಂದ ಜವಾನನ ಹುದ್ದೆವರೆಗೂ ನೇಮಕಾತಿಗೆ, ವರ್ಗಾವಣೆಗೆ, ಆಪರೇಷನ್ ಕಮಲಕ್ಕೆ ಇಂತಿಷ್ಟೇ ಎಂಬ ರೇಟ್ ಫಿಕ್ಸ್ ಮಾಡಿ ರಾಜ್ಯವನ್ನು ದೇಶದಲ್ಲೇ ಭ್ರಷ್ಟ ರಾಜ್ಯವೆಂಬ ಅಪಕೀರ್ತಿಗೆ ಗುರಿ ಮಾಡಿದ್ದು ಈ 40%ಸರ್ಕಾರ.#BJPಪಾಪದಪುರಾಣ pic.twitter.com/7LgTVIAaA6
— Karnataka Congress (@INCKarnataka) January 10, 2023
ಅನೈತಿಕತೆಯಿಂದ ಹುಟ್ಟಿದ ಪಾಪದ ಕೂಸು
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಆಪರೇಷನ್ ಕಮಲವೆಂಬ ಅನೈತಿಕತೆಯಿಂದ ಹುಟ್ಟಿದ ಪಾಪದ ಕೂಸಾಗಿದೆ. ಈ ಸರ್ಕಾರ ಹುಟ್ಟಿದ್ದೂ ಅನೈಕತೆಯಿಂದಲೇ, ನಡೆಯುತ್ತಿರುವುದು ಅನೈತಿಕ ಮಾರ್ಗದಲ್ಲೇ, ಅವಸಾನವಾಗುವುದೂ ಅನೈತಿಕತೆಯ ಕಾರಣದಿಂದಲೇ ಆಗುತ್ತದೆ. ಆಪರೇಷನ್ ಕಮಲ ನಡೆಸುವಾಗ ಇನ್ವೆಸ್ಟ್ಮೆಂಟ್ ಮಾಡಿ ಅದನ್ನು 40% ಕಮಿಷನ್ ಮೂಲಕ ರಿಕವರಿ ಮಾಡಿಕೊಳ್ಳುತ್ತದೆ ಎಂದು ಇದೆ ಬಿಜೆಪಿ ಸಾಧನೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಬಿಜೆಪಿ ಸರ್ಕಾರದ 40% ಕಮಿಷನ್ ಕಿರುಕುಳಕ್ಕೆ ಗುತ್ತಿಗೆದಾರರ ಸಂಘ ಮತ್ತು ಖಾಸಗಿ ಶಾಲೆಗಳ ಸಂಘ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೂ ಹಲವು ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ಕೆಲಸಗಳಿಗೂ 50% ಕಮಿಷನ್ ಬೇಡಿಕೆಯಿಡುವ ಬಿಬಿಎಂಪಿ ರಾಜ್ಯದಲ್ಲಿ ಭಯಾನಕ ಭ್ರಷ್ಟಾಚಾರದಲ್ಲಿ ಮುಳುಗಿರುವ ಪಾಲಿಕೆಯಾಗಿದೆ ಎಂದು ಆರೋಪಿಸಿದೆ. ಇನ್ನೂ ಸ್ವತಃ ಬಿಜೆಪಿಗರೇ ಸಿಎಂ ಬೊಮ್ಮಾಯಿ ಮೇಲೆ ಭ್ರಷ್ಟಾಚಾರ ಆರೋಪ ಮಾಡಿರಿವುದು ವಿಪರ್ಯಾಸ ಎಂದು ಬಿಜೆಪಿ ಕಾಲೆಳೆದಿದೆ.
ರೈತರನ್ನು ಮುಗಿಸುವ ಹುನ್ನಾರ
ಬಿಜೆಪಿ ಸರ್ಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯದೆ ರೈತರನ್ನು ಮುಗಿಸುವ ಹುನ್ನಾರ ನಡೆಸುತ್ತಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ನೆರೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ, ರೈತರಿಗೆ ಬೆಂಬಲ ಬೆಲೆ ಇಲ್ಲವೇ ಇಲ್ಲ. ಇದರ ಜೊತೆಗೆ ಕೃಷಿ ಮಾಡಲು ರೈತರಿಗೆ ಬೆಲೆ ಏರಿಕೆ ಬಿಸಿ ಒಂದು ಕಡೆಯಾದರೆ, ಬೆಳೆದ ಬೆಳಗೆ ಬೆಲೆ ಇಳಿಸಿ ರೈತರನ್ನು ಸಿಗಿದು, ಸುಲಿದು ರಕ್ತ ಹೀರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಶಾಪಿಂಗ್ ಮಾಲ್ ಆದ ವಿಧಾನಸೌಧ
ಬಿಜೆಪಿ ಆಡಳಿತದಲ್ಲಿ ವಿಧಾನ ಸೌಧ ಶಾಪಿಂಗ್ ಮಾಲ್ ಆಗಿದೆ. ಇಲಾಖೆಗಳು ಹುದ್ದೆ ಮಾರಾಟದ ಶೋ ರೂಮ್ಗಳಾಗಿವೆ. ಇಲ್ಲಿ ಸರ್ಕಾರಿ ಹುದ್ದೆಗಳಿಗೆ ರೇಟ್ ಕಾರ್ಡ್ ಹಾಕಿ ಮಾರಾಟ ಮಾಡಲಾಗುತ್ತಿದೆ. 2.52 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದ ಸರ್ಕಾರದಿಂದಾಗಿ PSI, KPSC ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಕತ್ತಲಲ್ಲಿ ಮುಳುಗುವಂತಾಗಿದೆ ಎಂದು ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಸರ್ಕಾರ ಎಂದು ತಿಳಿಸಿದೆ.
ಮಹಿಳಾ ದೌರ್ಜನ್ಯ ಬಿಜೆಪಿ ಆಡಳಿತ ಮತ್ತೊಂದು ಸಾಧನೆ
ಆಡಳಿತ ರೂಢ ಬಿಜೆಪಿ ಸರ್ಕಾರದಲ್ಲಿ ಸಚಿವ, ಶಾಸಕರೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಮಹಿಳಾ ದೌರ್ಜನ್ಯಕ್ಕೆ ರಾಯಭಾರಿಗಳಾಗಿದ್ದಾರೆ. ಅತ್ಯಾಚಾರ ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಕೀರ್ತಿ ಈ ಸರ್ಕಾರಕ್ಕೆ ಸಲ್ಲುತ್ತದೆ. ರಾಜ್ಯದ ನಿರ್ಭಯಾ ನಿಧಿಯ 90% ಹಣ ಬಳಕೆಯಾಗಿಲ್ಲ. ಕಾಣೆಯಾದ ಮಹಿಳೆಯರ ಪ್ರಕರಣಗಳ ಸಂಖ್ಯೆ 48% ಹೆಚ್ಚಳವಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯ ವಿವಾಹ ಪ್ರಕರಣಗಳು ಶೇ 300ರಷ್ಟು ಹೆಚ್ಚಳವಾಗಿವೆ ಎಂದು ಮತ್ತೊಂದು ಟ್ವೀಟ್ನಲ್ಲಿ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸಬಲೀಕರಣವನ್ನು ಕಡೆಗಣಿಸಿದೆ ಎಂದು ಒತ್ತಿ ಹೇಳಿದೆ.
ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಹೂಡಿಕೆದಾರರ ಸ್ವರ್ಗವಾಗಿತ್ತು
ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಹೂಡಿಕೆದಾರರ ಸ್ವರ್ಗದಂತಿತ್ತು, ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಉದ್ಯಮಿಗಳು ಕಿಡಿಕಾರುತ್ತಿದ್ದಾರೆ, ಉದ್ಯಮಗಳು ವಲಸೆ ಹೋಗುತ್ತಿವೆ. ಕೈಗಾರಿಕೆಗಳು ಮುಚ್ಚುತ್ತಿವೆ. ಬಿಜೆಪಿ ಪಾಪದಪುರಾಣ ದಿಂದಾಗಿ ಆರ್ಥಿಕತೆ, ಉದ್ಯೋಗವಕಾಶ ನಾಶವಾಗುತ್ತಿದೆ. ಬೆಂಗಳೂರಿನ ಘನತೆ ಕುಸಿಯುತ್ತಿದೆ.
ಬಿಜೆಪಿ ಸರ್ಕಾರದಲ್ಲಿ ಮಕ್ಕಳಿಗೆ ಶಿಕ್ಷಣ ಎಂಬುದು ಶಿಕ್ಷೆಯಾಗಿದ್ದರೆ, ಸರ್ಕಾರಕ್ಕೆ ಹಣ ಮಾಡುವ ದಂಧೆಯಾಗಿದೆ. ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ, ಪಠ್ಯ ಪರಿಷ್ಕರಣೆಯ ಅವಾಂತರ, ಶಿಕ್ಷಣದ ಶುಲ್ಕ ದುಪ್ಪಟ್ಟು, ಶೈಕ್ಷಣಿಕ ಯೋಜನೆಗಳಿಗೆ ಅನುದಾನದ ಕೊರತೆ, ಅತಿಥಿ ಉಪನ್ಯಾಸಕರಿಗೆ ಅನ್ಯಾಯ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಾಗಿ ಮುಂದುವರಿಯುತ್ತದೆ ಎಂದು ಸರಣಿ ಟ್ವೀಟ್ಗಳಲ್ಲಿ ಬಿಜೆಪಿ ಸರ್ಕಾರದ ಮೇಲೆ ಟೀಕೆಗಳ ಸುರಿಮಳೆಗೈದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ