ಬಿಜೆಪಿಯವರ ಜನಾಶೀರ್ವಾದ ಯಾತ್ರೆಯಲ್ಲಿ ಕೊರೋನಾ ಸೋಂಕು ತಗಲುವುದಿಲ್ಲವೇ? ; ಕಾಂಗ್ರೆಸ್ ಕಿಡಿ

ಜನ ಸಾಮಾನ್ಯರಿಗೆ ರೂಲ್ಸ್ ಹೇರಿ ಬಿಜೆಪಿ ಮಾತ್ರ ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಬಹುದಂತೆ, ಇವರೇನು ಒಲಂಪಿಕ್ಸ್ ಪದಕ ಗೆದ್ದು ಬಂದವರೇ?" ಎಂದು ಕಾಂಗ್ರೆಸ್ ಕಿಡಿಕಾರಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಆಗಸ್ಟ್​ 08); ಕೇಂದ್ರ ಸರ್ಕಾರದ ಕ್ಯಾಬಿನೆಟ್ ಅನ್ನು ಇತ್ತೀಚೆಗೆ ವಿಸ್ತರಣೆ ಮಾಡಲಾಗಿತ್ತು. ಈ ವಿಸ್ತರಣೆಯಲ್ಲಿ ಕರ್ನಾಟಕದ ನಾಲ್ಕು ಹೊಸ ಮುಖಗಳಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಹೀಗಾಗಿ ಈ ನಾಲ್ಕು ಜನ ಹೊಸ ಸಚಿವರನ್ನು ಜನರಿಗೆ ಪರಿಚಯಿಸುವ ಸಲುವಾಗಿ ರಾಜ್ಯ ಬಿಜೆಪಿ ಘಟಕ ಇಂದಿನಿಂದ ಜನಾಶೀರ್ವಾದ ಯಾತ್ರೆಯನ್ನು ಕೈಗೊಂಡಿದೆ. ಈ ಯಾತ್ರೆಯಲ್ಲಿ ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಆದರೆ, "ಕೊರೋನಾ ಕಾಲದಲ್ಲಿ ಸಾಮಾಜಿಕ ಅಂತರದ ಸಲುವಾಗಿ ಜನರಿಗೆ ನೂರೊಂಟು ಕಾನೂನು ಜಾರಿಮಾಡುವ ಬಿಜೆಪಿ ಸರ್ಕಾರ ತಾನೇ ಹೀಗೆ ಸಾವಿರಾರು ಜನರನ್ನು ಒಟ್ಟುಗೂಡಿಸಿ ಜನಾಶೀರ್ವಾದ ಯಾತ್ರೆ ಮಾಡುವುದು ಸರಿಯೇ? ಈ ಯಾತ್ರೆಯಲ್ಲಿ ಕೊರೋನಾ ಸೋಂಕು ಹರಡುವುದಿಲ್ಲವೇ?" ಎಂದು ಕಾಂಗ್ರೆಸ್ ಟ್ವಿಟರ್​ ಮೂಲಕ ಇಂದು ಕಿಡಿಕಾರಿದೆ.  ಈ ಬಗ್ಗೆ ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಕಾಂಗ್ರೆಸ್​ ರಾಜ್ಯ ಘಟಕ, "ಗಣೇಶ ಹಬ್ಬಕ್ಕೆ ಕೊರೋನಾ ರೂಲ್ಸ್, ದೇದೇವಾಲಯಗಳಿಗೆ ಕೊರೋನಾ ರೂಲ್ಸ್,  ಮದುವೆ ಸಮಾರಂಭಗಳಿಗೆ ಕೊರೋನಾ ರೂಲ್ಸ್, ಸಂತೆ, ಮಾರ್ಕೆಟ್‌ಗಳಿಗೆ ಕರೋನಾ ರೂಲ್ಸ್​. ಹೀಗೆ ಎಲ್ಲದಕ್ಕೂ ಕೋವಿಡ್ ರೂಲ್ಸ್ ಜಾರಿಗೊಳಿಸಿದ್ದರೂ ಕರ್ನಾಟಕದ ಬಿಜೆಪಿ ಪಕ್ಷದ ಜನಾಶೀರ್ವಾದ ಯಾತ್ರೆಗೆ ಯಾವುದೇ ರೂಲ್ಸ್ ಇಲ್ಲ, ಅವರ ಯಾತ್ರೆಯಲ್ಲಿ ಕೊರೋನಾ ಬರುವುದಿಲ್ಲವೇ?" ಎಂದು ಕಿಡಿಕಾರಿದೆ.  ಮತ್ತೊಂದು ಟ್ವೀಟ್​ನಲ್ಲಿ, "ರಾಜ್ಯದಲ್ಲಿ ಕೊರೋನಾ ಉಲ್ಬಣವಾಗುತ್ತಿದೆ, ಲಸಿಕಾಕರಣ ಹಳ್ಳ ಹಿಡಿದಿದೆ, ಲಸಿಕೆ ಕೊಡಲಾಗದೆ ಟಫ್ ರೂಲ್ಸ್ ಹೆಸರಲ್ಲಿ ಜನರ ಬದುಕಿನ ಮೇಲೆ ಸವಾರಿ ಮಾಡುತ್ತಿದೆ ಸರ್ಕಾರ. ಜನ ಸಾಮಾನ್ಯರಿಗೆ ರೂಲ್ಸ್ ಹೇರಿ ಬಿಜೆಪಿ ಮಾತ್ರ ಜನ ಸೇರಿಸಿ ಜನಾಶೀರ್ವಾದ ಯಾತ್ರೆ ಮಾಡಬಹುದಂತೆ, ಇವರೇನು ಒಲಂಪಿಕ್ಸ್ ಪದಕ ಗೆದ್ದು ಬಂದವರೇ?" ಎಂದು ಆಕ್ರೋಶ ಹೊರಹಾಕಿದೆ.  ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಿರುದ್ಧ ತೋರುತ್ತಿರುವ ಮಲತಾಯಿ ಧೋರಣೆಯ ವಿರುದ್ಧವೂ ಕಿಡಿಕಾರಿರುವ ಕಾಂಗ್ರೆಸ್, "ಕಳೆದ ಪ್ರವಾಹಗಳಿಗೆ ಕೇಂದ್ರದಿಂದ ನೆರೆ ಪರಿಹಾರ ತರಲಾಗಲಿಲ್ಲ, ಈ ಬಾರಿಯ ನೆರೆ ಸಂತ್ರಸ್ತರನ್ನ ಕಣ್ಣೆತ್ತಿಯೂ ನೋಡಲಿಲ್ಲ. ರಾಜ್ಯಕ್ಕಾದ ಲಸಿಕೆ ಹಂಚಿಕೆಯ ಅನ್ಯಾಯದ ಬಗ್ಗೆ ಚಕಾರ ಎತ್ತಲಿಲ್ಲ. GST ಬಾಕಿ ಬಗ್ಗೆ ತುಟಿ ಬಿಚ್ಚಲಿಲ್ಲ. ಕೊರೋನಾ ನಿಯಮದ ನಡುವೆಯೂ ಯಾವ ಮುಖಟ್ಟುಕೊಂಡು #ಕರೋನಾಶೀರ್ವಾದಯಾತ್ರೆ ಮಾಡ್ತಿದ್ದೀರಿ?" ಎಂದು ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: