ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆಯೂ ಗಂಭೀರ ಚರ್ಚೆ

ನಾನೇಂದು ಸಿಎಂ ಆಗಬೇಕು ಎಂದು ಷರತ್ತು ವಿಧಿಸಿರಲಿಲ್ಲ. ವೇಣುಗೋಪಾಲ್​, ಗುಲಾಂ ನಬಿ ಆಜಾದ್​ ಕೋರಿಕೊಂಡ ಮೇಲೆ ಸಿಎಂ ಆಗಿದ್ದು ಎಂದಿದ್ದ ಕುಮಾರಸ್ವಾಮಿ ಪದತ್ಯಾಗಕ್ಕೆ ಈಗ ಅದೇ ನಾಯಕರು ಮುಂದಾಗಿದ್ದಾರೆ

Seema.R | news18
Updated:July 9, 2019, 3:45 PM IST
ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆಯೂ ಗಂಭೀರ ಚರ್ಚೆ
ಎಚ್​.ಡಿ. ಕುಮಾರಸ್ವಾಮಿ.
  • News18
  • Last Updated: July 9, 2019, 3:45 PM IST
  • Share this:
ಬೆಂಗಳೂರು (ಜು.09): ಪತನದ ಅಂಚಿನಲ್ಲಿರುವ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶತಪಥ ಪ್ರಯತ್ನ ನಡೆಸುತ್ತಿರುವ ನಾಯಕರು, ಸಚಿವರ ರಾಜೀನಾಮೆ ಬಳಿಕ ಈಗ ಸಿಎಂ ಪದತ್ಯಾಗದ ಬಗ್ಗೆ ಗಂಭೀರ ಚರ್ಚೆಗೆ ಮುಂದಾಗಿದ್ದಾರೆ.

ಮೈತ್ರಿ ವಿರುದ್ಧ ಸಿಡಿದೆದ್ದಿರುವ 13 ಶಾಸಕರಲ್ಲಿ ಹಲವರು ಸಿಎಂ ಕುಮಾರಸ್ವಾಮಿ ವಿರುದ್ಧ ಧ್ವನಿ ಎತ್ತಿದ್ದಾರೆ. ಕುಮಾರಸ್ವಾಮಿ  ಕುಟುಂಬದ ಹಸ್ತಕ್ಷೇಪ, ಅವರ ಸ್ವ ಹಿತಾಸಕ್ತಿ ಕುರಿತು ಬಹಿರಂಗವಾಗಿ ಟೀಕಿಸಿದರು. ವಿಶ್ವನಾಥ್ ಕೂಡ ಜೆಡಿಎಸ್​ನ ಜಾತಿ ರಾಜಕಾರಣದ ನೆಪ ಹೇಳಿ ಕುಮಾರಸ್ವಾಮಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

siddu
ಸಿದ್ದರಾಮಯ್ಯ


ಇನ್ನು ರಾಜೀನಾಮೆ ನೀಡಿದ 13ರಲ್ಲಿ ಬೆಂಗಳೂರಿನ ಮೂವರು ಶಾಸಕರ ರಾಜೀನಾಮೆ ಕಾಂಗ್ರೆಸ್​ ನಾಯಕರಿಗೂ ಶಾಕ್​ ನೀಡಿತು. ಕಾರಣ ಇವರೆಲ್ಲಾ ಸಿದ್ದರಾಮಯ್ಯ ಆಪ್ತರು. ಯಶವಂತಪುರ ಶಾಸಕ ಎಸ್​ಟಿ ಸೋಮಶೇಖರ್​, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಕೆಆರ್​ ಪುರಂ ಶಾಸಕ ಭೈರತಿ ಬಸವರಾಜ್​  ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಧ್ವನಿ ಎತ್ತಿದ್ದರು. ಈ ಶಾಸಕರೇ ರಾಜೀನಾಮೆ ಹಿಂದೆ ಮಾಜಿ ಸಿಎಂ ಕೈವಾಡ ಇರಬಹುದು ಎಂದು ಹಲವರು ವ್ಯಾಖ್ಯಾನಿಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿರುವ ದೆಹಲಿ ನಾಯಕರು ಸಿಎಂ ಸ್ಥಾನ ಬದಲಾವಣೆ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ನಾನೇಂದು ಸಿಎಂ ಆಗಬೇಕು ಎಂದು ಷರತ್ತು ವಿಧಿಸಿರಲಿಲ್ಲ. ವೇಣುಗೋಪಾಲ್​, ಗುಲಾಂ ನಬಿ ಆಜಾದ್​ ಕೋರಿಕೊಂಡ ಮೇಲೆ ಸಿಎಂ ಆಗಿದ್ದು ಎಂದಿದ್ದ ಕುಮಾರಸ್ವಾಮಿ ಪದತ್ಯಾಗಕ್ಕೆ ಈಗ ಅದೇ ನಾಯಕರು ಮುಂದಾಗಿದ್ದಾರೆ.

ಈ ಕುರಿತು ರಾಜಧಾನಿಯ ಖಾಸಗಿ ಹೋಟೆಲ್​ನಲ್ಲಿ ಇಂದು ಸಂಜೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಉಳಿಸಲು ಮೈದಾನಕ್ಕೆ ಇಳಿದಿರುವ ರಾಷ್ಟ್ರೀಯ ನಾಯಕರಾದ ಗುಲಾಮ್​ ನಬಿ ಆಜಾದ್​, ಕಪಿಲ್​ ಸಿಬಾಲ್​ ಈ ಕುರಿತು ದೇವೇಗೌಡ ಹಾಗೂ ಕುಮಾರಸ್ವಾಮಿಯೊಂದಿಗೆ ಚರ್ಚೆ ನಡೆಸಲಿದ್ದಾರೆ.

ಒಂದು ವೇಳೆ ನಾಯಕರು ಮುಖ್ಯಮಂತ್ರಿ ಬದಲು ಮಾಡುವ ನಿರ್ಧಾರ ತೆಗೆದುಕೊಂಡರೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅಥವಾ ಪರಮೇಶ್ವರ್ ಇವರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಮಾಡಿ, ಜೆಡಿಎಸ್​ಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಾಗುತ್ತದೆ ಎಂಬ ಚರ್ಚೆಗಳು ನಡೆದಿವೆ.ಇದನ್ನು ಓದಿ: ಮೈತ್ರಿ ನಾಯಕರಿಗೆ ಮತ್ತೊಂದು ಶಾಕ್​: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ರೋಷನ್​ ಬೇಗ್​

ಸಭೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಕೂಡ ಹಾಜರಾಗಲಿದ್ದು, ಅವರ ಸಲಹೆಯನ್ನು ಪಡೆಯಲಾಗುವುದು. ಇದೇ ವೇಳೆ ಮುಂಬೈಗೆ ಹಾರಿರುವ ಅತೃಪ್ತ ಶಾಸಕರನ್ನು ಹೇಗೆ ಮನವೊಲಿಸಿ ಕರೆ ತರುವುದು ಎಂಬ ಬಗ್ಗೆ ಕೂಡ ಚರ್ಚೆ ನಡೆಸಲಾಗುವುದು.

First published:July 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ