ಬಿಜೆಪಿಯ ಆಪರೇಷನ್ ಠುಸ್ ಮಾಡಿದ ಆಡಿಯೋ: ಸದನಕ್ಕೆ ಬಂದ ಅತೃಪ್ತ ಶಾಸಕರು

ಬೇರೆ ಬೇರೆ ಕಾರಣಗಳಿಗಾಗಿ ತಾವು ಮುಂಬೈಗೆ ಹೋಗಿದ್ದಾಗಿಯೂ, ತಾವು ಯಾವತ್ತೂ ಕೂಡ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ಅತೃಪ್ತ ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Vijayasarthy SN | news18
Updated:February 13, 2019, 1:24 PM IST
ಬಿಜೆಪಿಯ ಆಪರೇಷನ್ ಠುಸ್ ಮಾಡಿದ ಆಡಿಯೋ: ಸದನಕ್ಕೆ ಬಂದ ಅತೃಪ್ತ ಶಾಸಕರು
ಸದನದಲ್ಲಿ ಎಂಬಿ ಪಾಟೀಲ್ ಮತ್ತು ರಮೇಶ್ ಜಾರಕಿಹೊಳಿ
Vijayasarthy SN | news18
Updated: February 13, 2019, 1:24 PM IST
ಬೆಂಗಳೂರು(ಫೆ. 13): ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬು ಬಿಜೆಪಿ ಹಾಗೂ ಅತೃಪ್ತ ಶಾಸಕರನ್ನು ಬೆಚ್ಚಿಬೀಳಿಸಿದೆ. ನಿನ್ನೆಯವರೆಗೂ ಕಣ್ಮರೆಯಾಗಿದ್ದ ನಾಲ್ವರು ಕಾಂಗ್ರೆಸ್ ಅತೃಪ್ತ ಶಾಸಕರು ಇಂದು ವಿಧಾನಸಭೆಯ ಅಧಿವೇಶನಕ್ಕೆ ಹಾಜರಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎರಡು ಬಾರಿ ವಿಪ್ ಹೊರಡಿಸಿದರೂ ಕೇರ್ ಮಾಡದ ಅತೃಪ್ತರು ಇದೀಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಅಧಿವೇಶನಕ್ಕೆ ಬಂದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಬಿ. ನಾಗೇಂದ್ರ ಮತ್ತು ಮಹೇಶ್ ಕುಮಟಳ್ಳಿ ಅವರು ತಮ್ಮ ಈವರೆಗಿನ ಗೈರಿನ ಬಗ್ಗೆ ತಮ್ಮದೇ ರೀತಿಯಲ್ಲಿ ಸಮಜಾಯಿಷಿ ನೀಡಿದ್ದಾರೆ.

ತಮ್ಮ ಮಗಳ ಮದುವೆ ಕಾರ್ಯಕ್ರಮದ ನಿಮಿತ್ತ ಮುಂಬೈಗೆ ಹೋಗಿದ್ದಾಗಿ ರಮೇಶ್ ಜಾರಕಿಹೊಳಿ ಹೇಳಿದರೆ, ಬಿ. ನಾಗೇಂದ್ರ ಅವರು ಮಾಮೂಲಿಯ ವ್ಯವಹಾರದ ನಿಮಿತ್ತ ಮುಂಬೈನಲ್ಲಿದ್ದುದಾಗಿ ತಿಳಿಸಿದ್ದಾರೆ. ತಾವು ಬಿಜೆಪಿಗೆ ಹೋಗುವುದಾಗಿ ಎಲ್ಲಿಯೂ ಹೇಳಿಲ್ಲ. ಇವೆಲ್ಲವೂ ಕೇವಲ ಮಾಧ್ಯಮ ಸೃಷ್ಟಿ ಮಾತ್ರ. ಪಕ್ಷದ ಕೆಲ ಆಂತರಿಕ ವಿಚಾರಗಳ ಬಗ್ಗೆ ಬೇಸರವಿದ್ದದ್ದು ನಿಜವಾದರೂ ತಾವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ರಮೇಶ್ ಜಾರಕಿಹೊಳಿ ಮತ್ತು ಬಿ. ನಾಗೇಂದ್ರ ಸ್ಪಷ್ಟಪಡಿಸಿದ್ದಾರೆ. ಬೇರೆ ಬೇರೆ ಕಾರಣಗಳಿಂದ ತಮಗೆ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಈಗ ಬಜೆಟ್ ಪಾಸ್ ಮಾಡಲು ತಾವು ಬಂದಿರುವುದಾಗಿ ಅವರಿಬ್ಬರೂ ಹೇಳಿದ್ದಾರೆ.

ಸದನದ ಒಳಗೆ ಎಂಬಿ ಪಾಟೀಲ್ ಅವರ ಜೊತೆ ರಮೇಶ್ ಜಾರಕಿಹೊಳಿ ಮತ್ತು ಬಿ. ನಾಗೇಂದ್ರ ಅವರು ಕೆಲ ಹೊತ್ತು ಚರ್ಚೆ ನಡೆಸಿದ್ದು ಕಂಡು ಬಂತು. ಉಮೇಶ್ ಜಾಧವ್ ಅವರು ಸ್ಪೀಕರ್ ರಮೇಶ್ ಕುಮಾರ್ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಮೇಲೆ ಸಿಗುತ್ತೇನೆಂದು ಜಾಧವ್ ಅವರಿಗೆ ಸ್ಪೀಕರ್ ತಿಳಿಸಿದರೆನ್ನಲಾಗಿದೆ.

ಇದೇ ವೇಳೆ, ಆಪರೇಷನ್ ಕಮಲದ ರೂವಾರಿಗಳೆನ್ನಲಾದ ಬಿಜೆಪಿಯ ಅಶ್ವಥ್ ನಾರಾಯಣ ಮತ್ತು ಬಿವೈ ವಿಜಯೇಂದ್ರ ಅವರಿಬ್ಬರೂ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಾವು ಯಾವುದೇ ತಪ್ಪು ಮಾಡಿಲ್ಲ. ಇದೆಲ್ಲವೂ ವ್ಯವಸ್ಥಿತ ಸಂಚು ಎಂದು ಪ್ರತಿಪಾದಿಸಿದ್ದಾರೆ.
First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ