ಸಿದ್ದರಾಮಯ್ಯ, ದಿನೇಶ್​​ ಗುಂಡೂರಾವ್​ ವಿರುದ್ಧ ಸಿಡಿದೆದ್ದ ಹಿರಿಯ ಕಾಂಗ್ರೆಸ್ಸಿಗರು; ಅಸಮಾಧಾನಿತರ ಒಕ್ಕೂಟ ರಚನೆಗೆ ಮುಂದಾದ ನಾಯಕರು

ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​ ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಪಕ್ಷದ ಇತರೆ ನಾಯಕರು ತಿರುಗಿ ಬಿದ್ದಿದ್ದಾರೆ.

Seema.R | news18
Updated:June 18, 2019, 2:38 PM IST
ಸಿದ್ದರಾಮಯ್ಯ, ದಿನೇಶ್​​ ಗುಂಡೂರಾವ್​ ವಿರುದ್ಧ ಸಿಡಿದೆದ್ದ ಹಿರಿಯ ಕಾಂಗ್ರೆಸ್ಸಿಗರು; ಅಸಮಾಧಾನಿತರ ಒಕ್ಕೂಟ ರಚನೆಗೆ ಮುಂದಾದ ನಾಯಕರು
ಸಿದ್ದರಾಮಯ್ಯ-ರಾಮಲಿಂಗಾ ರೆಡ್ಡಿ- ದಿನೇಶ್​ ಗುಂಡೂರಾವ್​​
  • News18
  • Last Updated: June 18, 2019, 2:38 PM IST
  • Share this:
ಬೆಂಗಳೂರು (ಜೂ.18): ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ. ಮಂತ್ರಿ ಸ್ಥಾನ ಪಡೆಯುವಲ್ಲಿ ವಿಫಲವಾದ ನಾಯಕರು ಸ್ವಪಕ್ಷೀಯ ನಾಯಕರ ವಿರುದ್ಧವೇ ಅಸಮಾಧಾನ ತೋರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್​ ಹಿರಿಯ ನಾಯಕರಿಗೆ ಭವಿಷ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಈಗಾಗಲೇ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ರಾಮಲಿಂಗಾ ರೆಡ್ಡಿ ಪಕ್ಷ ತೊರೆಯುವ ಬೆದರಿಕೆಯನ್ನು ಒಡ್ಡಿದ್ದಾರೆ. ಜೊತೆ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​ ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ಧ ಇತರೆ ನಾಯಕರು ತಿರುಗಿ ಬಿದ್ದಿದ್ದಾರೆ.

ಕಳೆದ ವಾರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಆಕಾಂಕ್ಷೆ ಹೊಂದಿದ್ದ ರಾಮಲಿಂಗಾ ರೆಡ್ಡಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಸಚಿವ ಸ್ಥಾನ ಸಿಗಲಿದೆ ಎಂಬ ಭರವಸೆ ನೀಡಿದ್ದ ಸಿದ್ದರಾಮಯ್ಯ ಮಾತು ಹುಸಿಗೊಂಡಿರುವುದು ರಾಮಲಿಂಗಾ ರೆಡ್ಡಿ ಕೋಪಕ್ಕೆ ಕಾರಣವಾಗಿದೆ. ಇದರಿಂದಾಗಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಿತ ಶಾಸಕರನ್ನು ಒಟ್ಟುಗೂಡಿಸಿ ಪಕ್ಷದ ನಾಯಕರ ವಿರುದ್ಧವೇ ಸಮರ ಸಾರಲು ರೆಡ್ಡಿ ತಂಡ ತಂತ್ರ ರೂಪಿಸಲು ಮುಂದಾಗಿದೆ.

ತಮ್ಮಂತೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಮುನಿಸಿ ಕೊಂಡಿರುವ ಎಚ್‌.‌ಕೆ ಪಾಟೀಲ್, ಶಿಡ್ಲಘಟ್ಟ ವಿ.ಮುನಿಯಪ್ಪ,ಶಾಮನೂರು ಶಿವಶಂಕರಪ್ಪ ಅವರನ್ನು ಒಟ್ಟುಗೂಡಿಸಲು  ರಾಮಲಿಂಗಾ ರೆಡ್ಡಿ ವೇದಿಕೆ ಸಜ್ಜು ಮಾಡಿದ್ದಾರೆ. ಇದರ ಜೊತೆಗೆ ಲೋಕಸಭಾ ಚುನಾವಣೆ ಸೋತಿರುವ ವೀರಪ್ಪ ಮೊಯ್ಲಿ, ಕೆ ಎಚ್​ ಮುನಿಯಪ್ಪ ಅವರು ಈ ಕೂಟಕ್ಕೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಿದ್ದರಾಮಯ್ಯ ಅಣತಿಯಂತೆ ನಡೆಯುತ್ತಿದ್ದು, ಇದು ಹೀಗೆ ಮುಂದುವರೆದರೆ ನಮಗೆ ಮತ್ತೊಮ್ಮೆ ಅಧಿಕಾರ ಸಿಗುವುದು ಸುಳ್ಳಾಗಲಿದೆ. ಮೈತ್ರಿ ಸರ್ಕಾರದಲ್ಲಿ ಹಿರಿಯ ​ ನಾಯಕರಿಗೆ ಅಸ್ತಿತ್ವವೇ ಇಲ್ಲದಂತೆ ಆಗಿದ್ದು,  ಮನ್ನಣೆಯೇ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಅಸಮಾಧಾನಿತ ನಾಯಕರು ಸಿದ್ದರಾಮಯ್ಯ ಹಾಗೂ ದಿನೇಶ್​​ ಗುಂಡೂರಾವ್​ ವಿರುದ್ಧ ತಿರುಗಿ ಬೀಳಲು ಸಜ್ಜಾಗಿದ್ದಾರೆ.

ಇದನ್ನು ಓದಿ: ಸಿದ್ದರಾಮಯ್ಯರಂತೆ ಪಾದಯಾತ್ರೆ ಮೂಲಕ ಜಿಂದಾಲ್​ ಭೂ ಪರಭಾರೆ ವಿರೋಧಿಸಿ ಪಕ್ಷದ ವರ್ಚಸ್ಸು ವೃದ್ಧಿಗೆ ಸಜ್ಜಾದ ಬಿಜೆಪಿ

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಜೊತೆ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಿಎಲ್​ಪಿ ಪಟ್ಟ ತಪ್ಪಿಸಲು ಚಿಂತನೆ ನಡೆದಿದೆ. ಇನ್ನು ದಿನೇಶ್​ ಗುಂಡೂರಾವ್​ ಅನುಭವ ಕೊರತೆಯಿಂದಾಗಿ ಲೋಕಸಭಾ ಚುನಾವಣೆ ಸೋಲು ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಎರಡು ಪಟ್ಟವನ್ನು ಇತರೆ ನಾಯಕರಿಗೆ  ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.ಹಿರಿಯ ನಾಯಕರ ಈ ಕೂಟದಲ್ಲಿ ಸುಮಾರು 20 ನಾಯಕರನ್ನು ಒಗ್ಗೂಡಿಸುವ ಯೋಜನೆಯನ್ನು ರಾಮಲಿಂಗಾ ರೆಡ್ಡಿ ಹೊಂದಿದ್ದಾರೆ. ಇನ್ನು ಎಲ್ಲ ಹಿರಿಯ ನಾಯಕರು ತಮ್ಮ ಸ್ವ ಹಿತಾಸಕ್ತಿಗಾಗಿ ಈ ಕೂಟಕ್ಕೆ ಬೆಂಬಲ ನೀಡಿದ್ದು, ಶೀಘ್ರದಲ್ಲಿಯೇ ಸಿದ್ದು, ದಿನೇಶ್​ ಹಠಾವೋ ಹೆಸರಿನಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. ಇನ್ನು ಸಿದ್ದು, ದಿನೇಶ್​ ವಿರುದ್ದ ಅಸಮಾಧಾನ ಹೊಂದಿರುವ ಡಿಸಿಎಂ ಪರಮೇಶ್ವರ್​, ಡಿಕೆ ಶಿವಕುಮಾರ್​ ಕೂಡ ಈ ಮೈತ್ರಿ ಕೂಟಕ್ಕೆ ಪರೋಕ್ಷವಾಗಿ ಬೆಂಬಲವೂ ಇದೆ ಎನ್ನಲಾಗಿದೆ.

(ಮಾಹಿತಿ: ಚಿದಾನಂದ ಪಟೇಲ್​)

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ