HOME » NEWS » State » CONGRESS READY FOR LEGAL BATTLE FOR LEGISLATIVE COUNCIL CHAIRMANSHIP CPTV SHM SNVS

ಸಭಾಪತಿ ಸ್ಥಾನಕ್ಕೆ ಕಿತ್ತಾಟ; ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿದ್ದರಾದ ಸಿದ್ದರಾಮಯ್ಯ

ಬಿಜೆಪಿಗೆ ಸಭಾಪತಿ ಸ್ಥಾನ ಅಷ್ಟು ಸುಲಭಕ್ಕೆ ದಕ್ಕದಂತೆ ಮಾಡುವುದು ಹಾಗೂ ಜೆಡಿಎಸ್ನ ಮುಖವಾಡಗಳನ್ನ ಇನ್ನಷ್ಟು ಕಳಚುವುದು – ಇವು ಸಭಾಪತಿ ಸ್ಥಾನ ವಿವಾದದಲ್ಲಿ ಸಿದ್ದರಾಮಯ್ಯ ಅವರ ಸದ್ಯದ ರಣತಂತ್ರವಾಗಿದೆ.

news18-kannada
Updated:December 16, 2020, 2:18 PM IST
ಸಭಾಪತಿ ಸ್ಥಾನಕ್ಕೆ ಕಿತ್ತಾಟ; ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಸಿದ್ದರಾದ ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು(ಡಿ. 16): ನಿನ್ನೆ ವಿಧಾನಪರಿಷತ್​ನಲ್ಲಿ ನಡೆದ ಗಲಾಟೆ ಪ್ರಕರಣ ದೇಶಾದ್ಯಂತ ಜೋರು ಸುದ್ದಿಯಾಗಿದೆ. ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಪಟ್ಟು ಹಿಡಿದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ರಾಜ್ಯದ ಮಾನ ಹರಾಜು ಹಾಕಿವೆ. ಕಾಂಗ್ರೆಸ್ ಬಳಿ ಇರುವ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳಲು ಶತಾಯಗತಾಯ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ಜೆಡಿಎಸ್ ಕೂಡ ಕೈಜೋಡಿಸಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದೆ. ಆದರೆ, ಸದನ ಮುಂದೂಡಿಕೆ ಮಾಡುತ್ತಾ ನಿರ್ಣಯದ ಮೇಲಿನ ಚರ್ಚೆಗೆ ಸಭಾಪತಿ ಅವಕಾಶ ಕೊಡುತ್ತಿಲ್ಲ ಎಂಬುದು ಬಿಜೆಪಿ ಆರೋಪ. ಈ ಹಿನ್ನೆಲೆಯಲ್ಲಿ ನಿನ್ನೆ ವಿಧಾನಪರಿಷತ್​ನಲ್ಲಿ ದೊಡ್ಡ ಗಲಭೆಯೇ ಸೃಷ್ಟಿಯಾಗಿತ್ತು. ಉಪಸಭಾಪತಿ ಮೂಲಕ ಸದನ ನಡೆಸುವ ಬಿಜೆಪಿಯ ಪ್ರಯತ್ನಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಅನಿರ್ದಿಷ್ಟಾವಧಿಯವರೆಗೆ ಸದನ ಮುಂದೂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಈಗ ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗಿದೆ. ಸದನ ನಡೆಸುವಂತೆ ಸಭಾಪತಿಗೆ ಸೂಚನೆ ನೀಡುವಂತೆ ರಾಜ್ಯಪಾಲರನ್ನು ಕೋರಿಕೊಂಡಿದೆ.

ಇದೇ ವೇಳೆ, ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಕಾನೂನು ಹೋರಾಟ ಮಾಡಲು ಸಿದ್ಧಗೊಂಡಿದೆ. ಸಿದ್ದರಾಮಯ್ಯ ಕೂಡ ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡಲು ತಯಾರಿರುವುದಾಗಿ ನೇರವಾಗಿ ಹೇಳಿದ್ಧಾರೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ತುದಿಗಾಲಲ್ಲಿ ಇರುವ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನ ಸಿದ್ದರಾಮಯ್ಯ ಮೊದಲಾದ ಹಿರಿಯ ಮುಖಂಡರೇ ಸುಮ್ಮನಿರಿಸಿದ್ದಾರೆ. ಅದಕ್ಕೆ ಕಾರಣವೂ ಇದೆ. ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಬಿಜೆಪಿ ಜೊತೆ ಕೈಜೋಡಿಸಿರುವ ಜಾತ್ಯತೀತ ಜನತಾ ದಳದ ನಿಜಮುಖ ಜನರಿಗೆ ಅನಾವರಣಗೊಳ್ಳುವವರೆಗೂ ಕಾದು ನೋಡಿ ಎಂದು ಸಭಾಪತಿ ಅವರಿಗೆ ಸಿದ್ದರಾಮಯ್ಯ ತಿಳಿಸಿದ್ದಾರೆನ್ನಲಾಗಿದೆ.

ಪ್ರತಾಪ್ ಚಂದ್ರ ಶೆಟ್ಟಿ ಅವರು ಎರಡು ಬಾರಿ ರಾಜೀನಾಮೆಗೆ ಮುಂದಾಗಿದ್ದರಂತೆ. ಮೊದಲ ಬಾರಿ ಅವಿಶ್ವಾಸ ನಿರ್ಣಯ ಲಿಖಿತ ರೂಪದಲ್ಲಿ ನೀಡಿದ್ದಾಗಲೇ ಸಿದ್ದರಾಮಯ್ಯ ಬಳಿ ಅವರು ರಾಜೀನಾಮೆ ಪ್ರಸ್ತಾಪ ಮಾಡಿದ್ದರು. ನಿನ್ನೆ ಪರಿಷತ್​ನಲ್ಲಿ ಗಲಾಟೆ ನಡೆದ ನಂತರವೂ ಅವರು ರಾಜೀನಾಮೆಗೆ ಮುಂದಾಗಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಲ್ಲ.

ಇದನ್ನೂ ಓದಿ: H Vishwanath: ಜೆಡಿಎಸ್​ ಎಂಬ ಮಗು ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ; ಹೆಚ್​. ವಿಶ್ವನಾಥ್ ಲೇವಡಿ

ಜೆಡಿಎಸ್​ನ ಕೋಮುವಾದಿ ನಿಲುವು ಬಹಿರಂಗವಾಗಲಿ. ಅಲ್ಲಿಯ ತನಕ ತಾವು ರಾಜೀನಾಮೆ ನಿರ್ಧಾರಕ್ಕೆ ಬರುವುದು ಬೇಡ. ಬಿಜೆಪಿ ಬೇಕಿದ್ದರೆ ಕಾನೂನಾತ್ಮಕ ಹೋರಾಟ ಮಾಡಲಿ. ನಾವೂ ಅದಕ್ಕೆ ತಕ್ಕಂತೆ ಕಾನೂನು ಹೋರಾಟ ನಡೆಸೋಣ ಎಂದು ಸಿದ್ದರಾಮಯ್ಯ ಅವರು ಸಭಾಪತಿಗೆ ತಿಳಿಸಿದ್ದಾರೆ. ಕಲಾಪ ಮುಂದುವರಿಸುವಂತೆ ರಾಜ್ಯಪಾಲರಿಂದ ಸೂಚನೆ ಬಂದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ.

ಬಿಜೆಪಿಯವರದ್ದು ತಪ್ಪು ಎಂದ ಕೈ ನಾಯಕರು: 

ನಿನ್ನೆ ನಡೆದ ಘಟನೆಯನ್ನು ರಾಜ್ಯದ ಜನರು ನೋಡಿದ್ಧಾರೆ. ತಾನು ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಬಿಜೆಪಿ ಸದಸ್ಯರು ನಡೆದುಕೊಂಡ ರೀತಿ ಸರಿ ಇತ್ತಾ? ಅವರು ಮಾಡಿದ ರೀತಿಯಲ್ಲೇ ನಾವು ನಡೆದುಕೊಂಡಿದ್ದೇವೆ. ನಮ್ಮನ್ನು ಕೊಲೆ ಮಾಡಲು ಬಂದವರನ್ನು ನೋಡಿಕೊಂಡು ಸುಮ್ಮನೆ ಇರಬೇಕಾ? ಸುಮ್ಮನೆ ಇದ್ದಿದ್ದರೆ ನಾವು ಸಭಾಪತಿ ಸ್ಥಾನವನ್ನು ಕಳೆದುಕೊಳ್ಳಬೇಕಿತ್ತು. ಇದನ್ನು ತಪ್ಪಿಸಿದ ನಮ್ಮ ಪರಿಷತ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಜಿ.ಸಿ. ಚಂದ್ರಶೇಖರ್ ತಿಳಿಸಿದ್ಧಾರೆ.ಇದೇ ವೇಳೆ, ಬಿ.ಕೆ. ಹರಿಪ್ರಸಾದ್ ಅವರು ನಿನ್ನೆ ಘಟನೆಯನ್ನು ಪ್ರಸ್ತಾಪಿಸಿ ಮಾಧ್ಯಮದವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರ ವಿರುದ್ಧ ಕಾನೂನನ್ನು ನಾವು ಪರಿಷತ್​ನಲ್ಲಿ ಬೀಳಿಸಿದೆವು. ಈ ಸೇಡಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪ್ಲಾನ್ ಮಾಡಿ ಸದನ ಹಾಳು ಮಾಡಿದರು. ನಿನ್ನೆ ನಡೆದ ಘಟನೆಯಲ್ಲಿ ಕಾಂಗ್ರೆಸ್ ಪಕ್ಷದವರನ್ನ ತಪ್ಪಾಗಿ ಬಿಂಬಿಸಲಾಗಿದೆ. ರೈತರ ಪರ ನಿಲುವು ತೆಗೆದುಕೊಂಡಿದ್ದಕ್ಕೆ ಈ ರೀತಿ ಮಾಡಲಾಗಿದೆ. ನಿನ್ನೆ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದ ಬಿಜೆಪಿ ಸದಸ್ಯರೇ. ಕಾಂಗ್ರೆಸ್​ನ ನಾರಾಯಣಸ್ವಾಮಿ ನಿನ್ನೆಯ ಮ್ಯಾನ್ ಆಫ್ ದ ಮ್ಯಾಚ್ ಆಗಿದ್ದಾರೆ. ಮಾಧ್ಯಮಗಳು ತಪ್ಪಾಗಿ ವರದಿ ಮಾಡುತ್ತಿವೆ. ವಾಸ್ತವದಲ್ಲಿ ನಡೆದದ್ದೇ ಬೇರೆ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ವರದಿ: ಚಿದಾನಂದ ಪಟೇಲ್ / ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: December 16, 2020, 2:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories