ಬೆಲೆ ಏರಿಕೆ ಬರೆ: ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ವಿದ್ಯುತ್, ನೀರು, ಆಸ್ತಿ ತೆರಿಗೆ ಇತ್ಯಾದಿಗಳ ಬೆಲೆ ಏರಿಕೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಪಕ್ಷ ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನ ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡರು.

ಮೌರ್ಯ ಸರ್ಕಲ್​ನಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮೌರ್ಯ ಸರ್ಕಲ್​ನಲ್ಲಿ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

  • Share this:
ಬೆಂಗಳೂರು(ನ. 28): ಕೋವಿಡ್ ಸಂಕಷ್ಟ ಕಾಲದಲ್ಲಿ ವಿವಿಧ ರೀತಿಯಲ್ಲಿ ಬೆಲೆ ಏರಿಸಲು ಹೊರಟಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದೆ. ಮೌರ್ಯ ಸರ್ಕಲ್​ನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿ.ಎಸ್. ಉಗ್ರಪ್ಪ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವನ್ನೂ ಕಾಂಗ್ರೆಸ್ ನಾಯಕರು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ವಿದ್ಯುತ್, ನೀರಿನ, ಆಸ್ತಿ ತೆರಿಗೆ ಇತ್ಯಾದಿಗಳ ದರ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರಾಜ್ಯಸಭಾ ಸಂಸದ ಬಿ.ಕೆ. ಹರಿಪ್ರಸಾದ್, ರೈತರ ವಿರುದ್ಧ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ. ರೈತರನ್ನು ಬೀದಿಪಾಲು ಮಾಡುವ ಭೂಸುಧಾರಣಾ ಕಾಯ್ದೆಯನ್ನು ನಾವು ವಿಧಾನಪರಿಷತ್​ನಲ್ಲಿ ಕೆಡವಿದೆವು. ಹೀಗಾಗಿ, ಮೇಲ್ಮನೆ ಸಭಾಪತಿಯನ್ನೇ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ತರುತ್ತಿದ್ದಾರೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ತಂದಿರುವ ಈ ನೋ ಕಾನ್ಫಿಡೆನ್ಸ್ ಮೋಷನ್ ಅನ್ನು ಜೆಡಿಎಸ್​ನವರು ವಿರೋಧಿಸಬೇಕು. ಇಲ್ಲವಾದರೆ ಜಾತ್ಯತೀತ ಜನತಾ ದಳ ಕೂಡ ರೈತ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದ ಬಿ.ಕೆ. ಹರಿಪ್ರಸಾದ್, ವಿದ್ಯುತ್ ಸೇರಿ ಹಲವು ದರ ಏರಿಕೆ ಆಗಿದೆ. ಪೆಟ್ರೋಲ್ ದರ ಏರಿಕೆ ಆಗುತ್ತಲೇ ಇದೆ. ಪ್ರಧಾನಿ ತಿಂಗಳಿಗೊಮ್ಮೆ ಮನ್ ಕೀ ಬಾತ್ ಮಾಡುತ್ತಾರೆ. ಎಲ್ಲೂ ಅವರು ಈ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಈರುಳ್ಳಿ ಬೆಲೆ ಹೆಚ್ಚಾಗಿದೆ, ಗೋದಿ ಬೆಲೆ ಹೆಚ್ಚಾಗಿದೆ. ನಾನು ಮಶ್ರೂಮ್ ತಿನ್ನುತ್ತೇನೆ ಅಂತ ಮೋದಿ ಹೇಳ್ತಾರೆ. ಗೋದಿ ಬೆಲೆ ಏರಿಕೆಗೂ ಅಣಬೆಗೂ ಏನು ಸಂಬಂಧ ಎಂದು ಪ್ರಶ್ನಿಸಿ ವ್ಯಂಗ್ಯ ಮಾಡಿದರು.

ಇದನ್ನೂ ಓದಿ: ಬಿಎಸ್​ವೈ ಪರ ನಿಲ್ಲಲು ಎಸ್​ಟಿಎಸ್ ಕರೆದಿದ್ದ ಮಿತ್ರಮಂಡಳಿ ಸಭೆ ಫ್ಲಾಪ್; ಬುಸುಗುಟ್ಟಿದ ಸದಸ್ಯರು

ಪ್ರಧಾನಿ ನರೇಂದ್ರ ಮೋದಿ ಅವರು ಜನರ ಸಮಸ್ಯೆಗಳನ್ನ ಪರಿಹರಿಸಲು ಒತ್ತು ನೀಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಿತ್ಯ ಅತ್ಯಾಚಾರಗಳು ಸಂಭವಿಸುತ್ತಿವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಆದರೆ, ಯುಪಿಗೆ ಅತ್ಯುತ್ತಮ ರಾಜ್ಯ ಎಂದು ಸರ್ಟಿಫಿಕೇಟ್ ಕೊಡುತ್ತಾರೆ ಎಂದು ಬಿ.ಕೆ. ಹರಿಪ್ರಸಾದ್ ಟೀಕಿಸಿದರು.

BK Hariprasad
ಬಿ.ಕೆ. ಹರಿಪ್ರಸಾದ್ ಮಾತನಾಡುತ್ತಿದ್ದುದು.


ಕೇಂದ್ರ ಬಿಜೆಪಿ ನಾಯಕರಾಗಿದ್ದ ಮುರಳಿ ಮನೋಹರ್ ಜೋಷಿ, ಲಾಲಕೃಷ್ಣ ಆಡ್ವಾಣಿ ಅವರು ಎಲ್ಲಿದ್ದಾರೆ ಈಗ. ಅವರನ್ನ ಮೋದಿ ಮೂಲೆಗೆ ತಳ್ಳಿದ್ದಾರೆ. ಹಾಗೆಯೇ ಯಡಿಯೂರಪ್ಪರನ್ನೂ ಮೂಲೆಗೆ ತಳ್ಳುತ್ತಿದ್ಧಾರೆ. ಅದಕ್ಕೆ ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಆರೆಸ್ಸೆಸ್​ನವರು ಇಲ್ಲದ ಕಾರ್ಯಕ್ರಮ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಲವ್ ಜಿಹಾದ್ ಕಾನೂನು ತರುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ ಎಂದು ಅವರು ಪ್ರಶ್ನೆ ಮಾಡಿದರು.

ರಾಮಲಿಂಗಾರೆಡ್ಡಿ ಟೀಕೆ:

ಕೆಇಬಿಯವರು ಒಂದು ಯೂನಿಟ್ ವಿದ್ಯುತ್​ಗೆ 40 ಪೈಸೆ ಹೆಚ್ಚಳ ಮಾಡಿದ್ದಾರೆ. ಆಸ್ತಿ ತೆರಿಗೆ ಹೆಚ್ಚಳ ಮಾಡುವ ತೀರ್ಮಾನ ಮಾಡಲಾಗಿತ್ತು. ಜನರು ವಿರೋಧಿಸಿದ್ದರಿಂದ ಸುಮ್ಮನಿದ್ದಾರೆ. ಮುಂದೆ ಅದನ್ನೂ ಮಾಡುತ್ತಾರೆ. ಹಾಗೆಯೇ ನೀರಿನ ದರ ಹೆಚ್ಚಿಸಿದ್ದಾರೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ 60 ರೂ ಇದ್ದ ಪೆಟ್ರೋಲ್ ಬೆಲೆ ಈಗ 90ರ ಸಮೀಪಕ್ಕೆ ಬಂದಿದೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಟೀಕಿಸಿದರು.

ಇದನ್ನೂ ಓದಿ: ನಿಮಗೆ ಪ್ರಚಾರದ ಹುಚ್ಚಿದ್ದರೆ ರಾಜೀನಾಮೆ ನೀಡಿ ಎಲೆಕ್ಷನ್​​ಗೆ ನಿಂತ್ಕೊಳಿ; ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಕಿಡಿ

ಮೋದಿ ಆಡಳಿತದ ವಿರುದ್ಧ ಗರಂ:

ನರೇಂದ್ರ ಮೋದಿ ಹುಟ್ಟಾ ಸುಳ್ಳುಗಾರ. ನಾನು ನರೇಂದ್ರ ಮೋದಿ ಎಂದು ಅವರು ಹೇಳುವುದಷ್ಟೇ ಸತ್ಯದ ಮಾತು. ನರೇಂದ್ರ ಮೋದಿ ಅವರು ಕೊರೋನಾದಲ್ಲಿ ಶೀಘ್ರದಲ್ಲೇ ವಿಶ್ವದ ನಂಬರ್ ಒನ್ ಆಗಲಿದ್ದಾರೆ. ಜಿಡಿಪಿಯಲ್ಲೂ ಸಹ ಕೆಳಗಿನಿಂದ ಅವರು ನಂಬರ್ ಒನ್. ಭ್ರಷ್ಟಾಚಾರದಲ್ಲೂ ನಂಬರ್ ಒನ್. ಇಂಥ ಪ್ರಧಾನಮಂತ್ರಿಯಿಂದ ಏನಾದರೂ ಒಳ್ಳೆಯದನ್ನು ನಿರೀಕ್ಷಿಸಲು ಆಗುತ್ತಾ? ಪ್ರತಿಯೊಂದರಲ್ಲೂ ಬೆಲೆ ಏರಿಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಮಾಡುತ್ತಿದ್ದೆವಾದರೂ ನೋಡಿಕೊಂಡು ಮಾಡುತ್ತಿದ್ದೆವು. ಈಗ ಕೊರೋನಾ ಕಾಲದಲ್ಲಿ ಬೆಲೆ ಏರಿಕೆ, ತೆರಿಗೆ ಹೇರಿಕೆ ಬೇಡ ಎಂದರೂ ಕೇಳದೆ ಸರ್ಕಾರ ಜನರ ಮೇಲೆ ಚಪ್ಪಡಿ ಹಾಕುವ ಕೆಲಸ ಮಾಡುತ್ತಿದೆ. ಇಂಥ ಭ್ರಷ್ಟ ಸರ್ಕಾರ ತೊಲಗಬೇಕು. ಜಿಲ್ಲಾ ಮಟ್ಟದಲ್ಲಿ ಈ ಕೆಲಸ ನಾವು ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಮಲಿಂಗಾ ರೆಡ್ಡಿ ಕರೆ ನೀಡಿದರು.

ಸುಳ್ಳು ಹೇಳೋದ್ರಲ್ಲಿ ಮೋದಿಗೆ ನೊಬೆಲ್: ಉಗ್ರಪ್ಪ

ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಈ ಸಂದರ್ಭದಲ್ಲಿ ವಿ.ಎಸ್. ಉಗ್ರಪ್ಪ ಟೀಕಿಸಿದರು. ಒಂದು ಸಮೀಕ್ಷೆ ಪ್ರಕಾರ ಇಡೀ ಏಷ್ಯಾದಲ್ಲಿ ಭಾರತವೇ ಅತ್ಯಂತ ಭ್ರಷ್ಟ ರಾಷ್ಟ್ರವಂತೆ. ಹೆಣ್ಣುಮಕ್ಕಳ ಮೇಲೆ ಅತಿ ಹೆಚ್ಚು ಅತ್ಯಾಚಾರ ಆಗುವುದು ಭಾರತದಲ್ಲೇ ಅಂತ ಆ ಸಮೀಕ್ಷೆ ಹೇಳುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಮೋದಿ ಅವರು ಬಡವರಿಗೆ 15 ಲಕ್ಷ ರೂ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಈಗ ಜನರನ್ನ ಲೂಟಿ ಮಾಡುವುದು ಬಿಟ್ಟು ಮೋದಿ ಬೇರೆ ಏನು ಮಾಡಿದಾರೆ ಎಂದು ಉಗ್ರಪ್ಪ ಪ್ರಶ್ನೆ ಮಾಡಿದರು.

ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಛಾ ತೈಲ ಬೆಲೆ ಬಹಳ ದುಬಾರಿ ಇತ್ತು. ಈಗ ಅದು ಬಹಳ ಕಡಿಮೆ ಆಗಿದೆ. ಮೋದಿ ಅವರಿಗೆ ಬದ್ಧತೆ ಇದ್ದಿದ್ದರೆ ಪೆಟ್ರೋಲ್ ಅನ್ನು ಈಗ 15-20 ರೂಪಾಯಿಗೆ ಕೊಡಲು ಸಾಧ್ಯವಾಗುತ್ತಿತ್ತು. ಇನ್ನು, ಲಾಕ್ ಡೌನ್ ಸಮಯದಲ್ಲಿ ಹೇಳಿದ್ರು, ಮಹಾಭಾರತ 18 ದಿನ ನಡೆದಿತ್ತು. ಈ 18 ದಿನದಲ್ಲೇ ಕೊರೋನಾವನ್ನು ಸೋಲಿಸೋಣ ಎಂದಿದ್ದರು. ಆಗ ದೇಶದಲ್ಲಿ 500 ಪ್ರಕರಣ ಮಾತ್ರ ಇತ್ತು. ಕರ್ನಾಟಕದಲ್ಲಿ ಒಂದು ಮಾತ್ರ ಇತ್ತು. ಈಗ ದೇಶದಲ್ಲಿ 90 ಲಕ್ಷ , ರಾಜ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ. ಮೋದಿ ಮತ್ತು ಯಡಿಯೂರಪ್ಪನವರೇ ನೀವು ಕೊರೋನಾವನ್ನು ಎಲ್ಲಿ ಕಂಟ್ರೋಲ್ ಮಾಡಿದಿರಿ? ಸುಳ್ಳು ಹೇಳುವುದರಲ್ಲಿ ಯಾರಿಗಾದರೂ ನೊಬೆಲ್ ಕೊಟ್ಟರೆ ಅದು ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರಿಗೆ ಸಿಗಬೇಕು ಎಂದು ಉಗ್ರಪ್ಪ ಕಟು ಟೀಕೆ ಮಾಡಿದರು.

ವರದಿ: ಆನಂದ್ ಸಾಲುಂದಿ
Published by:Vijayasarthy SN
First published: