ಆಡಳಿತ - ವಿರೋಧ ಪಕ್ಷಗಳ ನಡುವಿನ ಜಗಳದಲ್ಲಿ ಬಡವಾದ ಇಂದಿರಾ ಕ್ಯಾಂಟೀನ್; ಬಡವರ ತುತ್ತಿಗೂ ಕೈಇಡಲಿದೆಯಾ ಸರ್ಕಾರ?

ಇಂದಿರಾ ಕ್ಯಾಂಟೀನ್ ಗೆ ಹಣ ಬಿಡುಗಡೆ ವಿಚಾರ ಇದೀಗ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆದರೆ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಆಡಳಿತ ವಿರೋಧ ಪಕ್ಷಗಳ ನಡುವಿನ ಹಗ್ಗಾಜಗ್ಗಾಟ ಕೊನೆಗೂ ಬಡವರ ಒಂದೊಂತು ಊಟಕ್ಕೂ ಕುತ್ತು ತರಲಿರುವುದು ಮಾತ್ರ ವಿಪರ್ಯಾಸ.

MAshok Kumar | news18-kannada
Updated:August 28, 2019, 12:54 PM IST
ಆಡಳಿತ - ವಿರೋಧ ಪಕ್ಷಗಳ ನಡುವಿನ ಜಗಳದಲ್ಲಿ ಬಡವಾದ ಇಂದಿರಾ ಕ್ಯಾಂಟೀನ್; ಬಡವರ ತುತ್ತಿಗೂ ಕೈಇಡಲಿದೆಯಾ ಸರ್ಕಾರ?
ಇಂದಿರಾ ಕ್ಯಾಂಟೀನ್
  • Share this:
ಅಶೋಕ್ ಎಂ ಭದ್ರಾವತಿ

ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಕಾಂಗ್ರೆಸ್ ಎಂಬುದಕ್ಕಿಂತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆ ಎಂದರೂ ತಪ್ಪಾಗಲಾರದು. ನಗರವಾಸಿ ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಅವರ ಹೊಟ್ಟೆ ತುಂಬಿಸುವ ಸಲುವಾಗಿ ರಾಜ್ಯ ಸರ್ಕಾರ 2017ರ ಆಗಸ್ಟ್​. 15 ರ ಸ್ವತಂತ್ರ್ಯ ದಿನಾಚರಣೆಯಂದು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಅಲ್ಲದೆ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿತ್ತು. 

ಬೆಳಗ್ಗೆ 5 ರೂ. ಗೆ ತಿಂಡಿ ಹಾಗೂ ಉಳಿದ ಎರಡೂ ಹೊತ್ತು 10 ರೂ. ಗೆ ಊಟ ಕೊಡುವ ಈ ಯೋಜನೆ ಅಂದಿನ ವಿರೋಧ ಪಕ್ಷವಾದ ಬಿಜೆಪಿಯ ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ, ಜನರ ನಡುವೆ ಈ ಯೋಜನೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರ ಸುಳ್ಳಲ್ಲ.

ಬಿಬಿಎಂಪಿ ವ್ಯಾಪ್ತಿಯ 173 ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಕ್ಯಾಂಟೀನ್ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದ ಸ್ಥಳಗಳಲ್ಲಿ 18 ಮೊಬೈಲ್ ಕ್ಯಾಂಟೀನ್​ಗಳನ್ನೂ ತೆರೆಯಲಾಗಿತ್ತು. ಬೆಂಗಳೂರು ಹೊರತುಪಡಿಸಿ ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಕೊಡಗು ನಂತಹ  ದ್ವಿತೀಯ ದರ್ಜೆಯ ನಗರಗಳಲ್ಲೂ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು.

ರಾಜಧಾನಿಯ ಸುಮಾರು 14.47 ಲಕ್ಷ ಬಡಜನರು ಪ್ರತಿನಿತ್ಯ ಇಂದಿರಾ ಕ್ಯಾಂಟೀನ್ ಊಟದ ಮೇಲೆ ಅವಲಂಭಿತರಾಗಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.

ಹತ್ತಾರು ಟೀಕೆ ಟಿಪ್ಪಣಿ ವಿರೋಧಗಳ ನಡುವೆಯೂ ಕಾಂಗ್ರೆಸ್ ಸರ್ಕಾರದ ಯಶಸ್ವಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಸಹ ಒಂದು ಎನ್ನಲು ಅಡ್ಡಿಯಿಲ್ಲ. ಆದರೆ, ನಗರ ಪ್ರದೇಶದ ಬಡವರ ಹೊಟ್ಟೆ ತುಂಬಿಸುತ್ತಿದ್ದ ಈ ಇಂದಿರಾ ಕ್ಯಾಂಟೀನ್ ಇದೀಗ ಸ್ಥಗಿತಗೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಈ ಯೋಜನೆಗೆ ಹಣ ವಿನಿಯೋಗಿಸಲು ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಹೀಗೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಇಂದಿರಾ ಕ್ಯಾಂಟೀನ್ ವಾರ್ಷಿಕ ಬಜೆಟ್ ಎಷ್ಟು?ಆಗಸ್ಟ್.15, 2017ರ ಸ್ವಾತಂತ್ರ್ಯ ದಿನಾಚರಣೆಯಂದು ಇಂದಿರಾ ಕ್ಯಾಂಟೀನ್​ಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಈ ಕ್ಯಾಂಟೀನ್​ಗಳಿಗೆ ಆಹಾರ ಸರಬರಾಜು ಮಾಡುವ ಹೊಣೆಯನ್ನು ಅಂದಿನ ರಾಜ್ಯ ಸರ್ಕಾರ ರಿವಾಡ್ರ್ಸ್ ಮತ್ತು ಶೆಫ್ ಟಾಕ್ ಎಂಬ ಎರಡು ಸಂಸ್ಥೆಗೆ ವಹಿಸಿತ್ತು.

ಸಚಿವ ಸಂಪುಟದಲ್ಲಿ ಇಂದಿರಾ ಕ್ಯಾಂಟೀನ್ ಕುರಿತ ಚರ್ಚೆಯ ಬಳಿಕ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್​ಗೆ 100 ಕೋಟಿ ಹಣವನ್ನು ಬಜೆಟ್​ನಲ್ಲಿ ಮೀಸಲಿಟ್ಟಿದ್ದರು. ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ ಹೆಚ್ಚುವರಿಯಾಗಿ 24.37 ಕೋಟಿ ವ್ಯಯಿಸಿತ್ತು. ಹೀಗಾಗಿ 2018-19ರ ಸಾಲಿನಲ್ಲಿ  ರಾಜ್ಯ ಸರ್ಕಾರ 145 ಕೋಟಿ ಹಣ ಮೀಸಲಿಟ್ಟಿತ್ತು. ಕೊನೆಗೆ 115 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿರಾ ಕ್ಯಾಂಟೀನ್ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಜೊತೆ ಜೊತೆಗೆ ಹಣದ ಕೊರತೆಯೂ ಎದ್ದು ಕಾಣಿಸುತ್ತಿದೆ.

ಅಸಲಿಗೆ ಇಂದಿರಾ ಕ್ಯಾಂಟೀನ್ ಎಂಬುದು ರಾಜ್ಯ ಸರ್ಕಾರದ ಯೋಜನೆ. ಮಹಾನಗರ ಪಾಲಿಕೆಯಲ್ಲಿರುವ ಎಲ್ಲಾ ಕ್ಯಾಂಟೀನ್​ಗಳ ಕಾರ್ಯಾಚರಣೆ ಕುರಿತ ಉಸ್ತುವಾರಿ ಹಾಗೂ ಜವಾಬ್ದಾರಿ ಪಾಲಿಕೆಯದ್ದಾದರೂ ಹಣ ಮಾತ್ರ ರಾಜ್ಯ ಸರ್ಕಾರದಿಂದಲೇ ಬಿಡುಗಡೆಯಾಗಬೇಕು. ಪಾಲಿಕೆಯ ಬಜೆಟ್​ಗೂ ಇಂದಿರಾ ಕ್ಯಾಂಟೀನ್​ಗೂ ಯಾವುದೇ ಸಂಬಂಧ ಇಲ್ಲ. 2019-2020ರ ಸಾಲಿನಲ್ಲಿ ಇಂದಿರಾ ಕ್ಯಾಂಟಿನ್ ಹೆಸರಿನಲ್ಲಿ ಬಿಡುಗಡೆಯಾಗಬೇಕಾದ ಹಣ ಜೂನ್-ಜುಲೈ ಅಂತ್ಯದ ವೇಳೆಗೆ ಬಿಡುಗಡೆಯಾಗಬೇಕಿತ್ತು. ಆದರೆ, ಈವರೆಗೆ ಹಣ ಬಿಡುಗಡೆಯಾಗಿಲ್ಲ.

ಈ ಕುರಿತು ಈಗಾಗಲೇ ಪಾಲಿಕೆ ಸದಸ್ಯರ ಜೊತೆ ಚರ್ಚೆ ನಡೆಸಿದ್ದ ಹಿಂದಿನ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, “2019-20ರ ಸಾಲಿನ ಇಂದಿರಾ ಕ್ಯಾಂಟೀನ್ ಬಜೆಟ್ ಹಣ 210 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕಳೆದ ಜನವರಿಯಲ್ಲೇ ಸವಿವರವಾಗಿ ಪತ್ರ ಬರೆಯಲಾಗಿದೆ. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಪಾಲಿಕೆಯ ಬಜೆಟ್​ನಿಂದ ಹಣ ವಿನಿಯೋಗಿಸುವುದು ಸಾಧ್ಯವಿಲ್ಲ,” ಎಂದು ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯಿಸಿದರು.

ಅಲ್ಲದೆ, "ಈ ಕುರಿತು ಇದೇ ತಿಂಗಳ 31 ರಂದು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಇಂದಿರಾ ಕ್ಯಾಂಟೀನ್​ಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ, ಅದನ್ನು ಮುಚ್ಚಬೇಕೆ ಅಥವಾ ಪಾಲಿಕೆಯಿಂದಲೇ ನಡೆಸಬೇಕೆ ಎಂಬುದರ ಕುರಿತು ನಿರ್ಣಯ ತೆಗೆದುಕೊಳ್ಳಲಿದ್ದಾರೆ," ಎಂದು ಹಿಂದಿನ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನೂತನ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಂಜುನಾಥ್​ರನ್ನು ನ್ಯೂಸ್18 ಸಂಪರ್ಕಿಸಿದೆ.

ಇಂದಿರಾ ಕ್ಯಾಂಟೀನ್ ಕುರಿತು ಬಿಜೆಪಿಯ ಧೋರಣೆ ಏನು?

ವಾಸ್ತವದಲ್ಲಿ ಆರಂಭದ ದಿನದಿದಂಲೂ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಅನ್ನು ಬಿಜೆಪಿ ಸರ್ಕಾರ ವಿರೋಧಿಸುತ್ತಲೇ ಇದೆ. ಈ ನಡುವೆ ರಾಜ್ಯದ ಉತ್ತರ ಕರ್ನಾಟಕ ಹಾಗೂ ಕೊಡಗಿನಲ್ಲಿ ದಿಢೀರನೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಸಾವಿರಾರು ಕೋಟಿ ನಷ್ಟ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಆರ್ಧಿಕ ಮುಗ್ಗಟ್ಟಿಗೆ ಸಿಲುಕಿದೆ. ಹೀಗಾಗಿ ಹಣ ಉಳಿತಾಯ ಮಾಡುವ ದಾರಿಯ ಕುರಿತು ಸಿಎಂ ಯಡಿಯೂರಪ್ಪ ಕಳೆದ ತಿಂಗಳೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ಮಾಹಿತಿ ಕೇಳಿದ್ದರು.

ಈ ವೇಳೆ ಅಧಿಕಾರಿಗಳು ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆಗೆ ಕತ್ತರಿ ಹಾಕುವ ಸಲಹೆ ನೀಡಿದ್ದರು, ಈ ನಡುವೆ ಕಾಂಗ್ರೆಸ್ ಪಕ್ಷದ ಟೀಕೆಯಿಂದಾಗಿ ಸ್ವತಃ ಯಡಿಯೂರಪ್ಪ “ಜನಪ್ರಿಯ ಯೋಜನೆಯಾದ ಅನ್ನಭಾಗ್ಯಕ್ಕೆ ಕತ್ತರಿಹಾಕುವ ಯಾವುದೇ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ,” ಎಂದು ಹೇಳಿಕೆ ನೀಡಿದ್ದರು. ಆದರೆ, ಇಂದಿರಾ ಕ್ಯಾಂಟೀನ್​ಗೆ ಹಣ ಬಿಡುಗಡೆ ಮಾಡುವ ಕುರಿತು ಅವರು ಯಾವುದೇ ಮಾಹಿತಿ ನೀಡದೆ ಇರುವುದು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದೀಗ ಆರೋಪ-ಪತ್ಯಾರೋಪಕ್ಕೆ ವೇದಿಕೆಯಾಗಿದೆ ಇಂದಿರಾ ಕ್ಯಾಂಟೀನ್

ಜನಪ್ರಿಯ ಇಂದಿರಾ ಕ್ಯಾಂಟೀನ್​ಗಳನ್ನು ಮುಚ್ಚುವ ಕುರಿತ ಸುದ್ದಿ ಹಬ್ಬುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಇಂದಿರಾ ಕ್ಯಾಂಟೀನ್ ಯೋಜನೆ ಬಡವರ ಯೋಜನೆ. ಇದು ಅತ್ಯಂತ ಮಹತ್ವದ ಕಾರ್ಯಕ್ರಮ. ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಬೇಕು, ಈ ಬಗ್ಗೆ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ, ಬಿಬಿಎಂಪಿ ಆಯುಕ್ತರ ಜೊತೆಗೆ ಮಾತುಕತೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ನಿಲ್ಲಿಸಬಾರದು,” ಎಂದು ಒತ್ತಾಯಿಸಿದ್ದಾರೆ.

ಆದರೆ, ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾವದ ಕುರಿತು ಸ್ಪಷ್ಟನೆ ನೀಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, “ಇಂದಿರಾ ಕ್ಯಾಂಟೀನ್​ಗೆ ಕಳೆದ ಮೈತ್ರಿ ಸರ್ಕಾರವೇ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಆಗ ಹಣ ಯಾಕೆ ಬಿಡುಗಡೆ ಮಾಡಿಲ್ಲ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ಯೋಜನೆಯನ್ನು ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ಬದಲಾಗಿ ಈ ಯೋಜನೆಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆ ಎಳೆಯಲಾಗುವುದು," ಎಂದು ಪ್ರತಿಕ್ರಿಯಿಸಿದ್ಧಾರೆ.

"ಅವ್ಯವಹಾರದ ತನಿಖೆ ಆಗುವವರೆಗೆ ಹಣ ಬಿಡುಗಡೆ ಮಾಡದೆ ಇರಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಅಲ್ಲದೆ ಮೂರು ತಿಂಗಳ ಒಳಗಾಗಿ ತನಿಖಾ ವರದಿ ನೀಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ತನಿಖೆಯ ನಂತರ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಜನರಿಗೆ ಮತ್ತಷ್ಟು ಗುಣಮಟ್ಟದ ಆಹಾರ ನೀಡಬೇಕು ಎಂಬುದೇ ರಾಜ್ಯ ಬಿಜೆಪಿ ಸರ್ಕಾರದ ಉದ್ದೇಶ,” ಎಂದು ತಿಳಿಸಿದ್ದಾರೆ.

ಒಟ್ಟಾರೆ ಇಂದಿರಾ ಕ್ಯಾಂಟೀನ್ ಗೆ ಹಣ ಬಿಡುಗಡೆ ವಿಚಾರ ಇದೀಗ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆದರೆ, ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಆಡಳಿತ-ವಿರೋಧ ಪಕ್ಷಗಳ ನಡುವಿನ ಹಗ್ಗಾಜಗ್ಗಾಟ ಬಡವರ ಒಂದೊತ್ತು ಊಟಕ್ಕೆ ಕೈ ಇಡುವಂತಾಗಿರುವುದು ಮಾತ್ರ ವಿಪರ್ಯಾಸ.
First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ