ಪ್ರತಿ ಕ್ವಿಂಟಲ್ ತೊಗರಿಗೆ 7500 ರೂಪಾಯಿ ಬೆಲೆಗೆ ಆಗ್ರಹ ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕಾಂಗ್ರೆಸ್

ರಾಜ್ಯ ಸರ್ಕಾರವೂ ಪ್ರೋತ್ಸಾಹ ಧನ ನೀಡಿದಲ್ಲಿ ರೈತರಿಗೆ ನೆರವಾಗಲಿದೆ. ಕ್ವಿಂಟಲ್ ಗೆ ಕನಿಷ್ಟ 1500 ರೂಪಾಯಿ ಪ್ರೋತ್ಸಾಹ ಧನ ಕೊಡುವಂತ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ

ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ನಾಯಕರು

  • Share this:
ಕಲಬುರ್ಗಿ (ಡಿಸೆಂಬರ್​. 15): ಕಲಬುರ್ಗಿ ತೊಗರಿಯ ಕಣಜ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ. ಆದರೆ, ಈ ವರ್ಷ ತೊಗರಿಯ ಕಣಜದಲ್ಲಿ ತಲ್ಲಣದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸುರಿದ ಸತತ ಮಳೆ ಮತ್ತು ನಂತರ ಭೀಮಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ತೊಗರಿಯ ಮೇಲೆ ತೀವ್ರ ಪರಿಣಾಮಗಳಾಗಿವೆ. ಶೇ. 60ಕ್ಕೂ ಹೆಚ್ಚು ತೊಗರಿ ಬೆಳೆಯುವ ಪ್ರದೇಶ ಹಾನಿಗೆ ತುತ್ತಾಗಿದೆ. ಮತ್ತೊಂದೆಡೆ ಇದ್ದಬದ್ದ ಬೆಳೆಯಿಂದಲೂ ಸೂಕ್ತ ಇಳುವರಿ ಬರಲಾರದ ಸ್ಥಿತಿ ಇದೆ. ಈಗಾಗಲೇ ತೊಗರಿಯ ಕಟಾವು ಆರಂಭಗೊಂಡಿದ್ದು, ಪ್ರತಿ ವರ್ಷಕ್ಕೆ ಹೋಲಿಸಿದಲ್ಲಿ ಕಡಿಮೆ ಇಳುವರಿ ಬರುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ. ಇದರ ನಡುವೆಯೇ ತೊಗರಿ ಬೆಳೆಗಾರರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.  ಪ್ರತಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರ 6 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ.

ಜೊತೆಗೆ ರಾಜ್ಯ ಸರ್ಕಾರವೂ ಪ್ರೋತ್ಸಾಹ ಧನ ನೀಡಿದಲ್ಲಿ ರೈತರಿಗೆ ನೆರವಾಗಲಿದೆ. ಕ್ವಿಂಟಲ್ ಗೆ ಕನಿಷ್ಟ 1500 ರೂಪಾಯಿ ಪ್ರೋತ್ಸಾಹ ಧನ ಕೊಡುವಂತ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿ ಜಿಲ್ಲೆ ತೊಗರಿಯ ಕಣಜ ಎಂದೆನಿಸಿಕೊಂಡಿದೆ. ಪ್ರತಿ ವರ್ಷ 40 ರಿಂದ 45 ಲಕ್ಷ ಕ್ವಿಂಟಲ್ ಬೆಳೆಯಲಾಗುತ್ತದೆ. ಆದರ ಈ ಬಾರಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿದೆ. ಅತಿವೃಷ್ಟಿ, ಪ್ರವಾಹಗಳಿಂದ ತೀವ್ರ ಹಾನಿ ತುತ್ತಾಗಿದೆ. ತೊಗರಿಯ ಇಳುವರಿಯಲ್ಲಿಯೂ ಕುಂಠಿತಗೊಂಡಿದ್ದು, ರೈತರು ಹಾನಿಯ ಭೀತಿ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ 6 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆಯಾಗಿದೆ. ಆದರೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ಘೋಷಿಸಿಲ್ಲ. ಕನಿಷ್ಠ 1500 ರೂಪಾಯಿ ಪ್ರೋತ್ಸಾಹ ಧನ ಘೋಷಿಸಬೇಕು. ಕೇವಲ ಹಸಿರು ಶಾಲು ಹಾಕಿಕೊಂಡರೆ, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರ ಯಡಿಯೂರಪ್ಪ ರೈತ ಪರ ಆಗಲ್ಲ. ರೈತರ ಪರ ಏನು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಅವರು ಹೇಳಲಿ ಎಂದಿದ್ದಾರೆ.

ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಬೇಕು. ಈ ನಿಟ್ಟಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಈ ಭಾಗದ ಶಾಸಕರು ಸಿಎಂ ಅವರನ್ನು ಭೇಟಿಯಾಗಿ, ತೊಗರಿಗೆ ಪ್ರೋತ್ಸಾಹ ಧನ ಕೊಡುವಂತೆ ಆಗ್ರಹಿಸುತ್ತೇವೆ ಎಂದರು. ಇದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ತೊಗರಿ ಬೆಳೆಗಾರರ ಪರವಾಗಿ ಬೀದಿಗಿಳಿದು ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಅಜಯಸಿಂಗ್ ಎಚ್ಚರಿಸಿದ್ದಾರೆ.

ಮೂರು ತಿಂಗಳ ನಂತರ ನೋಡಲು ಏನು ಉಳಿದಿರುತ್ತೆ. ಕೇಂದ್ರ ಈಗ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವುದರಿಂದ ಏನೂ ಪ್ರಯೋಜನವಿಲ್ಲ. ರಾಜ್ಯಕ್ಕೆ ಕೇವಲ 577 ಕೋಟಿ ಘೋಷಣೆಯಾಗಿದೆ. ಎನ್.ಡಿ.ಆರ್.ಎಫ್. ನಿಯಮದ ಪ್ರಕಾರ ಕನಿಷ್ಟ 2500 ಕೋಟಿ ಕೊಡಬೇಕಿತ್ತು. ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪರಿಹಾರ ನೀಡಲಾಗಿದೆ. ಕರ್ನಾಟಕ ರಾಜ್ಯದ ವಿಷಯದಲ್ಲಿ ಯಾಕೆ ಕೇಂದ್ರದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅಜಯಸಿಂಗ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಪಾಳು ಬಿದ್ದ ಕಡಬ ಎಪಿಎಂಸಿ ಪ್ರಾಂಗಣ ; ಕೋಟ್ಯಂತರ ರೂಪಾಯಿ ವ್ಯಯಿಸಿದರೂ ರೈತರಿಗೆ ಸಿಗದ ಪ್ರಯೋಜನ

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಸಕಾಲದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಿತ್ತು. ರೈತರ ಎಲ್ಲ ತೊಗರಿ ಖರೀದಿಗೂ ಕ್ರಮ ಕೈಗೊಂಡಿಲ್ಲ. ಆದರೆ ಬಿಜೆಪಿ ಸರ್ಕಾರ ತೊಗರಿ ಬೆಳೆಗಾರರ ವಿಷಯದಲ್ಲಿ ಅಸಡ್ಡೆ ತೋರುತ್ತಿದೆ.

ಈಗಾಗಲೇ ಕಟಾವು ಆರಭಗೊಂಡಿದ್ದರೂ ತೊಗರಿ ಖರೀದಿ ಕೇಂದ್ರ ಆರಂಭಿಸಿಲ್ಲ. ತಾನು ನೀಡಬೇಕಿರುವ ಪ್ರೋತ್ಸಾಹ ಧನವನ್ನೂ ಪ್ರಕಟಿಸಿಲ್ಲ. ಇದರಿಂದಾಗಿ ತೊಗರಿ ಬೆಳೆಗಾರರು ತೀವ್ರ ಕಂಗಾಲಾಗಿದ್ದಾರೆ. ಈಗಾಗಲೇ ಅತಿವೃಷ್ಟಿ ಮತ್ತು ನೆರೆಗಲಿಂದ ತತ್ತರಿಸಿರುವ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಪಾಟೀಲ ಆಗ್ರಹಿಸಿದ್ದಾರೆ.
Published by:G Hareeshkumar
First published: