• Home
  • »
  • News
  • »
  • state
  • »
  • Mallikarjun Kharge: ಅಧ್ಯಕ್ಷರಾದ ನಂತರ ಮೊದಲ ಬಾರಿ ರಾಜ್ಯಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಭರ್ಜರಿ ಸ್ವಾಗತಕ್ಕೆ ಕೈ ನಾಯಕರ ತಯಾರಿ

Mallikarjun Kharge: ಅಧ್ಯಕ್ಷರಾದ ನಂತರ ಮೊದಲ ಬಾರಿ ರಾಜ್ಯಕ್ಕೆ ಮಲ್ಲಿಕಾರ್ಜುನ್ ಖರ್ಗೆ, ಭರ್ಜರಿ ಸ್ವಾಗತಕ್ಕೆ ಕೈ ನಾಯಕರ ತಯಾರಿ

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

Mallikarjun Kharge Visit To Bengaluru: ಬಹಳ ವರ್ಷಗಳ ನಂತರ ಕರ್ನಾಟದ ನಾಯಕರೊಬ್ಬರು ಕಾಂಗ್ರೆಸ್​ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಇದು ಕರ್ನಾಟಕ ಕಾಂಗ್ರೆಸ್​ಗೆ ಶಕ್ತಿ ತುಂಬಿದಂತೆ ಆಗಿದೆ.

  • News18 Kannada
  • Last Updated :
  • Karnataka, India
  • Share this:

ಇಂದು ಕಾಂಗ್ರೆಸ್ (Congress) ನೂತನ ಅಧ್ಯಕ್ಷ (New President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ರಾಜ್ಯಕ್ಕೆ ಆಗಮಿಸುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಲು,  ಸರ್ವೋದಯ ಸಮಾವೇಶ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಖರ್ಗೆ  ರಾಜ್ಯಕ್ಕೆ ಆಗಮಿಸುತ್ತಿದ್ದು, ಮಧ್ಯಾಹ್ನ 2.30 ಕ್ಕೆ ಅರಮನೆ ಮೈದಾನದಲ್ಲಿ ನಡೆಯುವ ಸರ್ವೋದಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಹಳ ವರ್ಷಗಳ ನಂತರ ಕರ್ನಾಟದ (Karnataka) ನಾಯಕರೊಬ್ಬರು ಕಾಂಗ್ರೆಸ್​ ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು, ಇದು ಕರ್ನಾಟಕ ಕಾಂಗ್ರೆಸ್​ಗೆ ಶಕ್ತಿ ತುಂಬಿದಂತೆ ಆಗಿದೆ. ಅಲ್ಲದೇ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Election) ಸನ್ನಿಹಿತವಾಗಿದ್ದು, ಈಗ ರಾಜ್ಯಕ್ಕೆ ಖರ್ಗೆ ಆಗಮನ ಕೈ ನಾಯಕರಲ್ಲಿ ನಿರೀಕ್ಷೆ ಹಾಗೂ ಹುಮ್ಮಸ್ಸು ಎರಡನ್ನೂ ಹೆಚ್ಚಿಸಿದೆ.


ಭರ್ಜರಿ ತಯಾರಿ ಮಾಡಿಕೊಂಡ ಕೈ ನಾಯಕರು


ಖರ್ಗೆ ಆಗಮನದ ಹಿನ್ನೆಲೆಯಲ್ಲಿ ಕೈ ನಾಯಕರು ಸ್ವಾಗತಕ್ಕೆ ಭರ್ಜರಿ ತಯಾರಿಸಿ ನಡೆಸಿದ್ದು,  ಬೆಂಗಳೂರಿನ ರಸ್ತೆಗಳಲ್ಲಿ ಕಾಂಗ್ರೆಸ್​ ಬಾವುಟ ಹಾಗೂ ಕಟೌಟ್​ಗಳು ಮಿಂಚುತ್ತಿದೆ. ಇಂದು ಬೆಳಗ್ಗೆ 10.55 ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದು, ಅಲ್ಲಿಂದ ತೆರೆದ ವಾಹನದಲ್ಲಿ ಕೆಲ ಕಾಂಗ್ರೆಸ್​ ನಾಯಕರು ಹಾಗೂ ಬೆಂಬಲಿಗರ ಜೊತೆ ಕೆಪಿಸಿಸಿ ಕಛೇರಿಗೆ ತೆರಳಲಿದ್ದಾರೆ.


ವಿಮಾನ ನಿಲ್ದಾಣದಲ್ಲಿಯೇ ರಾಜ್ಯ ಕಾಂಗ್ರೆಸ್ ನಾಯಕರು ಖರ್ಗೆ ಅವರಿಗೆ ಅದ್ದೂರಿ ಸ್ವಾಗತ ಕೋರಲು ಏರ್ಪಾಡು ಮಾಡಿಕೊಂಡಿದ್ದಾರೆ. ಏರ್ ಪೋರ್ಟ್ ರಸ್ತೆಯ ಟೋಲ್ ಗೇಟ್, ಹೆಬ್ಬಾಳ, ಮೇಖ್ರಿ ಸರ್ಕಲ್ ಬಳಿ  ಕಾಂಗ್ರೆಸ್ ನಾಯಕರು ಸ್ವಾಗತ ಕೋರಲಿದ್ದಾರೆ.

ಏರ್ ಪೋರ್ಟ್ ಮಾರ್ಗದ ಉದ್ದಕ್ಕೂ ಖರ್ಗೆ ಫ್ಲೆಕ್ಸ್ , ಬ್ಯಾನರ್ ,ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿದ್ದು, ಸಾದಹಳ್ಳಿ ಗೇಟ್ ಬಳಿ ವೇದಿಕೆ ಸಿದ್ದವಾಗಿದೆ. ಕಂಸಾಳೆ,ತಮಟೆ ವಾಧ್ಯಗಳೊಂದಿಗೆ ಭರ್ಜರಿ ವೆಲ್ ಕಮ್ ತಯಾರಿ ನಡೆಸಲಾಗಿದ್ದು, ದೇವನಹಳ್ಳಿ ಕಾಂಗ್ರೆಸ್ ಮುಖಂಡ ವೆಂಕಟಸ್ವಾಮಿ ಸ್ವಾಗತಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.


ಮಧ್ಯಾಹ್ನ 2.30 ಕ್ಕೆ ತ್ರಿಪುರ ವಾಸಿನಿ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಇನ್ನು ಸರ್ವೋದಯ ಸಮಾವೇಶದಲ್ಲಿ ಸುಮಾರು 1 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ಖ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರ ನಾಯಕರು ಭಾಗಿಯಾಗಲಿದ್ದಾರೆ.


ತವರು ಜಿಲ್ಲೆಯಿಂದ ಬೆಂಬಲಿಗರ ಆಗಮನ


ಅಲ್ಲದೇ, ಕಾಂಗ್ರೆಸ್​ ಅಧ್ಯಕ್ಷ ಖರ್ಗೆ ಸ್ವಾಗತಕ್ಕೆ ಅವರ ತವರು ಜಿಲ್ಲೆ ಕಲಬುರಗಿಯಿಂದ ಸಾವಿರಾರು ಜನರು ಆಗಮಿಸುತ್ತಿದ್ದು, ಅಫಜಲಪುರ ಸೇರಿದಂತೆ ಅನೇಕ ಕಡೆಯಿಂದ ಬೆಂಬಲಿಗರು ಬೆಂಗಳೂರಿಗೆ ಬಂದಿದ್ದಾರೆ.


ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲ ಬಾ ಅಂದ ಮಾಯಾಂಗನೆ! ಬೆಂಗಳೂರಲ್ಲಿ ಇನ್ನೊಂದು ಹನಿಟ್ರ್ಯಾಪ್ ಪ್ರಕರಣ


ರಾಜ್ಯದಲ್ಲಿ ಈಗಾಗಲೇ ಚುನಾವಣೆಗೆ ಎಲ್ಲಾ ಪಕ್ಷಗಳು ಭರದಿಂದ ಸಿದ್ದತೆ ಮಾಡಿಕೊಳ್ಳಲು ಆರಂಭಿಸಿದ್ದು, ಆರೋಪ-ಪ್ರತ್ಯಾರೋಪಗಳಲ್ಲಿ ಬ್ಯುಸಿಯಾಗಿದ್ದಾರೆ.  ಚುನಾವಣೆ ಹತ್ತಿರದಲ್ಲಿರುವುದರಿಂದ ಖರ್ಗೆ ಅಧ್ಯಕ್ಷರಾಗಿ ಆಯ್ಜೆಯಾಗಿರುವುದು ಹಾಗೂ ರಾಜ್ಯಕ್ಕೆ ಆಗಮಿಸುತ್ತಿರುವುದು ರಾಜ್ಯ ಕಾಂಗ್ರೆಸ್​ಗೆ ಮಹತ್ತರವಾದ ವಿಚಾರವಾಗಿದ್ದು, ಖರ್ಗೆಯ ಮೇಲೆ ನಾಯಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ.


ಇತ್ತೀಚೆಗೆ ನಡೆದ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದು ಬೀಗಿರುವ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಅಧ್ಯಕ್ಷರಾದ ಎರಡನೇ ದಲಿತ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಎರಡನೇ ವ್ಯಕ್ತಿ. ಈ ಹಿಂದೆ ಕರ್ನಾಟಕದ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.


ಕಾಂಗ್ರೆಸ್​ನಲ್ಲಿ ಹೆಚ್ಚಿದ ನಿರೀಕ್ಷೆ


ಯಾರ ಪ್ರಭಾವವಿಲ್ಲದೇ ತಮ್ಮದೇ ಪರಿಶ್ರಮದಿಂದ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ನಿಂತ ಈ ಹಿರಿಯ ರಾಜಕಾರಣಿ ಕಳೆದ 12 ಚುನಾವಣೆಗಳಲ್ಲಿ 11 ಬಾರಿ ಗೆದ್ದಿದ್ದಾರೆ. ಸತತ 9 ಬಾರಿ ಶಾಸಕರಾಗಿದ್ದ 80 ವರ್ಷದ ಮಲ್ಲಿಕಾರ್ಜುನ ಖರ್ಗೆ 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಗಾಂಧಿ-ನೆಹರೂ ಅವರ ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಇದನ್ನೂ ಓದಿ: ತಗ್ಗಿದ ಜಲಾಶಯಗಳ ಒಳಹರಿವು, ಡ್ಯಾಂ ನೀರಿನ ಮಟ್ಟ ಇಂತಿದೆ


ಸದ್ಯ ಕಾಂಗ್ರೆಸ್​ ಚುಕ್ಕಾಣಿ ಹಿಡಿದಿರುವ ಖರ್ಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಯಾವೆಲ್ಲಾ ಯೋಜನೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದ್ದು, ಖರ್ಗೆ ಆಗಮನದಿಂದ ರಾಜ್ಯ ಕಾಂಗ್ರೆಸ್​ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Published by:Sandhya M
First published: