ಬೆಂಗಳೂರು(ಜುಲೈ 04): ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತಾರದೆಯೇ ಮುಂಚೂಣಿ ಘಟಕಗಳ ಯುವ ಪದಾಧಿಕಾರಿಗಳ ನೇಮಕಾತಿಗೆ ನಡೆದಿದ್ದ ಪ್ರಯತ್ನ ಈಗ ವಿಫಲವಾಗಿದೆ. ತಮಗೆ ಬೇಕಾದವರನ್ನ ಒಳಗೊಂಡು ನೇಮಕಾತಿ ಮಾಡಹೊರಟಿದ್ದರೆನ್ನಲಾದ ಕರ್ನಾಟಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರನ್ನ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಿರಿಯ ಮುಖಂಡರು ತರಾಟೆಗೆ ತೆಗೆದುಕೊಂಡಿದ್ಧಾರೆ. ನಿನ್ನೆ ನ್ಯೂಸ್18 ವಾಹಿನಿಯಲ್ಲಿ ಈ ನೇಮಕಾತಿ ಕುರಿತ ವರದಿ ಪ್ರಸಾರವಾಗಿತ್ತು. ಆ ವರದಿ ನೋಡಿ ಎಚ್ಚೆತ್ತ ಹಿರಿಯ ಕಾಂಗ್ರೆಸ್ ಮುಖಂಡರು ಪಟ್ಟಿಯನ್ನ ತಡೆ ಹಿಡಿದಿದ್ದಾರೆ.
ಕಾಂಗ್ರೆಸ್ನ ರಾಜ್ಯಸಭಾ ಸಂಸದ ಜಿ.ಸಿ. ಚಂದ್ರಶೇಖರ್ ಅವರು ಈ ಬಗ್ಗೆ ದೆಹಲಿಯ ನಾಯಕರ ಗಮನಕ್ಕೆ ತಂದಿದ್ದಾರೆ. ಬಾದರ್ಲಿ ವಿರುದ್ಧ ದೂರು ನೀಡಿ ಈ ನೇಮಕಾತಿ ಪಟ್ಟಿಯನ್ನು ತಡೆಹಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕದ ಯುವ ಕಾಂಗ್ರೆಸ್ನ ವಿವಿಧ ಪದಾಧಿಕಾರಿಗಳ ನೇಮಕಾತಿಗೆ ಬಾದರ್ಲಿ ತಯಾರಿಸಿದ ಪಟ್ಟಿ ನ್ಯೂಸ್18ಗೆ ಸಿಕ್ಕಿತ್ತು. ಅದರಲ್ಲಿರುವ ಹಲವು ಹೆಸರುಗಳಿಗೆ ಹಿರಿಯ ಮುಖಂಡರಿಂದಲೇ ವಿರೋಧ ಇತ್ತು.
ಇದನ್ನೂ ಓದಿ: ಕನಕಪುರ ಬಂಡೆಗೆ ಸೆಡ್ಡು ಹೊಡೆದ ಯೂಥ್ ಕಾಂಗ್ರೆಸ್ ಅಧ್ಯಕ್ಷ; ಡಿಕೆ ಶಿವಕುಮಾರ್ ಕೆಂಗಣ್ಣು
ಅರ್ಹ ವಯಸ್ಸು ಮೀರಿದವರು, ಶ್ರೀಮಂತರು, ನಾಯಕರ ಮಕ್ಕಳು ಹೀಗೆ ಬೇಕಾದವರನ್ನೆಲ್ಲಾ ಪದಾಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ಹೊರಟಿದ್ದು ಈ ಪಟ್ಟಿಯಿಂದ ಸ್ಪಷ್ಟವಾಗಿತ್ತು. ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀನಿನ ಮೆಲೆ ಹೊರಬಂದಿರುವ ಆದಿತ್ಯ, ಹಾಗೂ ಮೊಹಮ್ಮದ್ ನಲಪಾಡ್ಗೆ ಆಪ್ತನೆನಿಸಿರುವ ಆರ್ ಮಂಜು ಅವರ ಹೆಸರು ಈ ಪಟ್ಟಿಯಲ್ಲಿದೆ.
ಬಸವನ ಬಾಗೇವಾಡಿಯ ಕಾಂಗ್ರೆಸ್ ಶಾಸಕ ಹಾಗೂ ಹಿರಿಯ ಮುಖಂಡ ಶಿವಾನಂದ ಪಾಟೀಲ ಅವರ ಮಗಳು ಸಂಯುಕ್ತಾ ಪಾಟೀಲ್ ಅವರ ನೇಮಕಾತಿಗೆ ಪ್ರಯತ್ನಿಸಲಾಗಿತ್ತು. ಇವರ ನೇಮಕಾತಿಗೆ ಅದೇ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಬಲವಾಗಿ ವಿರೋಧಿಸಿದ್ದರು. ಇನ್ನು, ತುಮಕೂರಿನ ಶಶಿಕುಮಾರ್ ಎಂಬಾತನಿಗೆ ಯುವ ಪಡೆಯಲ್ಲಿ ಅಧಿಕಾರ ನೀಡಲು ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದರು.
ಇನ್ನು, ಕಾಂಗ್ರೆಸ್ನ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ರಕ್ಷಾ ರಾಮಯ್ಯ ಮೂಲಕ ಸಂದೀಪ್ ಅನಬೇರು ಅವರು ಯುವ ಕಾಂಗ್ರೆಸ್ನಲ್ಲಿ ಅಡಿ ಊರಲು ಹೊರಟಿದ್ದರೆಂದು ಕಾಂಗ್ರೆಸ್ನ ಮೂಲಗಳು ಹೇಳುತ್ತವೆ.
ಹಾಗೆಯೇ, ಕಾಂಗ್ರೆಸ್ನ ಯುವ ಘಟಕದ ಪದಾಧಿಕಾರಿಗಳಿಗೆ 35 ವರ್ಷಕ್ಕಿಂತ ಹೆಚ್ಚು ವಯಸ್ಸಿರಬಾರದು ಎಂಬ ನಿಯಮ ಇದೆ. ಆದರೆ, ವಿದ್ಯಾ, ಆರ್. ಮಂಜು ಸೇರಿದಂತೆ ಬಾರ್ಲಿಯವರ ಪಟ್ಟಿಯಲ್ಲಿದ್ದ ಕೆಲವಾರು ಮಂದಿ 35 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆನ್ನಲಾಗಿದೆ.
ಇದನ್ನೂ ಓದಿ: ವಿಜಯಪುರ ಜಿ.ಪಂ. ಅಧ್ಯಕ್ಷರ ಚುನಾವಣೆ: ಬಿಜೆಪಿ ಆಯ್ತು, ಈಗ ಕಾಂಗ್ರೆಸ್ನಿಂದ ಮೂವರು ಸದಸ್ಯರ ಉಚ್ಛಾಟನೆ- ಪ್ರತಿಭಟನೆ
ಕೆಪಿಸಿಸಿಯ ಗಮನಕ್ಕೆ ತಾರದೇ ಯಾವುದೇ ಮುಂಚೂಣಿ ಘಟಕಗಳಿಗೆ ನೇಮಕಾತಿ ಆಗಬಾರದು ಎಂದು ಸಾಕಷ್ಟು ಮೊದಲೇ ಸೂಚನೆ ನೀಡಲಾಗಿತ್ತು. ಆದರೂ ಕೂಡ ಯುವ ಕಾಂಗ್ರೆಸ್ ಪಡೆ ಅಧ್ಯಕ್ಷ ಬಸನಗೌಡ ಬಾದರ್ಲಿ ಅವರು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗಾಗಲೀ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗಾಗಲೀ ಸುಳಿವು ಬಿಟ್ಟುಕೊಡದೇ ನೇರವಾಗಿ ಎಐಸಿಸಿಗೆ ಈ ಪಟ್ಟಿಯನ್ನ ಕಳುಹಿಸಲು ಯತ್ನಿಸಿದ್ದರು. ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಎನ್ಎಸ್ಯುಐನ ಮುಖ್ಯಸ್ಥೆ ಸುರಭಿ ದ್ವಿವೇದಿ ಮೂಲಕ ಈ ಪದಾಧಿಕಾರಿಗಳ ನೇಮಕಾತಿಗೆ ಬಾದರ್ಲಿ ಯತ್ನಿಸಿದರೆನ್ನಲಾಗಿದೆ.
ನ್ಯೂಸ್18 ವರದಿ ಮಾಡಿದ ಕೆಲ ಹೊತ್ತಲ್ಲೇ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತತ್ಕ್ಷಣವೇ ಮಧ್ಯ ಪ್ರವೇಶಿಸಿ ವರಿಷ್ಠರಿಗೆ ನಿಜಾಂಶ ನಿವೇದಿಸಿ ಅಕ್ರಮ ನೇಮಕಾತಿಗೆ ತಡೆ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ