ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ, ದೇವೇಗೌಡರ ಜೊತೆಯೂ ಚೆನ್ನಾಗಿದ್ದೇನೆ; ಸಿ.ಎಂ ಇಬ್ರಾಹಿಂ ಸ್ಪಷ್ಟನೆ

ಯಾರೂ ಪುಗಸಟ್ಟೆ ರಾಜಕೀಯ ಮಾಡಲ್ಲ. ನಾವು ಒಂದು ರೂಪಾಯಿ ಕೊಟ್ಟು ಎಂಟಾಣೆ ಕೇಳುತ್ತಿದ್ದೇವೆ. ಕೆಲವು ಮುಂಡೇವು ಒಂದು ರೂಪಾಯಿ ಹಾಕಿ ಹತ್ತು ರೂಪಾಯಿ ತಗೊಂಡು ಹೋಗುವವರೂ ಇದ್ದಾರೆ ಎಂದು ಪರೋಕ್ಷವಾಗಿ ಜಮೀರ್ ಅಹಮದ್ ಖಾನ್ ಗೆ ಸಿ.ಎಂ. ಇಬ್ರಾಹಿಂ ಟಾಂಗ್ ನೀಡಿದ್ದಾರೆ.

ಸಿ.ಎಂ. ಇಬ್ರಾಹಿಂ

ಸಿ.ಎಂ. ಇಬ್ರಾಹಿಂ

 • Share this:
  ಬೆಂಗಳೂರು (ಮಾ. 5): ಕಾಂಗ್ರೆಸ್ ನಾಯಕರ ಮೇಲೆ ಅಸಮಾಧಾನ ಹೊರಹಾಕಿದ್ದ ಎಂಎಲ್​ಸಿ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್​ ಸೇರುತ್ತಾರೆ ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇಬ್ರಾಹಿಂ ಅವರ ಮನೆಗೆ ತೆರಳಿ ಬಿರಿಯಾನಿ ಊಟ ಮಾಡಿದ್ದರು. ಇಂದು ಬೆಳಗ್ಗೆ ಸಿದ್ದರಾಮಯ್ಯನವರ ನಿವಾಸಕ್ಕೆ ತಿಂಡಿಗೆ ತೆರಳಿದ ಸಿ.ಎಂ ಇಬ್ರಾಹಿಂ ಮತ್ತೆ ಸಿದ್ದರಾಮಯ್ಯನವರೊಂದಿಗೆ ರಾಜಿಯಾಗಿದ್ದಾರೆ. ಇಬ್ಬರೂ ಮುನಿಸು ತೊರೆದು ಮತ್ತೆ ಒಂದಾಗಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಎಂಎಲ್​ಸಿ ಸಿ.ಎಂ ಇಬ್ರಾಹಿಂ, ಯಾರೂ ಪುಗಸಟ್ಟೆ ರಾಜಕೀಯ ಮಾಡಲ್ಲ. ನಾವು ಒಂದು ರೂಪಾಯಿ ಕೊಟ್ಟು ಎಂಟಾಣೆ ಕೇಳುತ್ತಿದ್ದೇವೆ. ಕೆಲವು ಮುಂಡೇವು ಒಂದು ರೂಪಾಯಿ ಹಾಕಿ ಹತ್ತು ರೂಪಾಯಿ ತಗೊಂಡು ಹೋಗುವವರೂ ಇದ್ದಾರೆ ಎಂದು ಪರೋಕ್ಷವಾಗಿ ಜಮೀರ್ ಅಹಮದ್ ಖಾನ್ ಗೆ ಸಿ.ಎಂ. ಇಬ್ರಾಹಿಂ ಟಾಂಗ್ ನೀಡಿದ್ದಾರೆ.

  ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಎರಡೂ ನಾಯಕರು ಪರಸ್ಪರರ ಮನೆಗೆ ತೆರಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಎಂಎಲ್​ಸಿ ಸಿ.ಎಂ ಇಬ್ರಾಹಿಂ, ನಾನು ಮತ್ತು ಸಿದ್ದರಾಮಯ್ಯ ರಾಜಕೀಯವಾಗಿ ರಾಷ್ಟ್ರ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಪಾತ್ರ ಏನು ಅನ್ನೋದನ್ನ ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ನಮ್ಮ ಸಮುದಾಯ ಶೇ.18ರಷ್ಟು ಇದೆ. ಹೀಗಾಗಿ ನಾವು ಒಂದು ರೂ. ಖರ್ಚು ಮಾಡಿ ಎಂಟಾಣೆ ವಾಪಾಸ್ ಕೇಳುತ್ತಿದ್ದೇವೆ ಅಷ್ಟೇ. ಕೆಲವರು ಏನೂ ಖರ್ಚು ಮಾಡದೇ 2 ರೂಪಾಯಿಗೆ ಲಾಭ ಮಾಡುತ್ತಿದ್ದಾರೆ. ಅದರಿಂದ ನಾನು ನನ್ನ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಇದರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ. ಇದಕ್ಕಾಗಿ ಮೇಡಂ ಸೋನಿಯಾ ಗಾಂಧಿ ಬಳಿ ಸಮಯ ಕೇಳಿದ್ದೇವೆ ಎಂದಿದ್ದಾರೆ.

  ಇದನ್ನೂ ಓದಿ: Ramesh Jarkiholi Sex Scandal: ರಾಸಲೀಲೆ ಪ್ರಕರಣ; ರಮೇಶ್ ಜಾರಕಿಹೊಳಿ ವಿರುದ್ಧ ದಾಖಲಾಗುತ್ತಾ ಎಫ್​ಐಆರ್​?

  ಸಿದ್ದರಾಮಯ್ಯ ಭೇಟಿ ನಂತರ ಮಾತನಾಡಿರುವ ಸಿ.ಎಂ ಇಬ್ರಾಹಿಂ, ರಾಜ್ಯದ ಮತ್ತು ದೇಶದ ರಾಜಕೀಯ ಪರಿಸ್ಥಿತಿ ಚರ್ಚೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು, ನಮ್ಮ ಪಾತ್ರವೇನು, ಅಲ್ಪಸಂಖ್ಯಾತರ ಪಾತ್ರವೇನು ಎಂಬುದುರ ಬಗ್ಗೆ ಚರ್ಚೆ ಆಗಿದೆ. ದೆಹಲಿಯಲ್ಲೂ ಚರ್ಚೆ ಆಗುತ್ತದೆ. ಸಿದ್ದರಾಮಯ್ಯ ಅವರದ್ದು ದೊಡ್ಡ ಮನಸ್ಸು. ಅವರು ಮೈಸೂರು ಪಾಲಿಕೆ ವಿಚಾರವನ್ನು ಜಾಸ್ತಿ ತಲೆಗೆ ಹಚ್ಚಿಕೊಂಡಿಲ್ಲ ಎಂದಿದ್ದಾರೆ.

  ಜೆಡಿಎಸ್ ಸೇರುವ ವಿಚಾರದ ಬಗ್ಗೆ ನಾನು ಎಲ್ಲಿ ಹೇಳಿದ್ದೆ? ನಾನು ಈಗ ಎಲ್ಲಿ ನಿಂತು ಮಾತನಾಡುತ್ತಿದ್ದೇನೆ? ಸಿದ್ದರಾಮಯ್ಯ ಜೊತೆ ನಂಗೆ ಯಾವತ್ತೂ ಬೇಸರವಿರಲಿಲ್ಲ, ಮುಂದೂ ಇರುವುದಿಲ್ಲ. ನಾನು ಕುಮಾರಸ್ವಾಮಿ, ದೇವೇಗೌಡರ ಜೊತೆ ಚೆನ್ನಾಗೇ ಇದ್ದೇನೆ. ನಾನು ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ, ಬಿಜೆಪಿ ಪಕ್ಷದ ನಾಯಕರು ನನ್ನ ಜೊತೆ ಚೆನ್ನಾಗಿದ್ದಾರೆ. ಹಾಗಂತ ಕಾಂಗ್ರೆಸ್ ಬಿಡುತ್ತೇನೆ ಎಂದು ಅರ್ಥವಲ್ಲ. ಬಸವ ತತ್ವದಲ್ಲಿ ನಂಬಿಕೆ ಇರೋನು ನಾನು. ಎಲ್ಲದರ ಬಗ್ಗೆಯೂ ದೆಹಲಿಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಸಿ‌.ಎಂ ಇಬ್ರಾಹಿಂ ಹೇಳಿದ್ದಾರೆ.

  ರಾಜಕೀಯವಾಗಿ ನನ್ನ ತೀರ್ಮಾನ ಏನು ಅಂತ ದೆಹಲಿಗೆ ಹೋದ ನಂತರ ಅಂತಿಮಗೊಳಿಸುವೆ. ಯಾರು ಯಾರಿಗೂ ಏನೂ ಕೊಡಬೇಕಾಗಿಲ್ಲ. ನಮಗೆ ಬರಬೇಕಾಗಿದ್ದನ್ನು ಕೊಟ್ಟರೆ ಸಾಕು. ನಾನು ಈಗ ಕಾಂಗ್ರೆಸ್ ನಲ್ಲಿ ಇದ್ದೇನೆ. ಬಿಜೆಪಿಯವರು ಬಂದು ಭೇಟಿ ಆಗ್ತಾರೆ. ಹಾಗಂತ ನಾನು ಬಿಜೆಪಿಗೆ ಹೋಗುತ್ತೇನಾ? ನಾನು ಪೊಲಿಟಿಕಲಿ ಪ್ರವಾಸ ಮಾಡ್ತೇನೆ. ಆಮೇಲೆ ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಯಾರೂ ಪುಗಸಟ್ಟೆ ರಾಜಕೀಯ ಮಾಡಲ್ಲ. ನಾವು ಒಂದು ರೂಪಾಯಿ ಕೊಟ್ಟು ಎಂಟಾಣೆ ಕೇಳುತ್ತಿದ್ದೇವೆ. ಕೆಲವು ಮುಂಡೇವು ಒಂದು ರೂಪಾಯಿ ಹಾಕಿ ಹತ್ತು ರೂಪಾಯಿ ತಗೊಂಡು ಹೋಗುವವರೂ ಇದ್ದಾರೆ ಎಂದು ಪರೋಕ್ಷವಾಗಿ ಜಮೀರ್ ಅಹಮದ್ ಖಾನ್ ಗೆ ಸಿ.ಎಂ. ಇಬ್ರಾಹಿಂ ಟಾಂಗ್ ನೀಡಿದ್ದಾರೆ.
  Published by:Sushma Chakre
  First published: