krishna byregowda: ಚುನಾವಣೆಯಿಂದ ತಪ್ಪಿಸಿಕೊಳ್ಳಲು ಗ್ರಾಮ ಸ್ವರಾಜ್, ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ; ಕಾಂಗ್ರೆಸ್ ಶಾಸಕರ ಆರೋಪ

ರೇವಣ್ಣಗೆ ಇದ್ದಕ್ಕಿದ್ದಂತೆ ಮಾಧುಸ್ವಾಮಿ ಮೇಲೆ ಪ್ರೀತಿ ಬಂದಿರೋದು ಯಾಕೆ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರು, ಎಲ್ಲೋ ಮಾಧುಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ರೇವಣ್ಣರ ಕೆಲಸಗಳನ್ನು ಮಾಡಿಕೊಟ್ಟಿರಬಹುದು. ಅದಕ್ಕೆ ಅವರ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ರೇವಣ್ಣರನ್ನು ಕಿಚಾಯಿಸಿದರು.

ಕೃಷ್ಣಭೈರೇಗೌಡ.

ಕೃಷ್ಣಭೈರೇಗೌಡ.

  • Share this:
    ಬೆಂಗಳೂರು: ತಾಲ್ಲೂಕು, ಜಿಲ್ಲಾ ಪಂಚಾಯತ್ ಕ್ಷೇತ್ರ ಪುನರ್ ವಿಂಗಡಣೆಗಾಗಿ ಸರ್ಕಾರ ಇಂದು ವಿಧಾನಸಭೆಯಲ್ಲಿ (Assembly Session) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ ಮಂಡಿಸಿತು. ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ ಖರ್ಗೆ, ರಾಜೇಗೌಡ ಹಾಗೂ ಯತೀಂದ್ರ ಸಿದ್ದರಾಮಯ್ಯ ಭಾರೀ ವಿರೋಧ ವ್ಯಕ್ತಪಡಿಸಿದರು.

    ಅಧಿಕಾರ ವಿಕೇಂದ್ರೀಕರಣದಲ್ಲಿ ಕರ್ನಾಟಕ ಮಾದರಿ, ಅಧಿಕಾರ ವಿಕೇಂದ್ರೀಕರಣದಿಂದ ಜನರಿಗೆ ಅನುಕೂಲ ಆಗಲಿದೆ. ಆದರೆ ಈ ತಿದ್ದುಪಡಿ ಅಧಿಕಾರ ವಿಕೇಂದ್ರೀಕರಣ ಆಶಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಕ್ಷೇತ್ರ ಮರುವಿಂಗಡನೆಗೆ ನಿಯಮಾವಳಿ ರೂಪಿಸಿದ್ದು ನಿಮ್ಮ ಸರ್ಕಾರ. ಇದಕ್ಕೆ ಸಂಪುಟದ ಅನುಮೋದನೆ ಇದೆ. ಅದರ ಪ್ರಕಾರ ಚುನಾವಣಾ ಆಯೋಗ ಕ್ಷೇತ್ರ ಮರುವಿಂಗಡನೆ ಮಾಡಿದೆ. ಈ ತಿದ್ದುಪಡಿಯಿಂದ ಯಾವ ಸಮಸ್ಯೆಗೆ ಪರಿಹಾರ ಸಿಗಲ್ಲ. 2016 ರ ಕಾನೂನಿನ ಪ್ರಕಾರವೇ ಮರುವಿಂಗಡನಾ ಆಯೋಗ ಕೆಲಸ ಮಾಡುತ್ತೆ. ತಿದ್ದುಪಡಿ ಮಾಡುವುದಾದರೆ 2016 ಗ್ರಾಮ ಸ್ವರಾಜ್ ಕಾಯ್ದೆ ತಿದ್ದುಪಡಿ ಮಾಡಿ. ಅದರ ಬದಲಾಗಿ ಕ್ಷೇತ್ರ ಪುನರ್ವಿಂಗಡನೆ ಆಯೋಗ ರಚನೆ ಸರಿಯಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿಯಿಂದ ಉದ್ದೇಶ ಈಡೇರಲ್ಲ. ಬದಲಾಗಿ ಇದರ ಉದ್ದೇಶ ಚುನಾವಣೆ ಮುಂದೂಡುವುದಾಗಿದೆ. ನಿಮಗೆ ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ ಇಲ್ಲ ಎಂದು ಕೃಷ್ಣ ಬೈರೇಗೌಡ ಅವರು ಆರೋಪ ಮಾಡಿದರು.

    ಇದನ್ನು ಇವರು ಜಾರಿಗೆ ತರಲು ಅವಕಾಶ ಇಲ್ಲ. ನಿಮ್ಮ ಉದ್ದೇಶ ಇದರಿಂದ ಈಡೇರುವುದಿಲ್ಲ. ಇದರಿಂದಲೂ ನಿಮಗೆ ಪರಿಹಾರ ಕೂಡ‌ ಸಿಗಲ್ಲ. ಬಹುಶಃ ಚುನಾವಣೆ ಮಾಡಿದ್ರೆ, ನಿಮಗೆ ಜನ ಪಾಠ ಕಲಿಸ್ತಾರೆ ಎಂಬ ಭಯ ಇದೆ. ಅದಕ್ಕಾಗಿ ಇದನ್ನು ಮಾಡಲು ಹೊರಟಿದ್ದಾರೆ. ನಿಮಗೆ ಧೈರ್ಯ ಇದ್ದರೆ ಚುನಾವಣೆ ಮಾಡಿ. ಇದೊಂದು ಭೋಗಸ್ ತಿದ್ದುಪಡಿ. ಆಯೋಗದ ವರದಿಯನ್ನು ಕೋರ್ಟ್ ಗೆ ಸಲ್ಲಿಸಿ, ಚುನಾವಣೆ ಮುಂದೂಡುವ ತಂತ್ರ ಇದು. ಚುನಾವಣೆಯಿಂದ ಹೆದರಿ ಓಡಿ ಹೋಗಲು ಇದನ್ನು ತರೋಕೆ ಹೊರಟಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದರು.

    ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ವಿಧೇಯಕದಲ್ಲಿ ಸರ್ಕಾರ ಡಿಲಿಮಿಟೇಷನ್ ಆಯೋಗಕ್ಕೆ ನಿರ್ದೇಶನ ನೀಡುವ ಅಧಿಕಾರ ಇದೆ ಎಂಬ ಅಂಶ ಇದೆ. ಹೀಗಾಗಿ ಆಯೋಗ ಸ್ವತಂತ್ರವಾಗಿ ಕೆಲಸ ಮಾಡುವುದು ಅನುಮಾನ. ಈ ಆಯೋಗದ ತೀರ್ಮಾನದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುವ ಅವಕಾಶ ಇಲ್ಲ ಎಂಬ ಅಂಶವೂ ಈ ವಿಧೇಯಕದಲ್ಲಿದೆ. ಇದರಿಂದ ನಾವು ಕೋರ್ಟ್ ಗೆ ಹೋಗಲು ಆಗುವುದಿಲ್ಲ.‌ ಇದರಿಂದ ಜನರ ಹಕ್ಕು ಕಸಿದುಕೊಳ್ಳುವಂತೆ ಆಗುತ್ತದೆ. ಚುನಾವಣೆ ಎದುರಿಸಲಾಗದೆ ಈ ವಿಧೇಯಕ ತರುವುದು ಬೇಡ ಎಂದು ಹೇಳಿದರು.

    ಮಾಧುಸ್ವಾಮಿ ಅವರನ್ನು ಹೊಗಳಿ ಕಾಲೆಳೆದು ಎಚ್.ಡಿ. ರೇವಣ್ಣ

    ಇನ್ನು ಇದೇ ವಿಷಯವಾಗಿ ಮಾತನಾಡಿದ ಎಚ್.ಡಿ. ರೇವಣ್ಣ ಅವರು, ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ. ಆದರೆ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ರು. ಅವರು ನೇರ ವ್ಯಕ್ತಿ, ಹೊಂದಾಣಿಕೆ ಮಾಡಿಲ್ಲ ಎಂದು ಕಿತ್ತು ಹಾಕಿದರು. ಹೀಗಾಗಿ ಮಾಧುಸ್ವಾಮಿಯವರೇ, ಈ ತಿದ್ದುಪಡಿ ಸರಿ ಇದ್ಯಾ ಎಂದು ಹೇಳಲಿ ಎಂದು ಸವಾಲು ಹಾಕಿದರು.

    ಇದನ್ನು ಓದಿ: ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್​ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ

    ಅವರಿಗೆ ಎಲ್ಲಿಂದ ಒತ್ತಡ ಬಂತು ಎಂದು ಇಲ್ಲಿ ಹೇಳಲು ಅವರಿಗೆ ಸಾಧ್ಯವಿಲ್ಲ. ಹೇಳಿದರೆ ಅವರಿಗೆ ಕುತ್ತಾಗುತ್ತೆ ಎಂದು ರೇವಣ್ಣ ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ರಮೇಶ್ ಕುಮಾರ್ ಅವರು, ನೀವು ಏನು ದೊಡ್ಡ ಉಪಕಾರ ಮಾಡುತ್ತಿದ್ದೀರಿ ಯಡಿಯೂರಪ್ಪಗೆ? ಅವರಿಗೆ ಇನ್ನೇನು ಕುತ್ತಾಗಬೇಕು ಏನು‌ ಬಾಕಿ ಇದೆ ಹೇಳಿ? ನಿಮಗೆ ಯಡಿಯೂರಪ್ಪ, ಮಾಧುಸ್ವಾಮಿ ತೊಂದರೆ ಮಾಡಿಲ್ಲ. ನಿಮಗೆ ಅಭಿಮಾನ ಇಲ್ಲದಿರುವುದು ಯಾರ ಬಗ್ಗೆ ಹೇಳಿ? ಅವರ ಬಗ್ಗೆ ಹೇಳಿದರೆ ಕುತ್ತು ಬರುತ್ತೆ ಎನ್ನುತ್ತೀರಿ ಎಂದು ಕಾಲೆಳೆದರು.



    ರೇವಣ್ಣಗೆ ಇದ್ದಕ್ಕಿದ್ದಂತೆ ಮಾಧುಸ್ವಾಮಿ ಮೇಲೆ ಪ್ರೀತಿ ಬಂದಿರೋದು ಯಾಕೆ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರು, ಎಲ್ಲೋ ಮಾಧುಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ರೇವಣ್ಣರ ಕೆಲಸಗಳನ್ನು ಮಾಡಿಕೊಟ್ಟಿರಬಹುದು. ಅದಕ್ಕೆ ಅವರ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ರೇವಣ್ಣರನ್ನು ಕಿಚಾಯಿಸಿದರು.
    Published by:HR Ramesh
    First published: