ಗೆಲುವಿನ ವಿಶ್ವಾಸದಿಂದ ಚುನಾವಣೆ ಎದುರಿಸಲಿದ್ದೇವೆ; ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​

news18
Updated:September 2, 2018, 4:49 PM IST
ಗೆಲುವಿನ ವಿಶ್ವಾಸದಿಂದ ಚುನಾವಣೆ ಎದುರಿಸಲಿದ್ದೇವೆ; ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​
news18
Updated: September 2, 2018, 4:49 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 2): ಎಐಸಿಸಿ ಗೆಲುವಿನ ವಿಶ್ವಾಸದಿಂದ ಲೋಕಸಭೆ ಚುನಾವಣೆ ಎದುರಿಸಲಿದೆ. ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಆಂದೋಲನ ಕೈಗೊಂಡಿದ್ದೇವೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಪೂರ್ವ ಸಿದ್ಧತೆಗಳ ಕುರಿತು ಚರ್ಚಿಸಲು ನಿನ್ನೆಯಿಂದ ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಶಾಸಕರ ಸಭೆ ಇಂದೂ ಮುಂದುವರೆದಿದೆ. ಹುಬ್ಬಳ್ಳಿ, ಧಾರವಾಡ, ಹಾವೇರಿ, ಚಿತ್ರದುರ್ಗದ ಕಾಂಗ್ರೆಸ್​ ಶಾಸಕರು ಮತ್ತು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ನೇತೃತ್ವದಲ್ಲಿ ಸಭೆ ನಡೆದಿದೆ.

ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ವೇಣುಗೋಪಾಲ್​, ಲೋಕಸಭೆ ಚುನಾವಣಾ ಸಿದ್ಧತೆ ಕುರಿತು ಸಭೆ ನಡೆಸಿದ್ದೇವೆ. ಪ್ರತೀ ಜಿಲ್ಲೆಗಳಲ್ಲೂ ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಜನತೆಗೆ ತಿಳಿಸುತ್ತಿದ್ದೇವೆ. ಭಾರತದ ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣ ರಫೇಲ್ ವಿಮಾನ ಖರೀದಿ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಯಾವುದಕ್ಕೂ ಪ್ರಧಾನಿ ಮೋದಿ ಉತ್ತರ ಕೊಟ್ಟಿಲ್ಲ. ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ಬಗ್ಗೆ ನಾವು 3 ಸ್ಪಷ್ಟೀಕರಣ ಕೇಳಿದ್ದೇವೆ. ಯುಪಿಎ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದ ಮುಂದುವರೆಸಬೇಕಿತ್ತು. ಆಗ ದೇಶದ ಸಾವಿರಾರು ಯುವಜನತೆಗೆ ಉದ್ಯೋಗ ಸಿಗುತ್ತಿತ್ತು. ಆದರೆ ಹೊಸ ಒಪ್ಪಂದದಿಂದ ರಫೇಲ್ ವಿಮಾನಗಳಿಗೆ ಹೆಚ್ಚು ಬೆಲೆ ಕೊಡಲಾಗುತ್ತಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್​ ಮುಖಂಡರ ಜೊತೆ ಹುಬ್ಬಳ್ಳಿ-ಧಾರವಾಡ ಲೋಕಸಭೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಯಿತು. ಕಳೆದ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್​ ನೀಡಲಾಗಿದೆ. 4 ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಈ ಬಾರಿ ಓಬಿಸಿ ಸಮುದಾಯಗಳಿಗೆ ಆದ್ಯತೆ ನೀಡಿ. ಪ್ರಭಾವಿ ನಾಯಕ ಎಸ್.ಆರ್. ಮೋರೆಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಎಂದು ಕೆಲ ಮುಖಂಡರು ವೇಣುಗೋಪಾಲ್​, ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.

ಇನ್ನು ಕೆಲ ಕಾಂಗ್ರೆಸ್ ಮುಖಂಡರು ವಿನಯ್​ ಕುಲಕರ್ಣಿ ಪರ ಮನವಿ ಮಾಡಿದರು. ವಿನಯ್ ಕುಲಕರ್ಣಿ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಮಾಡುತ್ತಿದ್ದಾರೆ. ಬಿಜೆಪಿಯ ಪ್ರಹ್ಲಾದ್ ಜೋಷಿಯವರನ್ನು ಸೋಲಿಸಬೇಕಾದರೆ ವಿನಯ್​ಗೆ ಟಿಕೆಟ್ ನೀಡಿ. ವಿನಯ್​ ಕುಲಕರ್ಣಿಗೆ ಟಿಕೆಟ್​ ಕೊಟ್ಟರೆ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಸಭೆಯಲ್ಲಿ ಹುಬ್ಬಳ್ಳಿ- ಧಾರವಾಡ ಭಾಗದ ನಾಯಕರು ಒತ್ತಡ ಹೇರಿದರು.
Loading...

ಹಾವೇರಿ ಮುಖಂಡರ ವಾಗ್ವಾದ:
ಇದೇರೀತಿ, ಹಾವೇರಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯಲ್ಲಿಯೂ ವಾಗ್ವಾದ ನಡೆಯಿತು. ಮಾಜಿ ಶಾಸಕ ಶಿವಣ್ಣ, ಸಲೀಂ ಅಹಮದ್, ಬಿ.ಆರ್. ಪಾಟೀಲ್, ಶ್ರೀನಿವಾಸ್ ಮಾನೆ ನಡುವೆ ಟಿಕೆಟ್​ ವಿಚಾರದಲ್ಲಿ ಜಟಾಪಟಿ ನಡೆಯಿತು. ಮುಸ್ಲಿಂ ಸಮುದಾಯಕ್ಕೆ ಕೊಡೋದಾದರೆ ಸಲೀಂ ಅಹಮದ್​ಗೆ ನೀಡಿ. ಲಿಂಗಾಯತರಿಗೆ ಕೊಡುವುದಾದರೆ ಶಿವಣ್ಣನವರಿಗೆ ಕೊಡಿ ಎಂದು ಕಾಂಗ್ರೆಸ್​​ ಉಸ್ತುವಾರಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಮುಂದೆ ಮನೋಹರ್ ತಹಸೀಲ್ದಾರ್ ಪ್ರಸ್ತಾಪ ಮಾಡಿದರು. ಸಭೆಯಲ್ಲಿ ಶ್ರೀನಿವಾಸ್ ಮಾನೆ, ಸಲೀಂ ಪರ ಹಲವರು ಬ್ಯಾಟಿಂಗ್ ಮಾಡಿದರು. ಬಳಿಕ, ನೀವೇ ಚರ್ಚಿಸಿ ಇಬ್ಬರ ಹೆಸರು ತಿಳಿಸಿ ಎಂದು ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಹೇಳಿದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ