ಐಎಂಎ ಹಗರಣ: ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷ ಸದಸ್ಯರು

ಮತ್ತೆ ಐಎಂಎ ಪ್ರಕರಣಗಳು ಮರುಕಳಿಸದಂತೆ ಕ್ರಮ ಆಗಬೇಕು. ಇಂಥ ಹೂಡಿಕೆ ಸಂದರ್ಭದಲ್ಲಿ ವಿಮೆ‌ ಮಾಡಿಸಲು ಸಾಧ್ಯನಾ ಎನ್ನುವುದರ ಬಗ್ಗೆ ಪರಿಶೀಲನೆ ಆಗಬೇಕು ಎಂದು ಚರ್ಚೆ ವೇಳೆ ಶಾಸಕಿ ಸೌಮ್ಯ‌ರೆಡ್ಡಿ‌ ಸರ್ಕಾರವನ್ನುಒತ್ತಾಯಿಸಿದರು.

ಐಎಂಎ ಕಂಪನಿ

ಐಎಂಎ ಕಂಪನಿ

 • Share this:
  ಬೆಂಗಳೂರು(ಮಾ.17) : ಐಎಂಎ ಪ್ರಕರಣದ ಸಂಬಂಧ ಇಂದು ಸದನದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರವನ್ನುತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಐಎಂಎ ಪ್ರಕರಣದ ಸುದೀರ್ಘವಾದ ಚರ್ಚೆಯಲ್ಲಿ ಆರೋಪ ಪ್ರತ್ಯಾರೋಪಗಳು ನಡೆದವು.

  ನಿಯಮ 69ರಡಿ ಅಡಿಯಲ್ಲಿ ಐಎಂಎ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಐಎಂಎ ಪ್ರಕರಣ ಗಂಭೀರವಾಗಿದ್ದು, ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸುವ ಕೆಲಸ ಬೇಗ ಆಗಬೇಕು. ಐಎಂಎ ಕುರಿತ ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ತೆರೆದು, ನ್ಯಾಯಾಧೀಶರ ನೇಮಕ‌ ಮಾಡಬೇಕಾಗಿದೆ. ಐಎಂಎ ಸಂಸ್ಥೆ 123 ಕೋಟಿ ರೂ ತೆರಿಗೆಯನ್ನ ಅನಗತ್ಯವಾಗಿ ಕಟ್ಟಿದೆ. ಈ ತೆರಿಗೆ ಪ್ರಕರಣದ ಬಗ್ಗೆ ತನಿಖೆ ಆಗಬೇಕು ಎಂದರು.

  ಐಎಂಎ ಪ್ರಕರಣದ ಹಿಂದೆ ರಾಜಕಾರಣಿಯೊಬ್ಬರ ಕೈವಾಡ ಇದೆ ಅಂತ‌ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಚಿವರಾಗಿದ್ದ ಆ ರಾಜಕಾರಣಿಯ ಹಸ್ತಕ್ಷೇಪ ಇದೆ ಅಂತಲೂ ವರದಿಯಾಗಿದೆ. ಅವರು ಈಗ‌ ತಮಗೆ ತಾವು ಸೇಫ್ ಅನ್ಕೊಂಡು ಓಡಾಡುತ್ತಿದ್ದಾರೆ. ಬೇರೆ ಪಕ್ಷಕ್ಕೆ ಹೋಗಿದೀನಿ ಹಾಗಾಗಿ ಸೇಫ್ ಅಂತ ಆ ರಾಜಕಾರಣಿ ಅಂದುಕೊಂಡಿದ್ದಾರೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೆಸರು ಹೇಳದೇ  ಶಾಸಕ ರಿಜ್ವಾನ್ ಅರ್ಷದ್ ತಿರುಗೇಟು ನೀಡಿದರು.

  ಇದಕ್ಕೆ ಉತ್ತರ ನೀಡಿದ ಸಚಿವ ಮಾಧುಸ್ವಾಮಿ, ಈ  ಪ್ರಕರಣದಲ್ಲಿ 70 ಸಾವಿರ ಜನರಿಗೆ ಮೋಸವಾಗಿದೆ. ಒಟ್ಟು 465 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ. ಐಎಂಎ ಪ್ರಕರಣಗಳ ವಿಚಾರಣೆಗೆ ವಿಶೇಷ ತನಿಖಾ ದಳ‌ ರಚಿಸಲಾಗಿದೆ. ಮನ್ಸೂರ್ ಅಲಿ ವಿರುದ್ಧ ಹಲವು ಹೂಡಿಕೆದಾರರು‌ ಹಲವರು ದೂರು ಕೊಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ಸಿಬಿಐಯಿಂದ ತನಿಖೆ‌ ನಡೆಯುತ್ತಿದ್ದು, ತನಿಖಾ ವರದಿಯನ್ನು ಹೈಕೋರ್ಟ್ ಹಾಗೂ ಸಿಬಿಐ ಸಲ್ಲಿಸುತ್ತೇವೆ ಎಂದು ಸಭೆಯಲ್ಲಿ ಸದಸ್ಯರಿಗೆ ಸಚಿವರು ತಿಳಿಸಿದರು.

  ಐಎಂಎ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ರಿಸರ್ವ್ ಬ್ಯಾಂಕ್ ಸ್ಥಳೀಯ ಮುಖ್ಯಸ್ಥರು ಮತ್ತು ವಿವಿಧ ವ್ಯಕ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವಂಚಕ ಕಂಪೆನಿಗಳ‌ ಮೇಲೆ ನಿಗಾ‌ ಇಡಲಾಗುವುದು. ಸಾರ್ವಜನಿಕರಿಗೂ‌ ಈ‌ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

  ಮತ್ತೆ ಐಎಂಎ ಪ್ರಕರಣಗಳು ಮರುಕಳಿಸದಂತೆ ಕ್ರಮ ಆಗಬೇಕು. ಇಂಥ ಹೂಡಿಕೆ ಸಂದರ್ಭದಲ್ಲಿ ವಿಮೆ‌ ಮಾಡಿಸಲು ಸಾಧ್ಯನಾ ಎನ್ನುವುದರ ಬಗ್ಗೆ ಪರಿಶೀಲನೆ ಆಗಬೇಕು ಎಂದು ಚರ್ಚೆ ವೇಳೆ ಶಾಸಕಿ ಸೌಮ್ಯ‌ರೆಡ್ಡಿ‌ ಸರ್ಕಾರವನ್ನುಒತ್ತಾಯಿಸಿದರು.

  ಇದುವರೆಗೆ ಎಷ್ಟು ಹಣ ಐಎಂಎಯಿಂದ ಜಪ್ತಿ ಮಾಡಲಾಗಿದೆ ಅನ್ನೋ ಮಾಹಿತಿ‌ ಕೊಡಬೇಕು. ಜಪ್ತಿ ಆಗಿರುವ ಹಣ, ಆಸ್ತಿಯನ್ನು ಕಷ್ಟದಲ್ಲಿರುವ ಹೂಡಿಕೆದಾರರಿಗೆ‌ ವಿತರಿಸುವ ಕೆಲಸ ಆಗಲಿ. 50 ಸಾವಿರದಿಂದ 1 ಲಕ್ಷ ಹೂಡಿಕೆ ಮಾಡಿದವರಿಗೆ ಅವರ ಹಣ ವಾಪಸ್ ಮಾಡಲು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಶಾಸಕ ಜಮೀರ್ ಅಹಮದ್ ಒತ್ತಾಯ ಮಾಡಿದರು.

  ಇದನ್ನೂ ಓದಿ : ಐಎಂಎ ಬಹುಕೋಟಿ ವಂಚನೆ ಪ್ರಕಟಣೆ; 15 ಅಧಿಕಾರಿಗಳ ಮನೆ ಮೇಲೆ ದಾಳಿ ಸಂಬಂಧ ಸಿಬಿಐನಿಂದ ಪ್ರಕಟಣೆ ಬಿಡುಗಡೆ

  ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಐಎಂಎ ಪ್ರಕರಣ ವಿರುದ್ಧ ಇನ್ನೂ ದೂರುಗಳು ಬರುತ್ತಿದ್ದು, ದೂರುಗಳನ್ನು ಸದ್ಯದಲ್ಲೇ ಆನ್ ಲೈನ್ ಮೂಲಕ ತಗೆದುಕೊಳ್ಳಲಾಗುವುದು.  ಐಎಂಎಯಿಂದ ಜಪ್ತಿಯಾಗಿರುವ ಆಸ್ತಿ, ಹಣ ಬಗ್ಗೆ ಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕು. ಹೂಡಿಕೆದಾರರಿಗೆ ಹಣ ಹಂಚುವ ಅಧಿಕಾರ ಸರ್ಕಾರಕ್ಕಿಲ್ಲ. ಇದನ್ನು ಕೋರ್ಟ್​  ನಿರ್ಧರಿಸಲಿದೆ. ಆದರೂ ಈ ಕುರಿತು ಹೈಕೋರ್ಟ್ ಗೆ ಸರ್ಕಾರದಿಂದ ಮನವಿ ಸಲ್ಲಿಸಲಾಗುವುದು. ಜಪ್ತಿಯಾದ ಹಣ ಹಂಚಬಹುದಾ ಎನ್ನುವುದರ ಬಗ್ಗೆ ಕೋರ್ಟ್ ಗೆ ಮನವಿ ಮಾಡಲಾಗುವುದು ಎಂದು ಸದನದಲ್ಲಿ ಕಾಂಗ್ರೆಸ್ ಸದಸ್ಯರಿಗೆ ಸಚಿವರು ಉತ್ತರ ನೀಡಿದರು.
  First published: