ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಶಾಸಕ ಜಮೀರ್​ಗೆ ಕೊರೋನಾ ಪಾಸಿಟಿವ್​!

ಕಳೆದ ವರ್ಷ ಸಿದ್ದರಾಮಯ್ಯ ಸೋಂಕಿಗೆ ತುತ್ತಾಗಿ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈಗ ಮತ್ತೆ ಸೋಂಕಿತರ ಸಂಪರ್ಕದಿಂದ ಸೋಂಕಿನ ಭೀತಿ ಎದುರಾಗಿದೆ.

ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್

ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್

  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತೀವ್ರವಾಗಿ ಉಲ್ಬಣಗೊಂಡಿದ್ದು, ನಿತ್ಯ 20 ಸಾವಿರಕ್ಕೂ ಹೆಚ್ಚು ಮಂದಿಯನ್ನು ಡೆಡ್ಲಿ ವೈರಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಜನಪ್ರತಿನಿಧಿಗಳು ಸೋಂಕಿಗೆ ತುತ್ತಾಗುತ್ತಿದ್ದು, ಇಂದು ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​​ ಕೋವಿಡ್​ ರಿಪೋರ್ಟ್​​ ಪಾಸಿಟಿವ್​ ಬಂದಿದೆ. ಈ ಬಗ್ಗೆ ಟ್ವಿಟರ್​ ಮೂಲಕ ತಿಳಿಸಿರುವ ಶಾಸಕ ಜಮೀರ್​, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್​ ಟೆಸ್ಟ್​​ಗೆ ಒಳಗಾಗಿದ್ದೆ. ರಿಪೋರ್ಟ್​​ ಪಾಸಿಟಿವ್​ ಬಂದಿದೆ ಎಂದು ತಿಳಿಸಿದ್ದಾರೆ.  

ವೈದ್ಯರ ಸಲಹೆ ಮೇರೆಗೆ ಶಾಸಕ ಜಮೀರ್​ ಹೋಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಕೆಲ ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್​ ಪರೀಕ್ಷೆಗೆ ಒಳಗಾಗುವಂತೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೇ ಶಾಸಕ ಜಮೀರ್​ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿದ್ದರು. ಮುಸ್ಲಿಂ ಧರ್ಮಗುರುಗಳ ಜೊತೆ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ರಂಜಾನ್ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ಸರ್ಕಾರವನ್ನ ಒತ್ತಾಯಿಸುವಂತೆ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದರು. ಕೊರೋನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಶವ ಸಂಸ್ಕಾರಕ್ಕೆ ಪ್ರತ್ಯೇಕ ಸ್ಮಶಾನ (ಪ್ರತ್ಯೇಕ ಜಾಗ) ವ್ಯವಸ್ಥೆ ಮಾಡುವಂತೆ ಇದೇ ವೇಳೆ ಮನವಿ ಮಾಡಿಕೊಂಡಿದ್ದರು. ಜಮೀರ್​ಗೆ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್  ಸಾಥ್ ನೀಡಿದ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾದ ಮರುದಿನವೇ ಜಮೀರ್​ ಅವರಿಗೆ ಕೊರೋನಾ ಪಾಸಿಟಿವ್​ ಬಂದಿದ್ದು ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೋವಿಡ್​ ಪರೀಕ್ಷೆಗೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಸಿದ್ದರಾಮಯ್ಯ ಸೋಂಕಿಗೆ ತುತ್ತಾಗಿ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈಗ ಮತ್ತೆ ಸೋಂಕಿತರ ಸಂಪರ್ಕದಿಂದ ಸೋಂಕಿನ ಭೀತಿ ಎದುರಾಗಿದೆ.

ಇನ್ನು ಸಿಎಂ ಬಿ.ಎಸ್​.ಯಡಿಯೂರಪ್ಪ 2ನೇ ಬಾರಿ ಕೊರೋನಾದಿಂದ ಗುಣಮುಖರಾಗಿ ಇಂದು ಡಿಸ್ಚಾರ್ಜ್​​ ಆಗಿದ್ದಾರೆ. 2ನೇ ಸಲ ಸೋಂಕಿಗೆ ಒಳಗಾಗಿದ್ದರಿಂದ 6 ದಿನಗಳ ಹಿಂದೆ ಸಿಎಂ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಇಂದು ಕೋವಿಡ್​ ವರದಿ ನೆಗೆಟಿವ್​ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಯಡಿಯೂರಪ್ಪ ಮಾತ್ರವಲ್ಲದೆ ಅವರ ಜೊತೆಯಲ್ಲಿ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪನವರ ಮೊಮ್ಮಗಳು ಸೌಂದರ್ಯ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಕಾವೇರಿ ನಿವಾಸಕ್ಕೆ ಸಿಎಂ ಯಡಿಯೂರಪ್ಪ ವಾಪಸ್​ ಆಗಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾತನಾಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ನಾನು ಮನೆಯಲ್ಲಿ ವಿಶ್ರಾಂತಿ ಪಡೆಯುವುದಿಲ್ಲ. ಆಸ್ಪತ್ರೆಯಲ್ಲಿದ್ದಾಗಲೇ ಸಾಕಷ್ಟು ವಿಶ್ರಾಂತಿ ಪಡೆದಿದ್ದೇನೆ. ಇವತ್ತು ಸಂಪುಟ ಸಹೋದ್ಯೋಗಿಗಳ ಜೊತೆ ಕೊರೋನಾ ನಿಯಂತ್ರಣದ ಬಗ್ಗೆ ಚರ್ಚೆ ಮಾಡುತ್ತೇನೆ. ಕೋವಿಡ್ ನಿರ್ವಹಣೆ ನನ್ನ ಮೊದಲ ಆದ್ಯತೆಯಾಗಿದೆ. ನಾನು ನಿರಂತರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ಜೊತೆ ಸಂಪರ್ಕದಲ್ಲಿದ್ದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಿಗಿಯಾದ ನಿಯಮಗಳನ್ನು ಕೈಗೊಂಡಿದ್ದೇವೆ. ಅದರ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಅದರಂತೆ ಜನರು ಸಹಕಾರ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
Published by:Kavya V
First published: