news18-kannada Updated:August 13, 2020, 12:20 PM IST
ಕಾಂಗ್ರೆಸ್ ಶಾಸಕ ಜಮೀರ್ ಅಹಮದ್
ಬೆಂಗಳೂರು(ಆ.13): ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲಿ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಜಮೀರ್ ಅಹಮದ್ ಖಾನ್, ಪ್ರವಾದಿ ಮಹಮ್ಮದ್ ಪೈಗಂಬರರನ್ನು ವ್ಯಕ್ತಿಯೊಬ್ಬ ನಿಂದಿಸಿರುವುದು ವೈಯಕ್ತಿಕವಾಗಿ ನನಗೂ ಸಾಕಷ್ಟು ನೋವಾಗಿದೆ. ನಮ್ಮ ನೋವು, ಆಕ್ರೋಶವನ್ನು ಕಾನೂನು ಹೋರಾಟದ ಮೂಲಕದ ತೋರಿಸಿ, ಕಠಿಣ ಶಿಕ್ಷೆಗೆ ಆಗ್ರಹಿಸಬೇಕೇ ಹೊರತು ಅಶಾಂತಿಯ ಮೂಲಕವಲ್ಲ ಎಂದು ಹೇಳಿದ್ದಾರೆ.
ಗೋಲಿಬಾರ್ನಿಂದ ಮೃತಪಟ್ಟ ಯುವಕರ ಮನೆಗೆ ನಿನ್ನೆ ಭೇಟಿ ನೀಡಿದ್ದೆ. ನಿಜಕ್ಕೂ ಅವರ ಕುಟುಂಬಗಳ ಪರಿಸ್ಥಿತಿ ಕಂಡು ಕಣ್ಣೀರು ಬಂತು. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ, ತಂಗಿಗೆ ಯಾರು ದಿಕ್ಕು? ಯಾರೋ ಕಿಡಿಗೇಡಿಗಳು ಕಲ್ಲು ತೂರಿ, ಬೆಂಕಿ ಹಚ್ಚಿದರು, ಬಲಿಯಾದವರು ಇನ್ಯಾರೋ ಎಂದು ಜಮೀರ್ ಅಸಮಾಧಾನ ಹೊರಹಾಕಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರಿಗೆ ಖಂಡಿತಾ ಕಠಿಣ ಶಿಕ್ಷೆ ಆಗಲಿದೆ. ಗಾಳಿ ಸುದ್ದಿಗಳಿಗೆ ಕಿವಿ ಕೊಡಬೇಡಿ, ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವ ನಮ್ಮ ನಿರ್ಧಾರ ಅಚಲವಾಗಿರಲಿ. ಶಾಂತಿ, ಸೌಹಾರ್ದತೆಗೆ ಎಲ್ಲರೂ ಸಹಕರಿಸಿ ಎಂದು ಕೈ ಮುಗಿದ್ದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ ಜಮೀರ್.
ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್ ಎಂಬುವರ ಫೇಸ್ಬುಕ್ ಖಾತೆಯಲ್ಲಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ಇದರಿಂದ ಒಂದು ಕೋಮಿನ ಜನರು ರೊಚ್ಚಿಗೆದ್ದು ನಿನ್ನೆ ರಾತ್ರಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಗಲಭೆಗಳಾಗಿವೆ. ಅಂಖಡರ ಮನೆಯನ್ನ ಸುಟ್ಟುಹಾಕಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಲಾಗಿದೆ. 2-3 ಸಾವಿರದಷ್ಟಿದ್ದ ಗಲಭೆಕೋರರು ಪೊಲೀಸ್ ವಾಹನ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ಪೊಲೀಸರ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಕೊರೋನಾದಿಂದ ಗುಣಮುಖ: ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್
Published by:
Ganesh Nachikethu
First published:
August 13, 2020, 12:14 PM IST