ಮೈಸೂರು (ಫೆ. 27): ಮೈಸೂರು ಪಾಲಿಕೆ ಚುನಾವಣೆ ವಿಚಾರ ಈಗ ಕಾಂಗ್ರೆಸ್ ನಾಯಕರಲ್ಲಿ ಬಿರುಕು ಮೂಡಿಸಿದ್ದು, ಕೆಂಡವಾಗಿ ಪರಿಣಮಿಸಿದೆ. ಇದೇ ವಿಚಾರವಾಗಿ ನಾಯಕರ ಮಧ್ಯದಲ್ಲಿ ಮನಸ್ತಾಪ ಮೂಡಿದ್ದು , ಪರಸ್ಪರ ವಾಗ್ದಾಳಿಗೆ ಕಾರಣವಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿರುವ ಶಾಸಕ ತನ್ವೀರ್ ಸೇಠ್, ಪಕ್ಷದಲ್ಲಿ ನಾಯಕರಿಗೆ ಮಾತ್ರ ಹಿಂಬಾಲಕರಿದ್ದರೆ, ನನ್ನ ಹಿಂದೆ ಕತ್ತೆಗಳಿದ್ದಾರಾ? ಎಂದುಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೂ ಹಿಂಬಾಲಕರಿದ್ದಾರೆ ಆದರೆ, ನಾನು ಯಾರನ್ನು ಪ್ರತಿಭಟನೆ ಮಾಡಿ ಎಂದು ಕರೆದಿಲ್ಲ. ಪ್ರತಿಭಟನೆ ಮಾಡಲು ಪುಡಿಗಾಸಿಗೆ ಬರುತ್ತಾರೆ ಎಂದರೆ ಏನರ್ಥ? ಹಿಂಬಾಲಕರೇನು ಮಾರಾಟಕ್ಕಿದ್ದಾರಾ? ಎಂದು ವಾಗ್ದಾಳಿ ನಡೆಸಿದರು. ನಿನ್ನೆಯ ಘಟನೆ ಬಗ್ಗೆ ನನಗೂ ಬೇಸರ ಇದೆ. ಸಿದ್ದರಾಮಯ್ಯನವರ ವಿರುದ್ದ ಪ್ರತಿಭಟನೆ ಮಾಡಿ ಎಂದು ಯಾರನ್ನು ನನ್ನ ಮನೆ ಬಳಿ ಕರೆಸಿಲ್ಲ. ಇಷ್ಟರ ಮೇಲೂ ಪಕ್ಷ ನನ್ನ ಮೇಲೆ ಯಾವ ಕ್ರಮಕ್ಕೆ ಮುಂದಾಗುತ್ತದೆ ಎಂದರೆ ಕೈಗೊಳ್ಳಲಿ ಎಂದು ಗುಡುಗಿದರು.
ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹೇಳಿದ್ದೆ. ಗಂಡು ಮಗು ಆಗಿಲ್ಲ. ಹೆಣ್ಣು ಮಗು ಆಗಿದೆ ಅಷ್ಟೇ, ಗಂಡು ಮಗು ಆದರೆ ಸರಿ ಹೆಣ್ಣು ಮಗು ಬೇಡ ಅಂದರೆ ನಾನು ಒಪ್ಪಲ್ಲ. ಸೋಮವಾರ ಡಿ ಕೆ ಶಿವಕುಮಾರ್ ಭೇಟಿ ಮಾಡಿ ಘಟನೆಯ ಕುರಿತು ಎಲ್ಲಾ ವರದಿ ನೀಡುವೆ. ನನಗೆ ಪಕ್ಷದ ಋಣವಿದೆ. ವ್ಯಕ್ತಿಗಳ ವರ್ಚಸ್ಸು ವಿಚಾರ ಬಂದಾಗ ಎಲ್ಲರಿಗೂ ಗೌರವ ವರ್ಚಸ್ಸು ಇದೆ ಅಂತ ನಂಬಿದ್ದೇನೆ. ಪಕ್ಷದಲ್ಲಿ ನನಗೂ ನನ್ನದೇ ಆದ ಗೌರವ ಇದೆ, ನಮ್ಮ ಕುಟುಂಬದ ವರ್ಚಸ್ಸು ಇದೆ. ಬೇರೆಯವರ ವರ್ಚಸ್ಸನ್ನು ನಾನು ನೋಡಲ್ಲ ಅಂತ ಸಿದ್ದು ಪ್ರತಿಷ್ಠೆಯನ್ನ ಪ್ರಶ್ನಿಸುವಂತೆ ಮಾತನಾಡಿದರು.
ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟ ವಿಚಾರವಾಗಿ ನನ್ನನ್ನು ಅಮಾನತು ಮಾಡಲು ಒತ್ತಾಯ ಕೇಳಿಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದಕ್ಕೂ ಹೆದರುವುದಿಲ್ಲ. ಅಮಾನತು ಮಾಡಿದರು ಸಿದ್ದವಾಗಿದ್ದೇನೆ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ ಎಂದರು.
ಇದನ್ನು ಓದಿ: ಜಾತಿ ಅಲ್ಲ, ಹಿಂದುತ್ವದ ಆಧಾರದ ಮೇಲೆ ನನ್ನ ರಾಜಕಾರಣ: ಡಿಸಿಎಂ ಲಕ್ಷ್ಮಣ ಸವದಿ
ಸಿದ್ದರಾಮಯ್ಯ ಪರ ಮಹದೇವಪ್ಪ ಬ್ಯಾಟಿಂಗ್
ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ. ಆನೆ ಹೋಗುತ್ತೆ ನಾಯಿ ಬೊಗಳುತ್ತೆ. ಅದರಿಂದ ಏನು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಸಿ ಮಾತನಾಡಿದರು. ಘೋಷಣೆ ಕೂಗಿದವರನ್ನ ನಾಯಿಗಳಿಗೆ ಹೋಲಿಸಿದ ಹೆಚ್.ಸಿ.ಮಹದೇವಪ್ಪ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ನಾಯಕರ ವಿರುದ್ದ ದೋಷಣೆ ಮಾಡಿದ್ದರು. ಆದರೆ, ಅವರ ಹೆಸರುಗಳೇನು ಚರಿತ್ರೆಯಲ್ಲಿ ಹಾಳಾಯಿತ್ತಾ? ಆ ಮಹಾನ್ ನಾಯಕರ ವರ್ಚಸ್ಸಿಗೆ ಧಕ್ಕೆಯಾಯಿತಾ? ಇದು ಹಾಗೇಯೆ ಘೋಷಣೆ ಕೂಗುವುದರಿಂದ ಏನು ಆಗುವುದಿಲ್ಲ. ಆನೆ ಹೋಗುತ್ತಲೆ ಇರುತ್ತದೆ. ನಾಯಿ ಬೊಗಳುತ್ತಲೆ ಇರುತ್ತದೆ ಎಂದರು.
ಶಾಸಕ ತನ್ವೀರ್ ವಿರುದ್ಧ ಕಾರ್ಯಕರ್ತರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರತ್ತ ಬೊಟ್ಟು ಮಾಡಿದರು. ಸಿದ್ದರಾಮಯ್ಯ ವಿರುದ್ದ ಘೋಷಣೆ ದುರಾದೃಷ್ಟಕರ . ಈ ಬಗ್ಗೆ , ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಒಬ್ಬ ಶ್ರೇಷ್ಠ ನಾಯಕ, ಅವರನ್ನು ಅರ್ಥ ಮಾಡಿಕೊಳ್ಳದೆ ಕೆಲವರು ಘೋಷಣೆ ಕೂಗಿದ್ದು ಸರಿಯಲ್ಲ ಈ ರೀತಿ ಬೆಳವಣಿಗೆ ಸ್ಥಳೀಯ ಕಾಂಗ್ರೆಸ್ ಸಂಘಟನೆಗೆ ಆರೋಗ್ಯಕರವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ