ಬೆಳಗಾವಿ: ಕುಂದಾನಗರಿ ಬೆಳಗಾವಿ ರಾಜಕಾರಣ (Belagavi Politics) ಅಂದ್ರೆ ಕಣ್ಮುಂದೆ ಬರುವ ಎರಡು ಹೆಸರುಗಳೆಂದ್ರೆ ಒಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಮತ್ತೊಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi). ಇಬ್ಬರ ನಡುವಿನ ರಾಜಕೀಯ ಕಾಳಗ ಇಡೀ ರಾಜ್ಯದ ಗಮನ ಸೆಳೆದಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲ್ಲಿಸಲು ಕೆಲಸ ಮಾಡಿದ್ದ ರಮೇಶ್ ಜಾರಕಿಹೊಳಿ ಈ ಬಾರಿ ಸೋಲಿಸಲು ಆಪ್ತನನ್ನ ಕಣಕ್ಕಿಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕ್ನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶಕ್ಕೆ ಹಾಜರಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ (Gokak Congress Candidate Mahantesh Kadadi) ಪರ ಮತಯಾಚನೆ ಮಾಡಿದರು.
ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಅಶೋಕ್ ಪೂಜಾರಿ 35 ವರ್ಷದ ರಾಜಕೀಯ ಹೋರಾಟದಲ್ಲಿ ರಾಜೀ ಮಾಡಿಕೊಂಡಿಲ್ಲ. ಯಾರಿಗೂ ಹೆದರಲಿಲ್ಲ, ಆಮಿಷಕ್ಕೆ ಕೈ ಜೋಡಿಸಿಲ್ಲ ಆದರೂ ವಿರೋಧಿಗಳು ಅವರ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ಗುಡುಗಿದರು.
ಅಶೋಕ್ ಪೂಜಾರಿಗೆ ಭರವಸೆ
ಅಶೋಕ್ ಪೂಜಾರಿ ಅವರೇ ನಿಮ್ಮ ಜೊತೆಗೆ ನಾನು, ಕಾಂಗ್ರೆಸ್ ಪಕ್ಷವಿದೆ. ಕಾಂಗ್ರೆಸ್ ಅಧಿಕಾರಕ್ಕ ಬರುತ್ತದೆ, ನಮ್ಮ ನಾಯಕರ ಕೈಕಾಲು ಮುಗಿದು ನಿಮಗೆ ಸ್ಥಾನಮಾನ ಕೊಡಿಸುವೆ ಎಂದು ಮಾತು ನೀಡಿದರು. ಅಶೋಕ್ ಪೂಜಾರಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ದೇಶದ ಯುವಕರ, ಕೃಷಿಕರ, ಮಹಿಳೆಯರ ಜೀವನ ಇಂದು ಸಂಕಷ್ಟದಲ್ಲಿದೆ. ಮತದಾನ ದಿನದಂದು ಸಂದರ್ಭದಲ್ಲಿ ಧೈರ್ಯದಿಂದ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಬದಲಾವಣೆ ಗಾಳಿ ಬೀಸಿದೆ
ಬದಲಾವಣೆ ಜಗದ ನಿಯಮ, ಇಲ್ಲಿಯೂ ಬದಲಾವಣೆ ಗಾಳಿ ಬೀಸಿದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಯುವ ವೈದ್ಯ ಮತ್ತು ಯುವಕನಿದ್ದಾನೆ ಸುಸಂಸ್ಕೃತನಿದ್ದಾನೆ. ಅನುಭವದ ಕೊರತೆ ಇದ್ದರೂ, ನಿಮ್ಮ ಸೇವೆ ಮಾಡುತ್ತಾನೆ, ನಿಮಗೆ ನೀಡಿದ ಭರವಸೆ ಈಡೇರಿಸುತ್ತಾನೆ. ಇಂಥ ಯುವಕನಿಗೊಮ್ಮೆ ನೀವೊಂದು ಅವಕಾಶ ಕೊಡಿ ಎಂದ ಮತಯಾಚನೆ ಮಾಡಿದರು.
ಬಿಜೆಪಿಯದ್ದು 40 ಪರ್ಸೆಂಟ್ ಯೋಜನೆ, ಪಿಎಸ್ಐ, ಇಂಜಿನಿಯರಿಂಗ್ ಸೇರಿ ಎಲ್ಲಾ ನೇಮಕಾತಿಯಲ್ಲಿ ಹಗರಣದ ಆರೋಪ ಕೇಳಿ ಬಂದಿದೆ. ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಜನರ ಮುಂದೆ ಮತ ಕೇಳಲು ಬರುತ್ತಿದ್ದಾರೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಗೋಕಾಕ್ ನನಗೆ ಪ್ರಿಯವಾದ ಕ್ಷೇತ್ರ
ನಿನ್ನೆಯಿಂದ ಸಾಕಷ್ಟು ಜನರು ನನಗೆ ವಾಟ್ಸಪ್ ಮೆಸೇಜ್ ಮಾಡಿ, ಗೋಕಾಕಿಗೆ ಬರ್ತಿರಾ ಎಂದು ಕೇಳಿದರು. ಗೋಕಾಕ್ ಬೆಳಗಾವಿ ಜಿಲ್ಲೆಯಲ್ಲೇ ಇದೆ, ಗೋಕಾಕ ನನಗೆ ಪ್ರಿಯವಾದ ಕ್ಷೇತ್ರ. ಧೈರ್ಯಂ ಸರ್ವತ್ರ ಸಾಧನಂ ಮಾತನ್ನು ಎಲ್ಲರೂ ನೆನಪಿಟ್ಟುಕೊಳ್ಳಿ. ಎಲ್ಲರೂ ಧೈರ್ಯದಿಂದ ಮತದಾನ ಮಾಡಿ, ನಿಮ್ಮ ಕಷ್ಟ- ಸುಖದ ಜೊತೆಗೆ ನಾನು ಭಾಗಿಯಾಗುವೆ ಎಂದು ಹೆಬ್ಬಾಳ್ಕರ್ ಅಭಯ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ