ಎಸ್​ಟಿಪಿ ಘಟಕ ಸ್ಥಾಪನೆಗೆ ಪರಿಹಾರ ನೀಡದೆ ರೈತರ ಭೂಮಿ ಸ್ವಾಧೀನ; ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

ರೈತರ ಮೇಲೆ ದೌರ್ಜನ್ಯ, ಅನ್ಯಾಯ ಆಗಿದೆ. ನಮಗೆ ರೈತರ ಭವಿಷ್ಯದ ಚಿಂತೆಯಾಗಿದೆ. ಎಸ್ ಟಿ ಪಿ ಘಟಕ ಸ್ಥಾಪನೆ ಬಗ್ಗೆ ಕತ್ತಲಲ್ಲಿ ಇಟ್ಟು ಸರ್ಕಾರ ಕೆಲಸ ಮಾಡಿದೆ- ಲಕ್ಷ್ಮೀ ಹೆಬ್ಬಾಳ್ಕರ್​

Latha CG | news18
Updated:June 6, 2019, 11:39 AM IST
ಎಸ್​ಟಿಪಿ ಘಟಕ ಸ್ಥಾಪನೆಗೆ ಪರಿಹಾರ ನೀಡದೆ ರೈತರ ಭೂಮಿ ಸ್ವಾಧೀನ; ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​
ಲಕ್ಷ್ಮೀ ಹೆಬ್ಬಾಳ್ಕರ್​​
  • News18
  • Last Updated: June 6, 2019, 11:39 AM IST
  • Share this:
ಬೆಳಗಾವಿ,(ಜೂ.06): ಮೈತ್ರಿ ಸರ್ಕಾರದ ನಿರ್ಧಾರಗಳಿಗೆ ಕಾಂಗ್ರೆಸ್​ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಿಂದಾಲ್​ ನಿರ್ಧಾರಕ್ಕೆ ಕೈ ಮುಖಂಡ ಎಚ್​.ಕೆ ಪಾಟೀಲ್​ ವಿರೋಧ ವ್ಯಕ್ತಪಡಿಸಿದರೆ, ಎಸ್​ಟಿಪಿ ಘಟಕ (ಕೊಳಚೆ ನೀರು ಸಂಸ್ಕರಣಾ ಘಟಕ) ವಿಚಾರದಲ್ಲಿ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸರ್ಕಾರದ ವಿರುದ್ಧ​ ಗರಂ ಆಗಿದ್ದಾರೆ. ಹಲಗಾ ಗ್ರಾಮದ ಬಳಿ ಎಸ್​ಟಿಪಿ ಘಟಕ ಸ್ಥಾಪನೆಗೆ ರೈತರಿಂದ ಭೂಮಿ ಪಡೆದು ಪರಿಹಾರ ಕೊಡದ ಜಿಲ್ಲಾಡಳಿತ ಕ್ರಮದ ವಿರುದ್ಧ  ಶಾಸಕಿ ಲಕ್ಷೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

"ಎಸ್​ಟಿಪಿ ಘಟಕ ಸ್ಥಾಪನೆಗೆ ಈಗಾಗಲೇ ಜಿಲ್ಲಾಡಳಿತ ಬಲವಂತವಾಗಿ ರೈತರ ಭೂಮಿ ಪಡೆದಿದೆ. ಹಲಗಾ ಗ್ರಾಮದ ರೈತರಿಗೆ ಅನ್ಯಾಯ‌ ಆಗಿದೆ. ರೈತರ ಕಷ್ಟದಲ್ಲಿ ನಾನು ಭಾಗಿಯಾಗುವುದು ನನ್ನ ಧರ್ಮ, ಎಕರೆಗೆ 3 ಲಕ್ಷ ಕೊಡಬಹುದು ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ರೈತರಿಗೆ ಜಿಲ್ಲಾಡಳಿತ ಭರವಸೆ ನೀಡಿಲ್ಲ. ಜಿಲ್ಲಾಡಳಿತಕ್ಕೆ ಯಾವುದೇ ಹೃದಯ ಇಲ್ಲ," ಎಂದು ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದರು. "ಅಭಿವೃದ್ಧಿಗೆ ಯಾವಾಗಲೂ ನನ್ನ ವಿರೋಧವಿಲ್ಲ. ಅನೇಕ ವಿಚಾರದಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಸುವರ್ಣಸೌಧಕ್ಕೆ ಭೂಮಿ ನೀಡಿದ ರೈತರಿಗೆ ಒಂದು ಎಕರೆಗೆ 13 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಎಸ್​ಟಿಪಿ ಘಟಕ ಸ್ಥಾಪನೆಗೆ ಭೂಮಿ ನೀಡಿದ ರೈತರಿಗೆ 3 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಜಿಲ್ಲಾಡಳಿತ ಹೇಳಿತ್ತು.  ಸುವರ್ಣಸೌಧದ ಸುತ್ತಮುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗ್ರೀನ್ ಬೆಲ್ಟ್ ಎಂದು ಘೋಷಣೆ ಮಾಡಲಾಗಿದೆ. ರೈತರ ಭೂಮಿ ಪಡೆದು 9 ದಿನ ಕಳೆದರೂ ಈವರೆಗೆ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ," ಎಂದು ಆರೋಪಿಸಿದರು.

ಇದನ್ನೂ ಓದಿ: ಯಡಿಯೂರಪ್ಪ ಕಾಂಗ್ರೆಸ್ಸಿಗೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ- ಗೃಹ ಸಚಿವ ಎಂ. ಬಿ. ಪಾಟೀಲ್ ಟಾಂಗ್

"ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕರೆದುಕೊಂಡು ಹೋಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರ ನಿಲ್ಲಬೇಕು.ಇದನ್ನು ವೈಯಕ್ತಿಕ ‌ಪ್ರತಿಷ್ಠೆಯಾಗಿ ತೆಗೆದುಕೊಳ್ಳಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯ ಒದಗಿಸಬೇಕು. ರೈತರ ಮೇಲೆ ದೌರ್ಜನ್ಯ, ಅನ್ಯಾಯ ಆಗಿದೆ. ನಮಗೆ ರೈತರ ಭವಿಷ್ಯದ ಚಿಂತೆಯಾಗಿದೆ. ಎಸ್ ಟಿ ಪಿ ಘಟಕ ಸ್ಥಾಪನೆ ಬಗ್ಗೆ ಕತ್ತಲಲ್ಲಿ ಇಟ್ಟು ಸರ್ಕಾರ ಕೆಲಸ ಮಾಡಿದೆ," ಎಂದು ಕಿಡಿಕಾರಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಮಾಡಿದ್ದು ತಪ್ಪೇನಲ್ಲ; ಸತೀಶ್​ ಜಾರಕಿಹೊಳಿ

ಈ ಬಗ್ಗೆ ಅರಣ್ಯ ಸಚಿವ ಸತೀಶ್​ ಜಾರಕಿಹೊಳಿ ನ್ಯೂಸ್​ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಶಾಸಕಿಯಾಗಿ ಅವರು ತಮ್ಮ ಜನರ ಪರ ನಿಂತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ ಮಾಡಿದ್ದು ತಪ್ಪೇನಲ್ಲ ಎಂದು ಸಚಿವ ಸತೀಶ್​ ಜಾರಕಿಹೊಳಿ ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್​ ಜೊತೆಗೆ ನಾನು ಚರ್ಚಿಸುತ್ತೇನೆ. ಈಗಾಗಲೇ ರೈತರ ಜೊತೆಗೂ ಮಾತನಾಡಿದ್ದೇನೆ. ಸರ್ಕಾರದ ಮಟ್ಟದಲ್ಲಿ ಪರಿಹಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ