HOME » NEWS » State » CONGRESS MLA AND FORMER MINISTER PRIYANK KHARGE FIRES ON THE STATE GOVERNMENT SAKLB HK

ಆಹಾರ ಪ್ರಯೋಗಾಲಯ ಕಛೇರಿ ಬೆಳಗಾವಿಗೆ ಎತ್ತಂಗಡಿ: ತುಘಲಕ್ ದರ್ಬಾರ್ ನಿಲ್ಲಿಸುವಂತೆ ಪ್ರಿಯಾಂಕ್ ಖರ್ಗೆ ಆಗ್ರಹ

ಜವಳಿ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಅದರಲ್ಲೂ ಕಲಬುರ್ಗಿ ಜಿಲ್ಲೆಗೆ ಜಾರಿಗೆ ತರದೇ ಬಿಜೆಪಿ ಸರ್ಕಾರ ಈ ಭಾಗದ ಜನರಿಗೆ ದ್ರೋಹ ಬಗೆದಿದೆ

news18-kannada
Updated:December 24, 2020, 9:09 PM IST
ಆಹಾರ ಪ್ರಯೋಗಾಲಯ ಕಛೇರಿ ಬೆಳಗಾವಿಗೆ ಎತ್ತಂಗಡಿ: ತುಘಲಕ್ ದರ್ಬಾರ್ ನಿಲ್ಲಿಸುವಂತೆ ಪ್ರಿಯಾಂಕ್ ಖರ್ಗೆ ಆಗ್ರಹ
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
  • Share this:
ಕಲಬುರ್ಗಿ(ಡಿಸೆಂಬರ್​. 24): ಕಲಬುರ್ಗಿಯ ಆಹಾರ ಪ್ರಯೋಗಾಲಯ ವಿಭಾಗೀಯ ಕಛೇರಿಯನ್ನು ರಾಜ್ಯ ಸರ್ಕಾರ ಬೆಳಗಾವಿಗೆ ಸ್ಥಳಾಂತರಿಸಲು ಮುಂದಾಗಿದೆ. ದಿಢೀರಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತುಘಲಕ್ ದರ್ಬಾರ್ ನಿಲ್ಲಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಕಲಬುರ್ಗಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಹಾರ ಪ್ರಯೋಗಾಲಯ ವಿಭಾಗೀಯ ಕಛೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿ ಆವರಣದಲ್ಲಿರೋ ಸದ್ಯ ಆಹಾರ ಪ್ರಯೋಗಾಲಯ ವಿಭಾಗೀಯ ಕಛೇರಿ ಕಾರ್ಯನಿರ್ವಹಿಸುತ್ತಿದೆ. ಆದರೆ ಡಿಎಚ್ಒ ಕಛೇರಿ ಆವರಣವನ್ನು ಜಯದೇವ ಹೃದ್ರೋಗ ಸಂಸ್ಥೆಗೆ ನೀಡಿರುವುದರಿಂದ ಅಲ್ಲಿದ್ದ ಕಛೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ. 

ಡಿ.ಎಚ್.ಒ. ಕಛೇರಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಡಿ.ಎಚ್.ಎ. ಕಛೇರಿಯ ಆವರಣದಲ್ಲಿಯೋ ಬೇರೆ ಬೇರೆ ಕಛೇರಿಗಳನ್ನೂ ಬೇರೆ ಕಡೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ಆದರೆ ಆಹಾರ ಪ್ರಯೋಗಾಲಯದ ವಿಭಾಗೀಯ ಕಛೇರಿಯನ್ನು ಮಾತ್ರ ಏಕಾಏಕಿ ಬೆಳಗಾವಿಗೆ ಸ್ಥಳಾಂತರಸಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ಧೋರಣೆಗೆ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಖಂಡಿಸಿದ್ದಾರೆ.

ಮುಖ್ಯಮಂತ್ರಿಗಳೇ ಕಲ್ಯಾಣ ಕರ್ನಾಟಕದ ಬಗ್ಗೆ ನಿಮಗೇಕೆ ಇಷ್ಟು ಸಿಟ್ಟು ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ನಡೆ ಕಲ್ಯಾಣ ಕರ್ನಾಟಕದ ವಿರೋಧಿ ಧೋರಣೆಯಾಗಿದೆ. ಬಿಜೆಪಿ ನಾಯಕರಿಗೆ ಕಲಬುರ್ಗಿಯಲ್ಲಿ ಪ್ರಯೋಗಾಲಯಕ್ಕೆ ಜಾಗ ಕೊಡಿಸಲು ಕಷ್ಟವಾಗಿದ್ದರೆ ನನಗೆ ಹೇಳಲಿ. ಚಿತ್ತಾಪುರದಲ್ಲಿ ನಾನೇ ಖುದ್ದು ಕಟ್ಟಡದ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ. ರಾಜ್ಯ ಸರ್ಕಾರದ ತುಘಲಕ್ ನೀತಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರ್ಗಿ ಜಿಲ್ಲೆಗೆ ತನ್ನ ತಾರತಮ್ಯ ನೀತಿ ಮುಂದುವರೆಸಿದೆ. ಕೆಲ ದಿನಗಳ ಹಿಂದೆಯಷ್ಟೆ ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ರೈತರು ಹಾಗೂ ಜನಸಾಮಾನ್ಯರ ಮೇಲಿನ ತನ್ನ ಬೇಜವಾಬ್ದಾರಿತನವನ್ನು ಮುಂದುವರೆಸಿದ ರಾಜ್ಯ ಬಿಜೆಪಿ ಸರ್ಕಾರ ಈಗ ಮತ್ತೊಮ್ಮೆ ಕಲ್ಯಾಣ ಕರ್ನಾಟಕ ವಿರೋಧಿ ಧೋರಣೆ ಮುಂದುವರೆಸಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಕ್ಷಲ್ಲಕ ನೆಪವೊಡ್ಡಿ ವಿಭಾಗೀಯ ಕಚೇರಿಯೊಂದನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಸ್ಥಳಾಂತರಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎನಿಸುತ್ತಿದೆ.  1989 ರಲ್ಲಿ ಕಲಬುರಗಿಯಲ್ಲಿ ಸ್ಥಾಪನೆಯಾಗಿದ್ದ ಆಹಾರ ಪ್ರಯೋಗಾಲಯ ವಿಭಾಗೀಯ ಕಚೇರಿ ಸ್ಥಳಾಂತರಕ್ಕೆ ಆಯುಕ್ತರು ನೀಡಿರುವ ಕಾರಣಗಳೂ ಸಮಂಜಸವಲ್ಲ. ಜಯದೇವ‌ ಹೃದ್ರೋಗ ಸಂಸ್ಥೆಯ ಕಟ್ಟಡವನ್ನು ಇದೇ ಕಚೇರಿಯಲ್ಲಿ ಸ್ಥಾಪಿಸುವ ಉದ್ದೇಶದಿಂದ ವಿಭಾಗೀಯ ಕಚೇರಿಯನ್ನೇ ಬೆಳಗಾವಿಗೆ ಸ್ಥಳಾಂತರಿಸುವ ಸರ್ಕಾರದ ನಡೆಯನ್ನು ವಿರೋಧಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ : ರಾಜ್ಯ ಸಚಿವ ಸಂಪುಟ ಕಸರತ್ತು: ಸಚಿವಾಕಾಂಕ್ಷಿಗಳಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್

ಈ ಹಿಂದಿನ ಕಾಂಗ್ರೆಸ್ ಸರಕಾರಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಯೋಜನೆಗಳನ್ನು ಹಾಗೂ ಕಚೇರಿಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುವ ಮೂಲಕ ಈ ಭಾಗದ ಪ್ರಾದೇಶಿಕ ಅಮತೋಲನವನ್ನು ನಿವಾರಿಸಲು ಮಾರ್ಗ ರೂಪಿಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಕೆಕೆಆರ್ ಡಿಬಿ ಅನುದಾನ, ಸಚಿನ‌ ಸ್ಥಾನ, ಪ್ರತ್ಯೇಕ ರೇಲ್ವೆ ವಿಭಾಗೀಯ ಕಚೇರಿ, ತೊಗರಿ ಹಾಗೂ ಹೆಸರು ಖರೀದಿ ಕೇಂದ್ರಗಳ ಸ್ಥಾಪನೆ, ಜವಳಿ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಅದರಲ್ಲೂ ಕಲಬುರ್ಗಿ ಜಿಲ್ಲೆಗೆ ಜಾರಿಗೆ ತರದೇ ಬಿಜೆಪಿ ಸರ್ಕಾರ ಈ ಭಾಗದ ಜನರಿಗೆ ದ್ರೋಹ ಬಗೆದಿದೆ. ಇಂತಹ ನಿರ್ಲಜ್ಜ, ಹಾಗೂ ಬೇಜವಾಬ್ದಾರಿ ಸರ್ಕಾರವನ್ನು ಎಂದೂ ನೋಡಿರಲಿಲ್ಲ ಪ್ರಿಯಾಂಕ್ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
Youtube Video

ಆಹಾರ ಪ್ರಯೋಗಾಲಯದ ವಿಭಾಗೀಯ ಕಚೇರಿಯ ಸ್ಥಳಾಂತರದ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು. ಕಲಬುರ್ಗಿ ಸಂಸದರು, ಉಸ್ತುವಾರಿ ಸಚಿವರು ಹಾಗೂ ಬಿಜೆಪಿ ಶಾಸಕರು ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ‌ ಸರ್ಕಾರದ‌ ಮೇಲೆ ಒತ್ತಡ ತಂದು ಆಹಾರ ಪ್ರಯೋಗಾಲಯದ ವಿಭಾಗೀಯ ಕಚೇರಿಯನ್ನು ಕಲಬುರ್ಗಿ ಯಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
Published by: G Hareeshkumar
First published: December 24, 2020, 8:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories