ಬೆಂಗಳೂರು: ಬಜೆಟ್ ಅಧಿವೇಶನ (Budget Session) ಶುರುವಾಗಿದ್ದು, ಆರಂಭದ ದಿನವೇ ಸದನ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಶರ್ಟ್ ಬಿಚ್ಚಿ ಸದನದ ಬಾವಿಗಿಳಿದು ಪ್ರತಿಭಟಿಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ವರ್ತನೆಯಿಂದ ಗಲಾಟೆ ಏರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಅನುಚಿತವಾಗಿ ವರ್ತಿಸಿದ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ (BK Sangamesh) ಅವರನ್ನು 1 ವಾರಗಳ ಕಾಲ ಸದನದಿಂದ ಅಮಾನತು ಮಾಡಿದರು. ಮಧ್ಯಾಹ್ನದ ನಂತರ ಸೇರಿದ ಸದನದಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಸಿದ್ದರಾಮಯ್ಯ ಅವರು ಸಂಗಮೇಶ್ ಅವರನ್ನು ಸದನದ ಒಳಗೆ ಕರೆತಂದರು. ಇದಕ್ಕೆ ಸ್ಪೀಕರ್ ಅಸಮ್ಮತಿ ವ್ಯಕ್ತಪಡಿಸಿದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಬಳಿಕ ಸ್ಪೀಕರ್ ಅವರು ಸದನವನ್ನು 4.30ಕ್ಕೆ ಮುಂದೂಡಿದರು.
ಮಧ್ಯಾಹ್ನದ ಬಳಿಕ ಸದನ ಸೇರಿದಾಗ ಧರಣಿ ಮಾಡುವಾಗ ಈ ಸಂಗಮೇಶ್ ಏನು ಮಾಡಿದ್ರು..? ಅವರ ಅಸಭ್ಯ ವರ್ತನೆ ಯನ್ನು ನೀವು ಸಹಿಸ್ತೀರಾ ಎಂದ ಸ್ಪೀಕರ್ ಕಾಗೇರಿ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ವೇಳೆ ಏನು ಬೆತ್ತಲೆಯಾಗಿ ಇದ್ರಾ ಅವರು. ಎಷ್ಟೆಷ್ಟೋ ಜನ ಈ ಸದನದಲ್ಲಿ ಬೆತ್ತಲೆಯಾಗಿರೋದನ್ನು ನೋಡಿಲ್ವಾ..? ಹಿಂದೆ ಗೂಳಿಹಟ್ಟಿ ಶೇಖರ್ ಅಂಗಿ ಬಿಚ್ಚಿಲ್ವಾ. ಹಾಗಾದರೆ ನಮ್ಮನ್ನು ಅಮಾನತು ಮಾಡಿ ಎಂದು ಸ್ಪೀಕರ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಇದನ್ನು ಓದಿ: BK Sangamesh: ಅಧಿವೇಶನದಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ; ಕಾಂಗ್ರೆಸ್ ಶಾಸಕ ಸಂಗಮೇಶ್ ಸದನದಿಂದ ಅಮಾನತು
ಆಗ ಸ್ಪೀಕರ್, ಈಗಿನಂದು ಈಗ ಹೇಳಿ, ಅವಾಗ್ಲಿಂದ ಆಗಿದ್ದನ್ನು ಯಾಕೆ ಕೇಳ್ತಿದ್ದೀರಿ? ಅಶಿಸ್ತುನ್ನು ನೀವು ಬೆಂಬಲಿಸುವುದಾದರೆ ಹೇಳಿ ಎಂದು ಸಿದ್ದರಾಮಯ್ಯ ಮೇಲೆ ಸ್ಪೀಕರ್ ಗರಂ ಆದರು. ಆಗ ಬಿಜೆಪಿ ಸದಸ್ಯರು ಕೂಡ ಸ್ಪೀಕರ್ ಮಾತಿಗೆ ದನಿಗೂಡಿಸಿ, ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಬಾರದು ಎಂದು ಹೇಳಿದರು. ಈ ವೇಳೆ ಮತ್ತೆ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಸಂಗಮೇಶ್ ಅಮಾನತ್ತಿನ ಆದೇಶ ವಾಪಸ್ಸು ಪಡೆಯಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಮಾತಿನಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ಸದನವನ್ನು 4.30ಕ್ಕೆ ಮುಂದೂಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ