ಡಿಸಿಸಿ ಬ್ಯಾಂಕ್ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಕಾಂಗ್ರೆಸ್ ಮೇಲುಗೈ; ಅಧಿಕಾರ ಹಿಡಿಯುವತ್ತ ಬಿಜೆಪಿ ಚಿತ್ತ

ಅವಿರೋಧವಾಗಿ ಆಯ್ಕೆಯಾದ ಏಳು ಸದಸ್ಯರ ಪೈಕಿ 5 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 2  ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸದ್ಯಕ್ಕೆ ಡಿಸಿಸಿ ಬ್ಯಾಂಕ್ ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇಂದು ನಡೆಯುತ್ತಿರೋ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಕುತೂಹಲ ಉಂಟಾಗಿದೆ.

ಕಾಂಗ್ರೆಸ್

ಕಾಂಗ್ರೆಸ್

  • Share this:
ಕಲಬುರ್ಗಿ(ನ.29): ಯಾದಗಿರಿ ಡಿಸಿಸಿ ಬ್ಯಾಂಕ್ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಶತಾಯ - ಗತಾಯ ಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಆದರೆ ಈಗಾಗಲೇ ಅವಿರೋಧವಾಗಿ ಆಯ್ಕೆಯಾದ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್ ಐದರಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡು ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಹೀಗಾಗಿ ಬಿಜೆಪಿ ಉಳಿದ ಆರು ಸ್ಥಾನಗಳ ಹಾಗೂ ನಾಮ ನಿರ್ದೇಶಿತ ಸದಸ್ಯರ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಯಾದಗಿರಿ ಡಿಸಿಸಿ ಬ್ಯಾಂಕ್ ಗೆ ಇಂದು ಚನಾವಣೆ ನಡೆದಿದೆ. ಡಿಸಿಸಿ ಬ್ಯಾಂಕ್ ಕಲಬುರ್ಗಿಯ ಜಗತ್ ವೃತ್ತದಲ್ಲಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಚುನಾವಣೆ ನಡೆಯುತ್ತಿದೆ. 13 ಸ್ಥಾನಗಳ ಪೈಕಿ ಈಗಾಗಲೇ ಏಳು ಸ್ಥಾನಗಳ ಅವಿರೋಧ ಆಯ್ಕೆಯಾಗಿದ್ದು, ಆರು ಸ್ಥಾನಗಳಿಗೆ ಮತದಾನ ನಡೆದಿದೆ. ಆರು ಸ್ಥಾನಗಳಿಗೆ 12 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಜೇವರ್ಗಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಕೇದಾರಲಿಂಗಯ್ಯ ಹಿರೇಮಠ, ನಿಂಗಣ್ಣ ದೊಡ್ಮನಿ ಪೈಪೋಟಿ ನಡೆಸಿದ್ದಾರೆ. ಚಿಂಚೋಳಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಗೌತಮ್ ಪಾಟೀಲ, ಶೈಲೇಶ್ ಹುಲಿ ಸ್ಪರ್ಧಿಸಿದ್ದಾರೆ. ಚಿತ್ತಾಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಭೀಮರೆಡ್ಡಿ ಕುರಾಳ ಮತ್ತು ಬಸವರಾಜ ಪಾಟೀಲ, ಶಹಾಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಸಿದ್ಧರಾಮರೆಡ್ಡಿ ಪಾಟೀಲ ಹಾಗೂ ಗುರುನಾಥರೆಡ್ಡಿ ಅಖಾಡದಲ್ಲಿದ್ದಾರೆ.

ಟಿಎಪಿಸಿಎಂಎಸ್ ಹಾಗೂ ಸಂಸ್ಕರಣಾ ಸಹಕಾರ ಸಂಘದಿಂದ ಶಿವಾನಂದ ಮಾನಕರ್ ಮತ್ತು ಶಿವಮಾಂತಪ್ಪ ಸಾಹು ಹಾಗೂ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸೋಮಶೇಖರ ಗೋನಾಯಕ್ ಹಾಗೂ ಸಾವಿತ್ರಿ ಕುಳಗೇರಿ ಸ್ಪರ್ಧೆ ಮಾಡಿದ್ದಾರೆ. ಈಗಾಗಲೇ ಏಳು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ.

Petrol Price: ಕಳೆದ 3 ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ನಿರಂತರ ಏರಿಕೆ; ಇಂದಿನ ದರವೆಷ್ಟು ಗೊತ್ತೇ?

ಕಲಬುರ್ಗಿ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಶರಣಬಸಪ್ಪ ಪಾಟೀಲ ಅಷ್ಟಗಾ, ಆಳಂದ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಅಶೋಕ ಸಾವಳೇಶ್ವರ್, ಯಾದಗಿರಿ ತಾಲೂಕು ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಸಿದ್ಧರಾಮರೆಡ್ಡಿ ಕೌಳೂರ, ಸೇಡಂ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಬಿ.ನಂದಕಿಶೋರ ರೆಡ್ಡಿ ಜನಾರ್ಧನರೆಡ್ಡಿ, ಸುರಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಹಾಲಿ ನಿರ್ದೇಶಕ ಬಾಪುಗೌಡ ದುಂಡಪ್ಪಗೌಡ ಮತ್ತು ಅಫಜಲಪುರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಸಂಘದಿಂದ ಮಹಾಂತಗೌಡ ಸಿದ್ಧನಗೌಡ ಪಾಟೀಲ ಹಾಗೂ ಇತರೆ ಸಹಕಾರಿ ಸಂಘಗಳ ಕ್ಷೇತ್ರದಿಂದ ಸುರೇಶ್ ಸಜ್ಜನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದ ಏಳು ಸದಸ್ಯರ ಪೈಕಿ 5 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 2  ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸದ್ಯಕ್ಕೆ ಡಿಸಿಸಿ ಬ್ಯಾಂಕ್ ನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇಂದು ನಡೆಯುತ್ತಿರೋ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಕುತೂಹಲ ಉಂಟಾಗಿದೆ.

ಆರು ಸ್ಥಾನಗಳ ಪೈಕಿ ಕಾಂಗ್ರೆಸ್ ನಾಲ್ಕು ಸ್ಥಾನ ಗಳಿಸಿದಲ್ಲಿ ಅಧಿಕಾರ ಗದ್ದುಗೆ ನಿಶ್ಚಿತವಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿನ ಲೆಕ್ಕಾಚಾರಕ್ಕೆ ಜೆಡಿಎಸ್ ಅಭ್ಯರ್ಥಿಗಳು ಅಡ್ಡಗಾಲಾಗೋ ಸಾಧ್ಯತೆಗಳಿವೆ. ಚುನಾವಣೆಯಲ್ಲಿ ಬಹುಮತ ಸಾಧಿಸಲಾಗದೇ ಇದ್ದಲ್ಲಿ ಮೂವರು ನಾಮ ನಿರ್ದೇಶಿತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಗದ್ದುಗೆ ಹಿಡಿಯಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಶತಾಯ, ಗತಾಯ ಅಧಿಕಾರಕ್ಕೆ ಬರಬೇಕೆಂದು ಬಿಜೆಪಿ ಪ್ರಯತ್ನ ನಡೆಸಿದ್ದು, ರಾತ್ರಿ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಗಳಿವೆ.
Published by:Latha CG
First published: