ಬೆಂಗಳೂರು (ಮಾ. 24): ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಣ್ಣ ಅವರೆಲ್ಲಾ ಸತ್ಯ ಹರಿಶ್ಚಂದ್ರರು. ರಮೇಶ್ ಕುಮಾರ್ ಕೂಡ ಸತ್ಯ ಹರಿಶ್ಚಂದ್ರರಿದ್ದಾರೆ. ಇವರೆಲ್ಲರೂ ಏಕಪತ್ನಿ ವ್ರತವನ್ನ ಬಹಳ ಮಾಡುತ್ತಿದ್ದಾರೆ. ಎಲ್ಲಾ 224 ಶಾಸಕರದ್ದು ತನಿಖೆ ಆಗಲಿ ಎಂಬ ನನ್ನ ಪ್ರಸ್ತಾಪವನ್ನು ಇವರು ಒಪ್ಪಿಕೊಳ್ಳಲಿ ಎಂಬ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಶಾಸಕರು ವಿಧಾನಸಭಾ ಸಭಾಪತಿಗಳಾ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಸಚಿವರು ಸದನದ ನಡೆಯುವಾಗ ಹೇಳಿಕೆ ಕೊಟ್ಟಿದ್ದಾರೆ. ಹಾಗಾಗಿ ಇದು ಸದನದ ನಿಂದನೆಯಾಗುತ್ತದೆ. ಕುಟುಂಬಗಳಲ್ಲಿ ಅನುಮಾನಕ್ಕೆ ಕಾರಣವಾಗುತ್ತೆ . ಹೀಗಾಗಿ ವಿಶೇಷ ತನಿಖೆಗೆ ವಹಿಸಬೇಕೆಂದು ಎಂದು ಕಾಂಗ್ರೆಸ್ ಶಾಸಕರು ಮನವಿ ಮಾಡಿದ್ದಾರೆ.
ಡಾ.ಸುಧಾಕರ್ ಅವರು ಸಾಮಾನ್ಯ ವ್ಯಕ್ತಿಯಲ್ಲ. ರಾಜ್ಯದ ಗೌರವಾನ್ವಿತ ಸಚಿವರಾಗಿರುವವರು. ಅವರ ಹೇಳಿಕೆ ಗಂಭೀರ ಸ್ವರೂಪದ್ದಾಗಿದೆ. ಎಲ್ಲಾ ಶಾಸಕರ ನೈತಿಕತೆಯನ್ನು ಪ್ರಶ್ನಿಸುವಂಥದ್ದಾಗಿದೆ. ಸದನ ನಡೆಯುತ್ತಿರುವಾಗ ಸಚಿವರು ಮಾಡಿರುವ ಈ ಹೇಳಿಕೆ ಸದನದ ನಿಂದನೆಯಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಆಯಾ ಶಾಸಕರ ಕುಟುಂಬದ ಸದಸ್ಯರಲ್ಲಿ ಅನುಮಾನ ಮೂಡಲು ಆಸ್ಪದ ಮಾಡಿಕೊಟ್ಟಿದೆ.
ಇದನ್ನು ಓದಿ: ತಪ್ಪಿತಸ್ಥ ಭಾವನೆಯಿಂದ ಸುಧಾಕರ್ ಹೇಳಿಕೆ ನೀಡಿದ್ದಾರೆ; ಸಿದ್ದರಾಮಯ್ಯ
ಈ ಎಲ್ಲಾ ಕಾರಣಗಳಿಂದ ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷವು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಹಾಗೂ ಡಾ.ಸುಧಾಕರ್ ಅವರೂ ಸೇರಿದಂತೆ ಆರು ಮಂದಿ ಸಚಿವರು ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಮಾನ ಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ತನಿಖೆಗೆ ಒತ್ತಾಯಿಸಿದೆ. ಸುಧಾಕರ್ ಅವರು ಹೆಸರಿಸಿರುವವರ ಪೈಕಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಆದ ನಾವೂ ಕೂಡ ಕೋರ್ಟ್ ಉಸ್ತುವಾರಿಯ ಎಸ್.ಐ.ಟಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ.
ಇದರ ಜತೆಗೆ ಡಾ.ಸುಧಾಕರ್ ಅವರೂ ಹೇಳಿರುವಂತೆ 225 ಸದಸ್ಯರ ಪೈಕಿ ತಾವೂ ಕೂಡ ಒಬ್ಬರಾಗಿರುವುದರಿಂದ ಸದರಿ ತನಿಖೆಗೆ ಸಿದ್ಧರಿದ್ದೀರಾ ಎಂದು ತಿಳಿಯಲಿಚ್ಚಿಸುತ್ತೇವೆ. ಜತೆಗೆ ಸುಧಾಕರ್ ಅವರ ಹೇಳಿ! ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗೆ ತಕ್ಷಣವೇ ಆದೇಶ ಹೊರಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ