ಚುನಾವಣೆಗೂ ಮುನ್ನವೇ ಸಿಎಂ ಸೀಟ್​ಗೆ ಟವೆಲ್ ಹಾಕುತ್ತಿರುವ ಕೈ ನಾಯಕರು; ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದೇನು?

ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಕಾಂಗ್ರೆಸ್​ ಗೆಲ್ಲುತ್ತದೆ. ಸಿದ್ದರಾಮಯ್ಯ ನೇತೃತ್ವ ಇದ್ದರೆ 120-150 ಸೀಟು ಗೆಲ್ಲುತ್ತೇವೆ. ಹೀಗಾಗಿ ಕಾಂಗ್ರೆಸ್​ ಹೈಕಮಾಂಡ್​ ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಅಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

 • Share this:
  ಬೆಂಗಳೂರು (ಜೂನ್ 23); ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆದರೆ, ಚುನಾವಣೆಗೆ ಮುನ್ನವೇ ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಯಾರಾಗಬೇಕು? ಎಂಬ ಕುರಿತು ವಾದ-ವಿದಾದಗಳು ಚರ್ಚೆಗಳು ಶುರುವಾಗಿವೆ. ಒಂದೆಡೆ  ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಹಲವು ನಾಯಕರು ಹೇಳುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್​ ಟ್ರಬಲ್ ಶೂಟರ್​ ಡಿ.ಕೆ. ಶಿವಕುಮಾರ್​ ಬಣವೂ ಬಲವಾಗುತ್ತಿದೆ. ಅಲ್ಲದೆ, ಇತ್ತೀಚೆಗೆ ದೆಹಲಿಗೆ ತೆರಳಿ ಹೈಕಮಾಂಡ್​ ನಾಯಕರನ್ನೂ ಭೇಟಿಯಾಗಿದ್ದ ಡಿ.ಕೆ. ಶಿವಕುಮಾರ್​, ಸಿದ್ದರಾಮಯ್ಯ ಬಣದ ವಿರುದ್ಧ ದೂರನ್ನೂ ನೀಡಿದ್ದರು. ಈ ನಡುವೆ ಇಂದು ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ನವರೇ ನಮ್ಮ ಮುಂದಿನ ಸಿಎಂ ಎಂದು ಹೇಳಿರುವುದು ಮತ್ತು ಡಿ.ಕೆ. ಶಿವಕುಮಾರ್​ ವಿರುದ್ಧ ಬಹಿರಂಗವಾಗಿ ಕಿಡಿಕಾರಿರುವುದು ಇದೀಗ ಹಲವು ಕುತೂಹಲಕ್ಕೆ ಕಾರಣವಾಗಿದೆ.

  ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಶಾಸಕ ಅಖಂಡ ಶ್ರೀನಿವಾಸ್, "ಸಿದ್ದರಾಮಯ್ಯ ಅವರು ಉತ್ತಮ ಮುಖ್ಯಮಂತ್ರಿ, ರಾಜ್ಯದ ಜನತೆ ಕೂಡ ಇದನ್ನೇ ಹೇಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ. ನಾನು, ಜಮೀರ್ ಅಹ್ಮದ್ ಮಾತ್ರವಲ್ಲ ಎಲ್ಲ ಕಾಂಗ್ರೆಸ್ ಶಾಸಕರು ಇದನ್ನೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆದರೆ ರಾಜ್ಯಕ್ಕೆ ಮತ್ತು ಕಾಂಗ್ರೆಸ್​ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ನಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದವರು ಅವರೇ.

  ಡಿ.ಕೆ. ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷರು ಅವರು ಅಧ್ಯಕ್ಷರಾಗೇ ಮುಂದುವರೆಯಲಿ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಮಾತ್ರ ಕಾಂಗ್ರೆಸ್​ ಗೆಲ್ಲುತ್ತದೆ. ಸಿದ್ದರಾಮಯ್ಯ ನೇತೃತ್ವ ಇದ್ದರೆ 120-150 ಸೀಟು ಗೆಲ್ಲುತ್ತೇವೆ. ಹೀಗಾಗಿ ಕಾಂಗ್ರೆಸ್​ ಹೈಕಮಾಂಡ್​ ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು. ಹೀಗಾದಾಗ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ" ಎಂದು ಹೇಳಿರುವುದು ಇದೀಗ ಕಾಂಗ್ರೆಸ್​ನಲ್ಲಿ ಸಂಚಲನ ಮೂಡಿಸಿದೆ.

  ಇದನ್ನೂ ಓದಿ: Delta Plus Variant in India| ಮೈಸೂರಿನಲ್ಲೊಂದು ಡೆಲ್ಟಾ ಪ್ಲಸ್​ ಕೊರೋನಾ ಕೇಸ್​ ಪತ್ತೆ; ಸಚಿವ ಸುಧಾಕರ್ ಮಾಹಿತಿ

  ಇದೇ ಸಂದರ್ಭದಲ್ಲಿ ತಮ್ಮ ಮನೆಗೆ ಬೆಂಕಿ ಹಾಕಿದವರ ಬಗ್ಗೆಯೂ ಮಾತನಾಡಿರುವ ಅಖಂಡ ಶ್ರೀನಿವಾಸ್, "ನಮ್ಮ ಮನೆಗೆ ಬೆಂಕಿ ಹಚ್ಚಿದ್ದರು. ಮತ್ತೊಂದು ಮನೆಯನ್ನು ಒಡೆದು ಹಾಕಲಾಯಿತು. ಆದರೆ, ಕೆಪಿಸಿಸಿ ಅಧ್ಯಕ್ಷರು ಡಿ.ಕೆ. ಶಿವಕುಮಾರ್ ಏನು ಮಾತಾಡುತ್ತಿಲ್ಲ. ಯಾರೇ ಅಪರಾಧಿಯಾದರೂ ಶಿಕ್ಷೆಯಾಗಬೇಕು. ಪಕ್ಷದಿಂದ ಆರೋಪಿಯನ್ನು ಸಸ್ಪೆಂಡ್ ಮಾಡಬೇಕು. ಶಾಸಕರಿಗೆ ಪಕ್ಷ ನ್ಯಾಯ ಕೊಟ್ಟಿಲ್ಲ ಅಂದರೆ ಪಕ್ಷಕ್ಕೆ ಇಂತಹವರಿಂದ ಕೆಟ್ಟ ಹೆಸರು ಬರುತ್ತದೆ.

  ಇದನ್ನೂ ಓದಿ: Banglore Heli-Tourism| ಜಕ್ಕೂರು ಏರೋಡ್ರೋಮ್​ನಿಂದ ಹೆಲಿ-ಪ್ರವಾಸೋದ್ಯಮ ಆಯೋಜಿಸಲು ಅನುಮೋದನೆ!

  ಶಾಸಕನಿಗೆ ಅನ್ಯಾಯವಾಗಿದೆ ಎಂದು ಯಾರೂ ಫೋನ್ ಮಾಡಿ ಕೇಳಿಲ್ಲ. ಡಿಕೆಶಿ ಒಮ್ಮೆಯೂ ಕರೆ ಮಾಡಿ ಮಾತಾಡಲಿಲ್ಲ. ಮನೆ ಕಳೆದುಕೊಂಡು ಬೀದಿಯಲ್ಲಿ ಇರುವ ಸ್ಥಿತಿ ಬಂದಿದೆ. ಇಡೀ ಕುಟುಂಬ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದೆ. ಆದರೆ, ಪಕ್ಷದ ಅಧ್ಯಕ್ಷರಿಗೆ ನಮ್ಮ ಧ್ವನಿ ಕೇಳಿಸುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: