ಕಲಬುರ್ಗಿ (ಡಿಸೆಂಬರ್.31): ಕಲಬುರ್ಗಿ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆ ಎನಿಸಿಕೊಂಡಿತ್ತು. ಸ್ಥಳೀಯ ಸಂಸ್ಥೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಇದು ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ ಘಟಾನುಘಟಿ ನಾಯಕರೆನಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ತವರು ಜಿಲ್ಲೆ ಎನಿಸಿಕೊಂಡ ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಉತ್ತಮ ಫಲಿತಾಂಶ ಬಂದಿದ್ದು, ಕಾರ್ಯಕರ್ತರ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಿನ್ನೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದ್ದ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಮುಕ್ತಾಯಗೊಂಡಿದೆ. ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ತವರು ಕಲಬುರ್ಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಅಧಿಕವಿದ್ದರೂ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ.
ಜಿಲ್ಲೆಯ 11 ತಾಲೂಕುಗಳ 242 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಸುಮಾರು 130 ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಸಾಧಿಸಿದ್ದರೆ, ಸುಮಾರು 112 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಸಾಧಿಸಿದ್ದಾರೆ. ಜೆಡಿಎಸ್ ಜಿಲ್ಲೆಯಲ್ಲಿ ಕೆಲವೇ ಬೆರಳೆಣಿಕೆಯಷ್ಟು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 4188 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ 383 ಸದಸ್ಯರ ಅವಿರೋಧ ಆಯ್ಕೆಯಾಗಿತ್ತು. ಉಳಿದ 3805 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 10,190 ಅಭ್ಯರ್ಥಿಗಳು ಅಖಾಡದಲ್ಲಿದ್ದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ 2080 ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತ 1960 ಅಭ್ಯರ್ಥಿಗಳು, ಜೆಡಿಎಸ್ ಬೆಂಬಲಿತ 45 ಅಭ್ಯರ್ಥಿಗಳು ಹಾಗೂ ಇತರೆ ಬೆಂಬಲಿತ 103 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರ ರಾಜೀನಾಮೆಗೆ ಆಗ್ರಹ :
ಕಲಬುರ್ಗಿ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಶೇ.70 ರಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ 1 ಕೋಟಿ ಅನುದಾನದ ಭರವಸೆ ನೀಡಿದ್ರೂ ಬಿಜೆಪಿಗೆ ಸೋಲಾಗಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ರೇವೂರ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕಲಬುರ್ಗಿಯಲ್ಲಿ ಜಂಟಿಯಾಗಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಮತ್ತು ಮಾಜಿ ಎಂ.ಎಲ್.ಸಿ. ಅಲ್ಲಮಪ್ರಭು ಪಾಟೀಲ, ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಗ್ರಾ.ಪಂ. ಚುನಾವಣೆ ಸಂದರ್ಭದಲ್ಲಿ ಅವಿರೋಧ ಆಯ್ಕೆಯಾಗುವ ಗ್ರಾ.ಪಂ. ಗಳಿಗೆ 1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಭರವಸೆ ನೀಡಿದ್ದರು.
ಆದರೂ ಗ್ರಾಮೀಣ ಪ್ರದೇಶದ ಜನರ ಮೇಲೆ ಬಿಜೆಪಿ ನಾಯಕರ ಪ್ರಭಾವ ಬೀರಲು ಆಗಿಲ್ಲ. 1 ಕೋಟಿ ರೂಪಾಯಿ ಭರವಸೆ ನೀಡಿ ನೀತಿ ಸಂಹಿತೆ ಉಲ್ಲಂಘಿಸಿರುವ ಕುರಿತು ಕಾಂಗ್ರೆಸ್ ಪಕ್ಷ ದೂರು ನೀಡಿತ್ತು. ದೂರನ್ನು ಆಧರಿಸಿ ರೇವೂರ ವಿರುದ್ಧ ಜಿಲ್ಲಾಡಳಿತ ಎಫ್.ಐ.ಆರ್. ದಾಖಲಿಸಿದೆ. ಕೂಡಲೇ ಕೆ.ಕೆ.ಆರ್.ಡಿ.ಬಿ. ಸ್ಥಾನಕ್ಕೆ ರೇವೂರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :
ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳುಹಿಸಿ: ಸಚಿವ ಸುರೇಶ್ ಕುಮಾರ್ ಮನವಿ
ಹೈದರಾಬಾದ್ ಕರ್ನಾಟಕದಲ್ಲಿ 371(ಜೆ) ಜಾರಿಯಾದ ನಂತರ ಹೊಸ ಹೊಸ ಕಛೇರಿಗಳನ್ನು ತರೋ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಇರುವ ಕಛೇರಿಗಳನ್ನೇ ಸ್ಥಳಾಂತರಿಸುವ ಪಿತೂರಿ ನಡೆದಿದೆ. ಕಲಬುರ್ಗಿಯಿಂದ ಸ್ಥಳಾಂತರಗೊಂಡ ಕಛೇರಿಗಳನ್ನು ವಾಪಸ್ ತರಿಸಬೇಕು.
ನವೀಕರಿಸಬಹುದಾದ ಇಂದನ ಪ್ರಾದೇಶಿಕ ಕಛೇರಿ ಹಾಗೂ ವಿಭಾಗೀಯ ಆಹಾರ ಪ್ರಯೋಗಾಲಯಗಳನ್ನು ಇಲ್ಲಿಯೇ ಮುಂದುವರಿಸಬೇಕು. ರೇವೂರ ಅಧ್ಯಕ್ಷರಾದ ನಂತರವೇ ಕಛೇರಿಗಳು ಸ್ಥಳಾಂತರಗೊಂಡಿದ್ದು, ಉತ್ಸವ ಮೂರ್ತಿ ರೀತಿಯಲ್ಲಿ ಅಲ್ಲಿ ಕೂಡದೇ ಕೂಡಲೇ ಕೆಳಗಿಳಿದು ಬರಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ