ಬೆಂಗಳೂರು: ರಾಜ್ಯ ಬಿಜೆಪಿ ಪಕ್ಷದ (Karnataka BJP) ನಾಯಕರು ಚುನಾವಣಾ ಅಕ್ರಮ ಎಸಗಿದ್ದಾರೆ. ಅವರು ಪ್ರತೀ ಕ್ಷೇತ್ರಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮತದಾರರಿಗೆ ನೀಡಲು ಮತ್ತು ಅಕ್ರಮ ಎಸಗಲು ಹಣ ಸಂಗ್ರಹಿಸಿ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, (Congress Leader) ಮಾಜಿ ಸಂಸದ ವಿಎಸ್ ಉಗ್ರಪ್ಪ (VS Ugrappa) ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ, ಬಿಜೆಪಿಯವರು ಚುನಾವಣಾ ಅಕ್ರಮ ಎಸಗಿದ್ದಾರೆ. ಬಿಜೆಪಿಯ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ಪ್ರತೀ ಮತದಾರರಿಗೆ 6 ಸಾವಿರ ಕೊಡ್ತೇವೆ ಎಂದು ಬಹಿರಂಗವಾಗಿ ಹೇಳಿ, ಹಣ ಕೊಟ್ಟು ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದ್ದಾರೆ. ಯಾರು ಎಷ್ಟು ಖರ್ಚು ಮಾಡ್ತಾರೋ, ಅದರ ಎರಡು ಪಟ್ಟು ಖರ್ಚು ಮಾಡ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಜೆಪಿ ನಡ್ಡಾ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಸಹಮತವಿದೆ ಎಂದು ಉಗ್ರಪ್ಪ ಆರೋಪಿಸಿದ್ದಾರೆ.
'ಬಿಜೆಪಿಯವರು ಹಣ ಸಂಗ್ರಹಿಸಿದ್ದಾರೆ'
ಈ ಕೃತ್ಯದ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಪೊಲೀಸ್‌ನವರು ಸಹ ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿರುವ ವಿಎಸ್ ಉಗ್ರಪ್ಪ, ಫ್ರೀ ಅಂಡ್ ಫೇರ್ ಎಲೆಕ್ಷನ್ ಆಗಬೇಕು. ಸುಮಾರು ಐದು ಕೋಟಿ ಮತದಾರರು ಇದ್ದಾರೆ. ಹೀಗಾಗಿ ಒಟ್ಟು ಮೂವತ್ತು ಸಾವಿರ ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಅವರು ಹಣ ಸಂಗ್ರಹಿಸಿ ಇಟ್ಟಿದ್ದಾರೆ ಎಂದರು.
ಇದನ್ನೂ ಓದಿ:V S Ugrappa: ರಾಮ ಮರ್ಯಾದ ಪುರುಷೋತ್ತಮ ಅನ್ನೋ ಮೋದಿ ಹಿಂಗ್ಯಾಕ್ ಮಾಡಿದ್ರು? ಉಗ್ರಪ್ಪ ಖಡಕ್ ಪ್ರಶ್ನೆ
ಈ ಬಗ್ಗೆ ಮೊನ್ನೆ ಡಿಕೆಶಿ, ಸಿದ್ದರಾಮಯ್ಯ, ನಾನು ಸೇರಿ ದೂರು ಕೊಟ್ಟಿದ್ದೇವೆ. ಆದರೆ ಈವರೆಗೂ ಎಫ್‌ಐಆರ್ ಆಗಿಲ್ಲ. ಪೊಲೀಸರ ಮೇಲೆ ಸಿಎಂ ಹಾಗೂ ಬಿಜೆಪಿ ನಾಯಕರು ಪ್ರಭಾವ ಬೀರಿದ್ದಾರೆ ಎಂದು ಕಾಣುತ್ತದೆ. ದೂರು ದಾಖಲಾದ ತಕ್ಷಣ ತನಿಖೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ಜಡ್ಜ್ ನಿರ್ದೇಶನಗಳಿವೆ. ಆದರೂ ಎಫ್‌ಐಆರ್ ಆಗಿಲ್ಲ. ವಿಪಕ್ಷದವರು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಆದರೂ ಕೇಸ್ ದಾಖಲು ಆಗದೆ ಇರೋದು ನೋಡ್ರಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದು ಗೊತ್ತಾಗುತ್ತದೆ. ಈ ಬಗ್ಗೆ ಕೂಡಲೇ ಎಫ್ಐಆರ್ ಮಾಡಿ ತನಿಖೆ ಮಾಡಿಸಬೇಕು. ಸಿಎಂ ಹಾಗೂ ಗೃಹ ಸಚಿವರಿಗೆ ನಾನು ಒತ್ತಾಯ ಮಾಡ್ತೇನೆ ಎಂದು ಹೇಳಿದರು.
'ಕುಕ್ಕರ್ ನೀಡೋದು ತಪ್ಪು'
ಇನ್ನು ಕುಕ್ಕರ್ ನೀಡೋದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿದ ವಿಎಸ್ ಉಗ್ರಪ್ಪ ಅವರು, ಇಲ್ಲಿಯವರೆಗೆ ನಾವು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಮತದಾರರಿಗೆ ಆಮಿಷ ಒಡ್ಡಿಲ್ಲ. ದುಡ್ಡು ಹಂಚಿಕೆ ಮಾಡಿದ್ರೆ ದೂರು ದಾಖಲಾಗಬೇಕಿತ್ತು. ಆದ್ರೆ ಇಲ್ಲಿಯವರೆಗೆ ದೂರು ದಾಖಲಾಗಿಲ್ಲ. ಕಾಂಗ್ರೆಸ್ ಸಂವಿಧಾನ ಕೊಟ್ಟ ಪಕ್ಷ. ನಾವು ಸಂವಿಧಾನವನ್ನು ಗೌರವಿಸುತ್ತೇವೆ ಎಂದು ಹೇಳಿದರು.
ಇನ್ನು ಎಂಎಲ್ಸಿ ಯೋಗೇಶ್ವರ್ ಆಡಿಯೋದಲ್ಲಿ ರೌಡಿ ಸಂಸ್ಕೃತಿ ಅಂತ ಉಲ್ಲೇಖ ಮಾಡಿದ್ದಾರೆ. ನಮ್ಮ ದೂರಿನ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡೋಕೆ ಬಿಡಬೇಕು ಎಂದ ಉಗ್ರಪ್ಪ, ನಾಡಿದ್ದು ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಬಿಜೆಪಿಗೆ ಪ್ರಜಾಪ್ರಭುತ್ವ ನಂಬಿಕೆ ಇಲ್ಲ. ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಬೇಕು. ಚುನಾವಣಾ ಅಕ್ರಮಗಳ ಮೂಲಕ ಅಧಿಕಾರ ಹಿಡಿಯಬೇಕು. ಪ್ರಧಾನಿ ನರೇಂದ್ರ ಮೋದಿ, ಅಮಿಶ್ ಶಾ ಅವರಿಂದ ಒತ್ತಡ ಹಾಕಿ ಕೇಸ್ ಮುಚ್ಚಿ ಹಾಕುತ್ತಾರೆ ಎಂದು ವಿಎಸ್ ಉಗ್ರಪ್ಪ ಆರೋಪ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ