news18-kannada Updated:October 29, 2020, 12:45 PM IST
ಸಿದ್ದರಾಮಯ್ಯ
ಬೆಂಗಳೂರು (ಅ. 29): ನಮ್ಮ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯದ ಜನಪ್ರತಿನಿಧಿಗಳಾದ ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧ್ವನಿಯೆತ್ತಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ಬಿಜೆಪಿ ಸಂಸದರನ್ನೂ ಕುಟುಕಿರುವ ಸಿದ್ದರಾಮಯ್ಯ, ನಾವು ಕರ್ನಾಟಕದಿಂದ ಆಯ್ಕೆಯಾಗಿ ಬಂದ ಶಾಸಕರು, ಸಂಸದರು ಈ ಬಗ್ಗೆ ಧ್ವನಿಯೆತ್ತಬೇಕು. ನಮ್ಮ ರಾಜ್ಯದ ಜನ ಭೀಕರ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಪರಿಹಾರ ಬಿಡುಗಡೆ ಮಾಡಿ ಎಂದು ಪ್ರಧಾನಿಗಳ ಮುಂದೆ ಕಟುವಾಗಿಯೇ ಧ್ವನಿಯೆತ್ತಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರದ ಮೂಲಕ ಸಿಎಂ ಯಡಿಯೂರಪ್ಪ, ಬಿಜೆಪಿ ಸಂಸದರನ್ನು ಕುಟುಕಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ 23 ಜಿಲ್ಲೆಗಳಲ್ಲಿ ಮಳೆಯಾಗಿದೆ. 4.60 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. 13,573 ಮನೆಗಳು ಹಾನಿಯಾಗಿವೆ. 30,455 ಕಿ.ಮೀ ರಸ್ತೆಗಳು ಹಾನಿಯಾಗಿವೆ. 5080 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. 3,481 ಸೇತುವೆಗಳಿಗೆ ಹಾನಿಯಾಗಿದೆ. 8.68 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ನಾಶವಾಗಿವೆ. ಒಟ್ಟು 11 ಹೆಕ್ಟೇರ್ ಬೆಳೆ ನಾಶವಾಗಿದೆ. ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಸಂಕಷ್ಟಕ್ಕೊಳಗಾಗಿದೆ. ಆದರೆ ಇಲ್ಲಿಯವರೆಗೆ ಪರಿಹಾರವೇ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 35 ಸಾವಿರ ಕೋಟಿ ನೆರವು ಬರಬೇಕಿತ್ತು. ಆದರೆ ಇಲ್ಲಿಯವರೆಗೆ ಬಂದಿದ್ದು 1882 ಕೋಟಿ ರೂ. ಮಾತ್ರ. ಉಳಿದ ಬಾಕಿ ಇನ್ನೂ ಬಂದಿಲ್ಲ. ಜಿಎಸ್ಟಿ ಬಾಕಿಯೂ ರಾಜ್ಯಕ್ಕೆ ನೀಡಿಲ್ಲ. ಈಗಿನ ದುಪ್ಪಟ್ಟು ನಷ್ಟಕ್ಕೆ ಪರಿಹಾರ ಯಾವಾಗ? 25 ಸಂಸದರು ಇದ್ದೀರಿ, ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತನ್ನಿ ಎಂದು ಸಿಎಂಗೆ ಬರೆದ ಪತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Published by:
Sushma Chakre
First published:
October 29, 2020, 12:45 PM IST