HOME » NEWS » State » CONGRESS LEADER SIDDARAMAIAH STATEMENT ON KURUBA RESERVATION IN CHIKMAGALUR VCTV SCT

ಕುರುಬರನ್ನು ಎಸ್​ಟಿಗೆ ಸೇರಿಸಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ; ಸಿದ್ದರಾಮಯ್ಯ ಸ್ಪಷ್ಟನೆ

ಕುರುಬರನ್ನು ಎಸ್​ಟಿಗೆ ಸೇರಿಸಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ಕುರುಬರನ್ನು ಎಸ್ಟಿಗೆ ಸೇರಿಸಬೇಡಿ ಎಂದು ನಾನೆಂದೂ ವಿರೋಧ ಮಾಡಿಲ್ಲ. ಸಿದ್ದರಾಮಯ್ಯಂಗೆ ಕುರುಬರಿಗೆ ಎಸ್ಟಿ ಗೆ ಸೇರಿಸುವುದು ಇಷ್ಟ ಇಲ್ಲ ಎಂದು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

news18-kannada
Updated:January 8, 2021, 7:54 AM IST
ಕುರುಬರನ್ನು ಎಸ್​ಟಿಗೆ ಸೇರಿಸಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ; ಸಿದ್ದರಾಮಯ್ಯ ಸ್ಪಷ್ಟನೆ
ಸಿದ್ದರಾಮಯ್ಯ.
  • Share this:
ಚಿಕ್ಕಮಗಳೂರು (ಜ. 8): ಬಿಜೆಪಿಯವರು ನನ್ನ ಮೇಲೆ ಬೀಳುತ್ತಾರೆ, ಜೆಡಿಎಸ್‍ನವರು ಕೂಡ ನನ್ನ ಮೇಲೆ ಬೀಳುತ್ತಾರೆ. ಇವರೆಲ್ಲರಿಗೂ ಟೀಕೆ ಮಾಡೋದಕ್ಕೆ ನಾನೊಬ್ಬನೇ ಸಿಕ್ಕಿರೋದು. ನನ್ನ ರಕ್ಷಣೆಗೆ ಯಾರೂ ಬರುವುದಿಲ್ಲ. ನನ್ನ ರಕ್ಷಣೆ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರ ಬಳಿ ರಕ್ಷಣೆ ಕೋರಿದ್ದಾರೆ. ನಾನು ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ ಎಂದು ನನ್ನ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಾರೆ. ಒಂದುವೇಳೆ ಕುರುಬರನ್ನು ಎಸ್​ಟಿಗೆ ಸೇರಿಸಿದರೆ ನನ್ನಷ್ಟು ಖುಷಿ ಪಡುವವರು ಯಾರೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಚೌಳಹಿರಿಯೂರು ಗ್ರಾಮದಲ್ಲಿ 533 ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಎಂದಿನಂತೆ ತಮ್ಮ ವಿಶಿಷ್ಟ ಹಾವ-ಭಾವದ ಮೂಲಕ ಮಾತಿನಲ್ಲಿ ಜನರನ್ನು ರಂಜಿಸಿದರು. ನಾವು ಗುರುಪೀಠ ಮಾಡಿ, ಅಹಿಂದ ಪರ ಹೋರಾಟ ಮಾಡಿದವರು. ಎಲ್ಲರಿಗೂ ನ್ಯಾಯ ಸಿಗಬೇಕು. ಕುರುಬರನ್ನು ಎಸ್ಟಿಗೆ ಸೇರಿಸಬೇಡಿ ಎಂದು ನಾನು ಯಾವತ್ತು ವಿರೋಧ ಮಾಡಿಲ್ಲ. ಸಿದ್ದರಾಮಯ್ಯಂಗೆ ಕುರುಬರಿಗೆ ಎಸ್ಟಿ ಗೆ ಸೇರಿಸುವುದು ಇಷ್ಟ ಇಲ್ಲ ಎಂದು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಾನು ಸ್ವಲ್ಪ ಒರಟ. ಹಳ್ಳಿ ಭಾಷೆಯಲ್ಲಿ ಏನೇನೋ ಹೇಳಿ ಬಿಡುತ್ತೇನೆ. ಅದಕ್ಕೆ ನನ್ನ ಬಗ್ಗೆ ಟೀಕೆ ಮಾಡಿದ್ದೇ ಮಾಡಿದ್ದು. ಈ ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆ ಅಂತ ಕಾಯ್ದೆ ತಂದಿದ್ದಾರೆ. ನಾನು ಇಲ್ಲಿಯವರೆಗೆ ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿಂತೀನಿ. ನೀನ್ ಯಾವನಯ್ಯ ನನಗೆ ಕೇಳಕ್ಕೆ? ಅಂದೆ. ಅದಕ್ಕೆ ನನ್ನ ಮೇಲೆ ದೊಡ್ಡ ವ್ಯಾಖ್ಯಾನಗಳು, ಟೀಕೆಗಳು, ಚರ್ಚೆಗಳು ನಡೆದುಬಿಟ್ಟವು. ಸಾಮಾಜಿಕ ಜಾಲತಾಣದಲ್ಲೂ ನನ್ನ ವಿರುದ್ಧವೇ ಟೀಕೆಗಳು ನಡೆಯಿತು ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Covid Vaccine - ಬೆಂಗಳೂರಿನ 8 ಕಡೆ ಸೇರಿದಂತೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಕ್ಸಿನ್ ಡ್ರೈ ರನ್

ನಮ್ಮೂರಿಗೆ ಓಟ್ ಹಾಕೋಕೆ ಹೋಗಿದ್ದೆ. ನನ್ನ ಓಟು ನಮ್ಮೂರಲ್ಲಿದೆ. ನಮ್ಮ ಪಾರ್ಟಿಯವನು ಊಟಕ್ಕೆ ಕರೆದುಕೊಂಡು ಹೋದ. ಅವನು ಕೋಳಿ ಮಾಡಿದ್ದ. ಅವತ್ತು ಹನುಮ ಜಯಂತಿ. ನಮ್ಮ ಹುಡುಗ ನಾನು ಮಾಂಸ ತಿನ್ನುವುದಿಲ್ಲ ಅಣ್ಣ ಇವತ್ತು ಹನುಮ ಜಯಂತಿ ಅಂದ. ಹನುಮ ಹುಟ್ಟಿದ್ದು ಯಾರಿಗೆ ಗೊತ್ತು? ತಾರೀಕು ಕೂಡ ಗೊತ್ತಿಲ್ಲ ನಮಗೆ. ಹನುಮ ಜಯಂತಿ ದಿನ ಮರಿ ಹೊಡೆಯುತ್ತಾರೆ. ಮಾಂಸ ತಿಂದರೆ ಏನಪ್ಪ? ಹನುಮ ಜಯಂತಿ ದಿನಾಂಕವೂ ನನಗೆ ಗೊತ್ತಿಲ್ಲ ಅಂದೆ ಅದು ತಪ್ಪಾ? ಹನುಮಂತ ಯಾವತ್ತು ಹುಟ್ಟಿದ್ದ ಅಂತ ನಿಮಗೆ ಗೊತ್ತೇನ್ರಿ? ಅದಕ್ಕೂ ಟೀಕೆ ನಡೆಯಿತು ನನ್ನ ಮೇಲೆ. ಎಲ್ಲರಿಗೂ ನಾನೊಬ್ಬನೇ ಸಿಕ್ಕಿರೋದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕುರುಬರನ್ನು ಎಸ್​ಟಿಗೆ ಸೇರಿಸಿದರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ. ನನಗೆ ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಕುರುಬರನ್ನು ಎಸ್ಟಿಗೆ ಸೇರಿಸಲು ನನ್ನ ವಿರೋಧವಿಲ್ಲ. ಆದರೆ, ಈಗ ಇವರು ಮಾಡುತ್ತಿರುವ ಹೋರಾಟ, ಪಾದಯಾತ್ರೆ ಅದರ ಅಗತ್ಯವಿಲ್ಲ. ಇನ್ನೂ ಕೂಡ ಕುಲಶಾಸ್ತ್ರ ಅಧ್ಯಯನದ ವರದಿ ಬಂದಿಲ್ಲ. ಈಗಾಗಲೇ ನಾಲ್ಕು ಜಿಲ್ಲೆಗಳದ್ದು ಕಳಿಸಿದ್ದೇವೆ. ಅದೇ ಇನ್ನೂ ಆಗಿಲ್ಲ. ಅದರ ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಟ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Published by: Sushma Chakre
First published: January 8, 2021, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories