ಕರ್ನಾಟಕದ ಗಡಿ ವಿಚಾರದಲ್ಲಿ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ; ಉದ್ಧವ್ ಠಾಕ್ರೆಗೆ ಸಿದ್ದರಾಮಯ್ಯ ಎಚ್ಚರಿಕೆ

Belagavi Dispute: ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಬೆಳಗಾವಿ ಎಂದಿಗೂ ನಮ್ಮದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

 • Share this:
  ಬೆಂಗಳೂರು (ಜ. 18): ಮರಾಠಿ ಭಾಷಿಗರು ಹೆಚ್ಚಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಗಡಿ ಪ್ರದೇಶಗಳನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಈ ವಿಚಾರದಲ್ಲಿ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಮಹಾರಾಷ್ಟ್ರದ ಗಡಿಯಲ್ಲಿರುವ ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ವಾಪಾಸ್ ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಹೋರಾಡುತ್ತೇವೆ ಎಂದು ನಿನ್ನೆ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದರು. ಇದಕ್ಕೆ ಈಗಾಗಲೇ ತಿರುಗೇಟು ನೀಡಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗಡಿ ವಿಚಾರದಲ್ಲಿ ಉದ್ಧಟತನದ ಹೇಳಿಕೆ ನೀಡಬೇಡಿ. ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಇರುವ ಕನ್ನಡಿಗರು ಮತ್ತು ಮರಾಠಿಗರ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಎಚ್ಚರಿಸಿದ್ದಾರೆ. ಇದರ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಕಿಡಿ ಕಾರಿದ್ದಾರೆ.

  ಮತ್ತೆ ಗಡಿ ತಗಾದೆ ತೆಗೆದಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗಾವಿ ಗಡಿಯ ಬಗ್ಗೆ ಮಹಾಜನ ವರದಿಯೇ ಅಂತಿಮ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಿ ರಾಜಕೀಯ ಮಾಡಲು ಹೋಗಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ಬೆಳಗಾವಿ ಎಂದಿಗೂ ನಮ್ಮದು ಎಂದು ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.  ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.  ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಅದೇರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಗಳೇ ಮಾಡುತ್ತಿರುವುದು ನೋವಿನ ಸಂಗತಿ. ನೀವು ಓರ್ವ ಭಾರತೀಯನಾಗಿ ಯೋಚಿಸಿ, ಒಕ್ಕೂಟ ತತ್ವವನ್ನು ಗೌರವಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
  Published by:Sushma Chakre
  First published: