HOME » NEWS » State » CONGRESS LEADER SIDDARAMAIAH LASHES OUT AT CM BS YEDIYURAPPA AND BJP OVER COVID 19 DEATHS IN KARNATAKA SCT

Siddaramaiah: ಸಾವಿರಾರು ಜನ ಕೊರೋನಾದಿಂದ ಸಾಯಲು ಯಡಿಯೂರಪ್ಪನೇ ಕಾರಣ; ಸಿದ್ದರಾಮಯ್ಯ ಆಕ್ರೋಶ

Karnataka Politics: ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆದರೆಂಬುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಇದು ನಾನು ಹೇಳೋದಲ್ಲ, ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

news18-kannada
Updated:June 21, 2021, 3:43 PM IST
Siddaramaiah: ಸಾವಿರಾರು ಜನ ಕೊರೋನಾದಿಂದ ಸಾಯಲು ಯಡಿಯೂರಪ್ಪನೇ ಕಾರಣ; ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ - ಬಿಎಸ್​ವೈ
  • Share this:
ಕೊಪ್ಪಳ (ಜೂನ್ 21): ಕೊರೊನಾ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದವು. ಇದಕ್ಕೆಲ್ಲ ಸಿಎಂ ಯಡಿಯೂರಪ್ಪ ಅವರೇ ಕಾರಣ. ಕೊರೊನಾ ಎರಡನೇ ಅಲೆಯ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ ಅತಿ ಹೆಚ್ಚು ಸಾವು ಸಂಭವಿಸುತ್ತಿರಲಿಲ್ಲ. ವೆಂಟಿಲೇಟರ್, ಬೆಡ್, ಆಕ್ಸಿಜನ್ ಬೆಡ್, ರೆಮ್ಡಿಸಿವರ್ ಇಂಜೆಕ್ಚನ್ ಸಿಗದೆ ಜನ ಸಾವನ್ನಪ್ಪಿದರು. ಚಾಮರಾಜನಗರದಲ್ಲಿ 36 ಜನ ಆಕ್ಸಿಜನ್ ಸಿಗದೆ ಸತ್ತರು. ಅವರಿಗೆ ಆಕ್ಸಿಜನ್ ಸರ್ಕಾರ ಕೊಟ್ಟಿದ್ದರೆ 36 ಜನರ ಪ್ರಾಣ ಉಳಿಯುತ್ತಿತ್ತು. ಇವರ ಸರ್ಕಾರದಲ್ಲಿ ಎಷ್ಟು ಕೆಜಿ ಕೊಡುತ್ತಿದ್ದಾರೆ ? ನಾನು ಕೊರೊನಾ ಸಂಧರ್ಭದಲ್ಲಿ ಸಿಎಂ ಆಗಿದ್ದರೆ ಪ್ರತಿ ಒಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತಿದ್ದೆ. ಕೊರೊನಾ ಬರುತ್ತದೆ ಎಂದು ಗೊತ್ತಿದ್ದರೂ ನಿರ್ಲಕ್ಷ್ಯ ಮಾಡಿದರು. ನಿರ್ಲಕ್ಷ್ಯಕ್ಕೆ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಮೋದಿ ಅಚ್ಚೆ ದಿನ್ ಅಂತ ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಡಬಲ್ ಇಂಜಿನ್ ಸರ್ಕಾರ ಬಂದ್ರೆ ಸ್ವರ್ಗ ಬರುತ್ತದೆ ಅಂತ ಹೇಳಿದ್ದರು. ಈಗ ಸ್ವರ್ಗ ಬಂತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಬರೀ ದುಡ್ಡು ಹೊಡೆದರೆಂಬುದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಇದು ನಾನು ಹೇಳೋದಲ್ಲ, ಬಿಜೆಪಿಯವರೇ ಹೇಳುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಮಗ ಸೇರಿಕೊಂಡು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ವಿಜಯಪುರದ ಯತ್ನಾಳ, ಧಾರವಾಡದ ಬೆಲ್ಲದ್, ಮೈಸೂರಿನ ವಿಶ್ವನಾಥ್, ಚನ್ನಪಟ್ಟಣದ ಯೋಗೇಶ್ವರ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೋದಿ ಬಂದ ಮೇಲೆ ಎಲ್ಲ ಬೆಲೆ ಹೆಚ್ಚಾಗಿದೆ. ನಾಲ್ಕು ಸಾವಿರಕ್ಕೆ ಜೀವನ ಸಾಗಿಸೋ ಕುಟುಂಬಕ್ಕೆ ಹತ್ತು ಸಾವಿರ ಬೇಕಾಗಿದೆ. ಇಂತಹ ಕೆಟ್ಟ ಸರ್ಕಾರ ಈಗ ಅಸ್ತಿತ್ವದಲ್ಲಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಯಡಿಯೂರಪ್ಪನ ಬಳಿ ಅನುದಾನ ಕೇಳಿದರೆ ಕೊರೊನಾ ಅಂತಾರೆ. ಯಡಿಯೂರಪ್ಪ ಸರ್ಕಾರ ಎರಡನೇ ಅಲೆ ತಡೆಯಲು ಸಿದ್ದತೆ ಮಾಡಿಕೊಳ್ಳಲಿಲ್ಲ. ಸಿದ್ದತೆ ಮಾಡಿಕೊಂಡ್ರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ಬೆಡ್ ಸಿಗಲಿಲ್ಲ, ಆಕ್ಸಿಜನ್ ಸಿಗಲಿಲ್ಲ, ರೆಮ್ಡಿಸಿವರ್ ಸಿಗಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಜಾಸ್ತಿ ಆಯ್ತು. ಚಾಮರಾಜನಗರದ ದುರಂತಕ್ಕೆ ಮಿಸ್ಟರ್ ಯಡಿಯೂರಪ್ಪ ಕಾರಣ. ಒಂದೇ ದಿನ 36 ಜನ ಸತ್ತಿದಾರೆ. ಆದರೆ, ಸರ್ಕಾರದವರು ಹಸಿ ಸುಳ್ಳು ಹೇಳಿ ಜನರನ್ನು ನಂಬಿಸುತ್ತಿದ್ದಾರೆ. ಚಾಮರಾಜನಗರ ದುರಂತದ ಬಗ್ಗೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯ ಮಾಡಿದೆ. ಆದರೆ, ತನಿಖೆ ಮಾಡಿಸಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಇರಕೂಡದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Explained| ಸದ್ಯಕ್ಕೆ ಯಡಿಯೂರಪ್ಪ ಸ್ಥಾನ ಭದ್ರ....ಆದರೂ, ಆ ಮೂವರು ಕಮಲ ನಾಯಕರು ಸಿಎಂ ವಿರುದ್ಧ ಬಂಡಾಯ ಎದ್ದಿರುವುದು ಏಕೆ?

ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬಗ್ಗೆ ಚರ್ಚೆಯಾಗುತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಇಲ್ಲ. ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಒಂದು ಸಿಸ್ಟಂ ಇದೆ. ಚುನಾವಣೆ ಮುಗಿದ ಬಳಿಕ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರೋ ವೈಯಕ್ತಿಕ ಅಭಿಪ್ರಾಯ ಹೇಳಿದ ತಕ್ಷಣ ಅದು ಪಕ್ಷದ ಅಭಿಪ್ರಾಯ ಅಲ್ಲ. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡೋದು ಬೇಡ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅರವಿಂದ ಬೆಲ್ಲದ ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆಯಾಗಬೇಕು. ತನಿಖೆಗೆ ನಾನು ಒತ್ತಾಯ ಮಾಡಿದ್ದೇನೆ. ಇನ್ನೊಬ್ಬರ ಫೋನ್ ಕದ್ದಾಲಿಕೆ ಮಾಡೋ ಅಧಿಕಾರ ಯಾರಿಗೂ ಇಲ್ಲ. ಸರ್ಕಾರಕ್ಕಾಗಲಿ, ಪೊಲೀಸರಿಗಾಗಲಿ ಅಧಿಕಾರ ಇಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಸಮಯದಲ್ಲಿ ಏನಾಗಿದೆ ಗೊತ್ತಿದೆಯಲ್ಲ? ಇದು ಗಂಭೀರವಾದ ವಿಚಾರ, ಇದು ಯಾವುದೇ ಪಕ್ಷದವರಾಗಲಿ ಯಾರೇ ಆಗಲಿ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡೋ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
Youtube Video
ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ಸೇರಿ ರಾಜ್ಯವನ್ನ ಲೂಟಿ ಹೊಡೆಯುತ್ತಿದ್ದಾರೆ. ನೀರಾವರಿ ಇಲಾಖೆಯಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಭಾರತದಲ್ಲಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಗಗನಕ್ಕೆ ಏರಿಸಿದ್ದಾರೆ. ಇದೇನಾ ಅಚ್ಚೇ ದಿನ? ರಾಜ್ಯದಲ್ಲಿ ಕೊರೊನಾ ರೋಗ ಹೋಗಿಲ್ಲ, ಕಡಿಮೆ ಆಗಿದೆಯಷ್ಟೆ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸ್ಯಾನಿಟೈಜ್ ಮಾಡಿಕೊಳ್ಳಬೇಕುಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. 12 ವರ್ಷ ಮೇಲ್ಪಟ್ಟವರು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Published by: Sushma Chakre
First published: June 21, 2021, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories