ರಮೇಶ್​​ ಜಾರಕಿಹೊಳಿಗೆ ಸರ್ಕಾರ ಬೀಳಿಸುವ ಶಕ್ತಿ ಇದೆ, ಆದ್ರೆ ಹಳ್ಳಿಗಳಿಗೆ ಬಸ್​ ಬಿಡಿಸುವ ಶಕ್ತಿ ಇಲ್ಲ; ಸತೀಶ್​ ಜಾರಕಿಹೊಳಿ ವ್ಯಂಗ್ಯ

ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಿಲ್ಲ. ಲೂಟಿ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇವರಿಗೆ, ಇನ್ನರ್ಧ ಪಾಲು ಅವರಿಗೆ. ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ.

Latha CG | news18-kannada
Updated:November 23, 2019, 3:38 PM IST
ರಮೇಶ್​​ ಜಾರಕಿಹೊಳಿಗೆ ಸರ್ಕಾರ ಬೀಳಿಸುವ ಶಕ್ತಿ ಇದೆ, ಆದ್ರೆ ಹಳ್ಳಿಗಳಿಗೆ ಬಸ್​ ಬಿಡಿಸುವ ಶಕ್ತಿ ಇಲ್ಲ; ಸತೀಶ್​ ಜಾರಕಿಹೊಳಿ ವ್ಯಂಗ್ಯ
ರಮೇಶ್​​ ಜಾರಕಿಹೊಳಿ-ಸತೀಶ್​ ಜಾರಕಿಹೊಳಿ
  • Share this:
ಬೆಳಗಾವಿ(ನ.23): ರಾಜ್ಯದಲ್ಲಿ ಉಪಚುನಾವಣೆಯ ಕಾವು ರಂಗೇರುತ್ತಿದೆ. ಮೂರು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. 15 ಕ್ಷೇತ್ರಗಳಲ್ಲಿ ಕೆಲವೊಂದು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿವೆ. ಅವುಗಳಲ್ಲಿ ಗೋಕಾಕ್​ ಕ್ಷೇತ್ರವೂ ಕೂಡ ಒಂದು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಮೇಶ್​ ಜಾರಕಿಹೊಳಿ ವಿರುದ್ಧ ಅವರ ಸಹೋದರ ಲಖನ್​​​​ ಜಾರಕಿಹೊಳಿ ಕಣಕ್ಕಿಳಿದಿದ್ಧಾರೆ. ರಮೇಶ್​​ ಜಾರಕಿಹೊಳಿ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದು ಸತೀಶ್​ ಜಾರಕಿಹೊಳಿ ಮತ್ತು ಲಖನ್​ ಜಾರಕಿಹೊಳಿ ತೊಡೆತಟ್ಟಿದ್ದಾರೆ.

ಇಂದು ಗೋಕಾಕ್​​​ನಲ್ಲಿ ಬೆಂಬಲಿಗರ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಸತೀಶ್​​ ಜಾರಕಿಹೊಳಿ, ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ‌ ವಿರುದ್ಧ ಎಂದರು. ಇದೇ ವೇಳೆ, ರಮೇಶ್ ಜಾರಕಿಹೊಳಿ  ಮತ್ತು ಅವರ ಬೆಂಬಲಿಗರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸತೀಶ್ ಜಾರಕಿಹೊಳಿ ಪಿಎಸ್ಐ ಹಾಗೂ ಬೀಟ್ ಪೊಲೀಸರ ಕಥೆ ಹೇಳಿ ಟೀಕೆ ಮಾಡಿದರು. ರಮೇಶ್ ಜಾರಕಿಹೊಳಿ‌ ಕೆಳಗಿರುವ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ. ಈ ಬೀಟ್ ಪೊಲೀಸರು ಪಿಎಸ್ಐ ನನ್ನು ಭೇಟಿ ಆಗೋಕೆ ಬಿಡುವುದಿಲ್ಲ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಐದು ಊರಲ್ಲಷ್ಟೇ ಅವರು ಜಾಸ್ತಿ ಇದ್ದಾರೆ, ಉಳಿದ ಊರುಗಳಲ್ಲಿ ಅವರನ್ನು ಮುಗಿಸಿದ್ದೇವೆ ಎಂದು ಹೇಳಿದರು.

ಕೆ.ಆರ್​​ ಪೇಟೆ ಉಪಚುನಾವಣೆ: ಕಾಂಗ್ರೆಸ್​​ಗೆ ಸುಮಲತಾ ಅಂಬರೀಶ್​​ ಬೆಂಬಲ?; ಯಾಕೆ ಗೊತ್ತೇ?

ಇಡೀ ಸರ್ಕಾರ ಬೀಳಿಸುವ ಶಕ್ತಿ ರಮೇಶ್ ಜಾರಕಿಹೊಳಿ ಬಳಿ ಇದೆ. ಆದರೆ ಗ್ರಾಮಗಳಿಗೆ ಒಂದು ಬಸ್ ಬಿಡಿಸುವ ಶಕ್ತಿ ರಮೇಶ್ ಬಳಿ ಇಲ್ಲ. ಎಷ್ಟೋ ಊರುಗಳಿಗೆ ಬಸ್ ಸಂಪರ್ಕ ಇಲ್ಲ, ಕುಡಿಯಲು ನೀರು ಇಲ್ಲ. ಒಂದ್ಯಾವುದು ಬ್ಯುಸಿನೆಸ್ ಇಲ್ಲ, ಸಮಾಜಸೇವೆ ಇಲ್ಲ ಆದರೂ ಇವನು ಅಷ್ಟು ಬ್ಯುಸಿ ಇರುತ್ತಾನೆ ಎಂದು ಹಿಗ್ಗಾಮುಗ್ಗಾ ಜಾಡಿಸಿದರು.

ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಿಲ್ಲ. ಲೂಟಿ ಮಾಡುವ ಗ್ಯಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇವರಿಗೆ, ಇನ್ನರ್ಧ ಪಾಲು ಅವರಿಗೆ. ಮುಸ್ಲಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆ ಆಗಿಲ್ಲ. ಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಷಾ ವಿರುದ್ಧ ವಾಗ್ದಾಳಿ ಮಾಡಿದ್ದ. ಮೋದಿ ಸಹ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ಅಭಿವೃದ್ಧಿಗಾಗಿ ಬಿಜೆಪಿಗೆ ಹೋಗಿದ್ದೇನೆ ಅಂತಾರೆ. ಯಾರ ಅಭಿವೃದ್ಧಿ ಅಂತಾ ತಿಳಿಯುತ್ತಿಲ್ಲ ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯ್ತು. ಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಬಿಎಸ್‌ವೈ ಬಿಟ್ಟರೆ ರಮೇಶ್ ಜಾರಕಿಹೊಳಿಗೆ ಬೇರೆ ಆಯ್ಕೆ ಇಲ್ಲ. ಬಿಎಸ್‌ವೈ ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ರಮೇಶ ಜಾರಕಿಹೊಳಿ‌ ಸೋಲಿಸುವುದೇ ನಮ್ಮ ಗುರಿ ಎಂದರು.ಸಿದ್ದರಾಮಯ್ಯ ಭ್ರಷ್ಟಾಚಾರಿಯಲ್ಲ, ಅತ್ಯುತ್ತಮ ಆಡಳಿತಗಾರ; ಕಡು ವೈರಿಯನ್ನು ಹಾಡಿ ಹೊಗಳಿದ ಎಚ್. ವಿಶ್ವನಾಥ್!

ರಮೇಶ್ ಜಾರಕಿಹೊಳಿ‌ ಗೆದ್ದರೆ ಮೂರು ಲಾಭ ಆಗುತ್ತೆ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಆಗ್ತಾರೆ ಅಂತಾ ಪ್ರಚಾರ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವರಾದ್ರೆ ಯಾರಿಗೆ ಲಾಭ? ಮತ್ತೆ ಅವರಿಗೆ ಲಾಭ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಏನು ಅಭಿವೃದ್ಧಿ ಮಾಡಿದ್ದಾರೆ? ಜನ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ಸತೀಶ್​ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಲಖನ್ ಶಕ್ತಿ, ಪಕ್ಷದ ಶಕ್ತಿ, ನಮ್ಮ ಶಕ್ತಿ ಎಲ್ಲಾ ಇದೆ. ಡಿ.9ರವರೆಗೆ ನಾವು ಕಾಯುವ ಅವಶ್ಯಕತೆಯಿಲ್ಲ. ನಮ್ಮ ಪಟಾಕಿ ಡಿ.5ರ ಸಂಜೆಯೇ ಸಿಡಿಯಲಿದೆ. ಸರ್ಕಾರ ಕೆಡವಿದವರನ್ನು ನಾವು ಕೆಡವಬೇಕಾಗಿದೆ. ಆಗ ನಮಗೆ ಒಂದು ಶಕ್ತಿ ಬರುತ್ತದೆ. ರಾಜಕೀಯ ಇತಿಹಾಸ ಬರೆಯುವ ಸುವರ್ಣ ದಿನ ನಮ್ಮ ಮುಂದಿದೆ, ಗೆಲುವಿಗೆ ಶ್ರಮಿಸೋಣ ಎಂದು ಬೆಂಬಲಿಗರಿಗೆ ಕರೆ ನೀಡಿದರು.

First published:November 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ