• Home
  • »
  • News
  • »
  • state
  • »
  • Siddaramaiah: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹಸಿರು ನಿಶಾನೆ ತೋರಿದ ಕಾಂಗ್ರೆಸ್​ ಹೈ ಕಮಾಂಡ್​

Siddaramaiah: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ಹಸಿರು ನಿಶಾನೆ ತೋರಿದ ಕಾಂಗ್ರೆಸ್​ ಹೈ ಕಮಾಂಡ್​

ರಾಹುಲ್​ ಗಾಂಧಿ ಜೊತೆ ಸಿದ್ದರಾಮಯ್ಯ ಮತ್ತು ​ ನಾಯಕರು

ರಾಹುಲ್​ ಗಾಂಧಿ ಜೊತೆ ಸಿದ್ದರಾಮಯ್ಯ ಮತ್ತು ​ ನಾಯಕರು

ಕುರುಬ ಮೀಸಲಾತಿ ವಿಷಯದಲ್ಲಿ ಬಿಜೆಪಿ ಕುತಂತ್ರ ಮಾಡುತ್ತಿದೆ. ಕುರುಬರ ಮತ ಒಡೆಯಲು ಮೀಸಲಾತಿ ಅಸ್ತ್ರ ಬಿಟ್ಟಿದೆ. ಇದಕ್ಕೆ ಪ್ರತಿತಂತ್ರವಾಗಿ ಅಹಿಂದ ಸಮುದಾಯವನ್ನು ಒಗ್ಗೂಡಿಸಬೇಕು ಎಂದು ಹೈಕಮಾಂಡ್​ಗೆ ಮನವರಿಕೆ ಮಾಡಿದ್ದರು ಎನ್ನಲಾಗಿದೆ.

  • Share this:

ನವದೆಹಲಿ (ಫೆ. 16):  ಕಳೆದ ಒಂದು ವರ್ಷದಿಂದ ದೆಹಲಿ ಕಡೆ ಮುಖ ಮಾಡದ ಸಿದ್ದರಾಮಯ್ಯ ಇಂದು ದಿಢೀರ್​ ಎಂದು ಹೈಕಮಾಂಡ್​ ಭೇಟಿ ಮಾಡಿದ್ದಾರೆ. ಅವರ ಭೇಟಿಯ ಹಿಂದಿನ ಉದ್ದೇಶ ಅಹಿಂದ ಸಮಾವೇಶಕ್ಕೆ ಹಸಿರು ನಿಶಾನೆ ಪಡೆಯುವುದಾಗಿದೆ ಎನ್ನಲಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ವಿಚಾರಗಳ ಕುರಿತು ಚರ್ಚೆ ನಡೆಸುವುದರ ಜೊತೆಗೆ ತಮ್ಮ ಅಹಿಂದ ಹೋರಾಟಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಅದರಂತೆ ಸಿದ್ದರಾಮಯ್ಯ ಈ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸಂಜೆ ಜನಪಥ್​ ನಿವಾಸದಲ್ಲಿ ರಾಹುಲ್​ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ ಕುರುಬ ಮೀಸಲಾತಿ ವಿಷಯದಲ್ಲಿ ಬಿಜೆಪಿ ಕುತಂತ್ರ ಮಾಡುತ್ತಿದೆ. ಕುರುಬರ ಮತ ಒಡೆಯಲು ಮೀಸಲಾತಿ ಅಸ್ತ್ರ ಬಿಟ್ಟಿದೆ. ಇದಕ್ಕೆ ಪ್ರತಿತಂತ್ರವಾಗಿ ಅಹಿಂದ ಸಮುದಾಯವನ್ನು ಒಗ್ಗೂಡಿಸಬೇಕು ಎಂದು ಮನವರಿಕೆ ಮಾಡಿದ್ದರು ಎನ್ನಲಾಗಿದೆ.


ಇದಕ್ಕೆ ರಾಹುಲ್​ ಗಾಂಧಿ ಕೂಡ ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಯಾವುದೇ ಸಮಾವೇಶ ಮಾಡಿ ಎಂದು ಒಂದೇ ಮಾತಿನಲ್ಲಿ ಅಹಿಂದ ಸಮಾವೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.




ರಾಹುಲ್​ ಗಾಂಧಿ ಭೇಟಿಗೂ ಮುನ್ನ ಮಾತನಾಡಿದ ಅವರು, ಅಹಿಂದ ಸಮಾವೇಶ ಮಾಡುತ್ತೇನೆ ಎಂದು ಹೇಳಿಲ್ಲ. ಕುರುಬರು ಎಸ್​​​​ಟಿ ಮೀಸಲಾತಿ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಮೀಸಲಾತಿ ಕೊಡಬೇಕು. ಈಶ್ವರಪ್ಪ ಇಲ್ಲಿ ಕೇಳಬೇಕು. ಅದನ್ನು ಬಿಟ್ಟು ಅಲ್ಲಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಕುರುಬ ಮೀಸಲಾತಿ ಚಳವಳಿ ಅಗತ್ಯ ಇರಲಿಲ್ಲ. ಕುಲಶಾಸ್ತ್ರ ಅಧ್ಯಯನ ಪೂರ್ಣ ಆಗಿಲ್ಲವಾ? ಎಸ್​ಟಿಗೆ ಸೇರಿಸಬೇಕಾದವರು ಕೇಂದ್ರ ಸರ್ಕಾರ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ನಾನು ಕುರುಬರನ್ನು ಎಸ್ಟಿಗೆ ಸೇರಸಬೇಡಿ ಎಂದು ಹೇಳಿಲ್ಲ. ಪ್ರೀತಿ ವಿಶ್ವಾಸದ ಮೇಲೆ ನಾಯಕತ್ವ ಇರುತ್ತದೆ . ಇನ್ನೂ ಕುಲಶಾಸ್ತ್ರ ಅಧ್ಯಯನದ ವರದಿ ಬರಬೇಕು. ಕುಲಶಾಸ್ತ್ರ ಅಧ್ಯಯನಕ್ಕೆ 6 ತಿಂಗಳು ಬೇಕು. ವರದಿ ಸಿಗದೆ ಏನು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.


ಇದೇ ವೇಳೆ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕುರಿತು ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ. ವಿವಾದಿತ ಜಾಗದಲ್ಲಿ ಕಟ್ಟುವ ಮಂದಿರಕ್ಕೆ ಹಣ ಕೊಡುವುದಿಲ್ಲ. ಬೇರೆ ಜಾಗದಲ್ಲಿ ಮಂದಿರ ಕಟ್ಟಿದರೆ ದೇಣಿಗೆ ಕೊಡುತ್ತೇನೆ. ಇದೆಲ್ಲ ರಾಮನ ಲೆಕ್ಕ ಕೃಷ್ಣನ ಲೆಕ್ಕ. ರಾಮಮಂದಿರ ಕಟ್ಟುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈಗ ಸಂಗ್ರಹವಾಗುತ್ತಿರುವ ಹಣಕ್ಕೆ ಲೆಕ್ಕ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೇ, ಈ ಹಿಂದೆ ಇಟ್ಟಿಗೆ, ಹಣ ಸಂಗ್ರಹ ಮಾಡಿದ್ದರು. ಇಟ್ಟಿಗೆ ಊರಾಚೆ ಎಸೆದು ಹಣ ಕೊಂಡುಹೋದರು. ಎಲ್ಲಿ ಹೋಯ್ತು ಆ ಹಣ ಎಂದು ಪ್ರಶ್ನಿಸಿದರು.


ರಾಹುಲ್​ ಭೇಟಿ ಬಳಿಕ ಮಾತನಾಡಿರುವ ಅವರು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿದೆ. ಯಾವುದೇ ಅಹಿಂದ ಸಮಾವೇಶದ ಕುರಿತು ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Published by:Seema R
First published: