• Home
  • »
  • News
  • »
  • state
  • »
  • Rahul Gandhi: ಗಾಯಗೊಂಡ ಆನೆ ಕಂಡು ಮರುಗಿತು ರಾಹುಲ್ ಗಾಂಧಿ ಹೃದಯ; ಸಿಎಂ ಬೊಮ್ಮಾಯಿಗೆ 'ರಾಗಾ' ಪತ್ರ

Rahul Gandhi: ಗಾಯಗೊಂಡ ಆನೆ ಕಂಡು ಮರುಗಿತು ರಾಹುಲ್ ಗಾಂಧಿ ಹೃದಯ; ಸಿಎಂ ಬೊಮ್ಮಾಯಿಗೆ 'ರಾಗಾ' ಪತ್ರ

ಸಿಎಂಗೆ ಪತ್ರ ಬರೆದ ರಾಹುಲ್​

ಸಿಎಂಗೆ ಪತ್ರ ಬರೆದ ರಾಹುಲ್​

ರಾಹುಲ್​ ಗಾಂಧಿ ಸಫಾರಿಗೆ ತೆರಳಿದ್ದ ವೇಳೆ ತಾಯಿಯ ಜತೆಗಿದ್ದ ಆನೆ ಮರಿಯೊಂದು ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡಿದ್ದರು. ಆನೆ ಗಾಯಗೊಂಡು ನರಳಾಡುತ್ತಿತ್ತು. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

  • Share this:

ಬೆಂಗಳೂರು (ಅ.05): ಸೋನಿಯಾ ಗಾಂಧಿ (Sonia Gandhi) ಹಾಗೂ ರಾಹುಲ್ ಗಾಂಧಿ (Rahul Gandhi) ​ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಗಾಯಗೊಂಡಿದ್ದ ಆನೆ ಮರಿ ಕಂಡು ಮರುಗಿದ್ದಾರೆ. ಸಫಾರಿ ಮುಗಿಸಿ ಬಂದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ​ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ವ್ಯಾಪ್ತಿಯಲ್ಲಿರುವ ಗಾಯಗೊಂಡಿರುವ ಆನೆ ಮರಿಯೊಂದಕ್ಕೆ ತಕ್ಷಣ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದ್ದಾರೆ. 


ಭಾರತ್‌ ಜೋಡೋ ಯಾತ್ರೆಗೆ ಕೊಂಚ ಬ್ರೇಕ್​ ಕೊಟ್ಟಿರುವ ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಜೊತೆ ಆತ್ಮೀಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಕಬಿನಿಯ ಆರೆಂಜ್​ ಕೌಂಟಿ ರೆಸಾರ್ಟ್​ನಲ್ಲಿ ಕಾಲಕಳೆಯುತ್ತಿದ್ದಾರೆ. ನಿನ್ನೆ (ಮಂಗಳವಾರ) ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಾಗರಹೊಳೆಯಲ್ಲಿ ಸಫಾರಿಗೆ ತೆರಳಿದ್ದರು.


ಸಫಾರಿಗೆ ತೆರಳಿದ್ದ ವೇಳೆ ಮರಿಯಾನೆ ಕಂಡ ರಾಹುಲ್​


ರಾಹುಲ್​ ಗಾಂಧಿ ಸಫಾರಿಗೆ ತೆರಳಿದ್ದ ವೇಳೆ ತಾಯಿಯ ಜತೆಗಿದ್ದ ಆನೆ ಮರಿಯೊಂದು ತೀವ್ರವಾಗಿ ಗಾಯಗೊಂಡಿರುವುದನ್ನು ಕಂಡಿದ್ದರು. ಆನೆ ಗಾಯಗೊಂಡು ನರಳಾಡುತ್ತಿತ್ತು. ಈ ಕುರಿತು ಮುಖ್ಯಮಂತ್ರಿಗೆ ಬುಧವಾರ ಪತ್ರ ಬರೆದು ಮಾಹಿತಿ ನೀಡಿದ್ದಾರೆ.



ಮರಿಯಾನೆಯ ಬಾಲ, ಸೊಂಡಲಿಗೆ ಗಾಯ


ತಾಯಿಯ ಜತೆಗಿದ್ದ ಚಿಕ್ಕ ಆನೆ ಮರಿಯ ಬಾಲ ಮತ್ತು ಸೊಂಡಿಲಿಗೆ ಗಾಯಗಳಾಗಿವೆ. ಅದು ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ನಿಸರ್ಗ ಸಹಜವಾಗಿಯೇ ಪ್ರಕ್ರಿಯೆಗಳು ನಡೆಯಬೇಕು ಎಂಬ ಅಭಿಪ್ರಾಯ ಇದೆ. ಆದರೂ, ಅಳಿವಿನಂಚಿನಲ್ಲಿರುವ ಪ್ರಭೇದದ ಜೀವಿಗಳು ಮತ್ತು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂತಹ ಅಭಿಪ್ರಾಯದ ಹೊರತಾಗಿ ಯೋಚಿಸಬೇಕಾಗುತ್ತದೆ. ಈ ಆನೆ ಮರಿಗೆ ತುರ್ತಾಗಿ ವೈದ್ಯಕೀಯ ನೆರವು ಬೇಕಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.


ಆನೆ ಮರಿಗೆ ಚಿಕಿತ್ಸೆ ನೀಡಿ ರಕ್ಷಿಸಿ


ಆನೆ ಮರಿಗೆ ಚಿಕಿತ್ಸೆ ನೀಡಿ, ಅದನ್ನು ರಕ್ಷಿಸುವ ವಿಚಾರದಲ್ಲಿ ರಾಜಕೀಯ ಗಡಿಗಳನ್ನು ಮೀರಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಸರಿಯಾದ ಚಿಕಿತ್ಸೆ ಲಭಿಸಿದರೆ ಆ ಮರಿಯು ಜೀವಂತವಾಗಿ ಉಳಿಯುತ್ತದೆ ಎನ್ನುವ ವಿಶ್ವಾಸವಿದೆ. ಈ ಆನೆ ಮರಿಯ ಜೀವ ಉಳಿಸಲು ನೀವು ಸಕಾಲಕ್ಕೆ ನೆರವು ನೀಡುತ್ತೀರಿ ಎಂಬ ಭರವಸೆ ಇದೆ ಎಂದು ರಾಹುಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಭೀಮನಕೊಲ್ಲಿ ದೇವಸ್ಥಾನಕ್ಕೆ  ಸೋನಿಯಾ ಭೇಟಿ


ಸೋನಿಯಾ ಗಾಂಧಿ ಅವರು ವಿಜಯದಶಮಿಹಬ್ಬದ ಹಿನ್ನೆಲೆಯಲ್ಲಿ ಹೆಚ್ ಡಿ ಕೋಟಿ ತಾಲ್ಲೂಕಿನಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಕಬಿನಿ ಹಿನ್ನಿರಿನಲ್ಲಿರುವ ಭೀಮನಕೊಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸೋನಿಯಾ ಗಾಂಧಿ ಮಹದೇಶ್ವರನ ದರ್ಶನ ಪಡೆದರು. ಕಬಿನಿ ಹಿನ್ನಿರಿನಲ್ಲಿರುವ ಮಹದೇಶ್ವರ ದೇವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದೆ. ಇಲ್ಲಿ ದೇವರ ಮೂರ್ತಿಯನ್ನು ತಂದು ಪ್ರತಿಷ್ಠೆ ಮಾಡಿದ್ದಲ್ಲ, ಇದು ಉದ್ಭವ ಮೂರ್ತಿ ಎಂಬ ನಂಬಿಕೆಯಿದೆ.


ಇದನ್ನೂ ಓದಿ: Sonia Gandhi: ರಿಲ್ಯಾಕ್ಸ್ ಮೂಡ್​ನಲ್ಲಿ ಸೋನಿಯಾ ಗಾಂಧಿ; ಭೀಮನಕೊಲ್ಲಿಯ ಮಾದೇಶ್ವರ ದೇವಾಲಯಕ್ಕೆ ಭೇಟಿ


ಸೋನಿಯಾ ಗಾಂಧಿ ಭೇಟಿ ವೇಳೆ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಸಾಥ್ ನೀಡಿದರು.ಸೋನಿಯಾ ಗಾಂಧಿ ಅವರು ತಮ್ಮ ಪುತ್ರ, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ್ದಾರೆ.

Published by:ಪಾವನ ಎಚ್ ಎಸ್
First published: