ಕೊರೋನಾ ಸಹಾಯವಾಣಿಗೆ ದುಡ್ಡಿಲ್ಲದಿದ್ದರೆ ನಾವೇ ಕೊಡುತ್ತೇವೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಟಾಂಗ್

ಕೆಕೆಆರ್​ಡಿಬಿಯಿಂದ ತಡವಾಗಿ ಸಹಾಯವಾಣಿ ಆರಂಭಿಸಿರೋದಕ್ಕೆ ಕಿಡಿಕಾರಿರೋ ಪ್ರಿಯಾಂಕ್, ಬೇಕಿದ್ದರೆ ಸಹಾಯವಾಣಿ ನಿರ್ವಹಣೆಗೆ ಕಾಂಗ್ರೆಸ್​ನಿಂದಲೇ ಹಣ ಕೊಡ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

  • Share this:
ಕಲಬುರ್ಗಿ (ಆ. 15): ಕಲಬುರ್ಗಿ ಸೇರಿದಂತೆ ರಾಜ್ಯದೆಲ್ಲೆಡೆ ಕೊರೋನಾ ವ್ಯಾಪಕಗೊಳ್ಳಲಾರಂಭಿಸಿದೆ. ಕೊರೋನಾ ಕಾಣಿಸಿಕೊಂಡು ಐದು ತಿಂಗಳಾಗುತ್ತಾ ಬಂದರೂ ನಿಯಂತ್ರಣಕ್ಕೆ ಬರೋ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮ ರೂಪಿಸಿ, ಕೋವಿಡ್ ಸೋಂಕಿತರಿಗೆ ನೆರವಾಗಲು ಮುಂದಾಗಿದೆ. ಇದೇ ವೇಳೆ ಕೆ.ಕೆ.ಆರ್.ಡಿ.ಬಿ. ಆರಂಭಿಸಿರೋ ಕೋವಿಡ್ ಸಹಾಯವಾಣಿಗೆ ಖರ್ಚು ವೆಚ್ಚ ಭರಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. 

ಕೊರೋನಾ ನಿಯಂತ್ರಿಸಲು, ಕೋವಿಡ್ ಸೋಂಕಿತರಿಗೆ ನೆರವಾಗಲು ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲು ಮುಂದಾಗಿದೆ. ಕಲಬುರ್ಗಿಯಲ್ಲಿ ಈ ವಿಷಯ ತಿಳಿಸಿರೋ ಜೇವರ್ಗಿ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ ಸಿಂಗ್, ದೇಶದಲ್ಲಿ ದಿನೇದಿನೆ ಕೊರೋನಾ ವ್ಯಾಪಕಗೊಳ್ಳುತ್ತಿದೆ. ರಾಜ್ಯದಲ್ಲಿಯೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸೋಂಕು ವ್ಯಾಪಕಗೊಂಡಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಗೆ ನೆರವಾಗಲು ಕಾಂಗ್ರೆಸ್ ನಿಂದ ಆರೋಗ್ಯ ಹಸ್ತ ವಿನೂತನ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಕೊರೋನಾ ವಾರಿಯರ್ಸ್ ನೇಮಕ ಮಾಡಲು ತೀರ್ಮಾನಿಸಲಾಗಿದೆ. 40 ವರ್ಷದೊಳಗಿನ ವಯೋಮಾನದವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ 7,400 ಗ್ರಾಮ ಪಂಚಾಯಿತಿಗಳಲ್ಲಿ ನೇಮಕ ಮಾಡಲು ಉದ್ದೇಶಿಸಿದ್ದು, ಅವರು ಮನೆ ಮನೆಗೆ ತೆರಳಿ ಪರೀಕ್ಷಿಸಲಿದ್ದಾರೆ. ಸ್ಕ್ರೀನಿಂಗ್ ಟೆಸ್ಟ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಾವಲ್​ ಭೈರಸಂದ್ರ ಗಲಭೆಗೆ ಬಿಜೆಪಿಯವರ ಒಳತಂತ್ರವೇ ಕಾರಣ; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ

ಕಾಂಗ್ರೆಸ್ ಕೊರೋನಾ ವಾರಿಯರ್ಸ್ ಆಸ್ಪತ್ರೆ ಮತ್ತು ಜನತೆಯ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ. ಕೊರೋನಾ ವಾರಿಯರ್ಸ್ ಗೆ ತಲಾ ಒಂದು ಲಕ್ಷ ರೂಪಾಯಿ ವಿಮೆ ಮಾಡಿಸಲಾಗುತ್ತಿದೆ. ಕೊರೋನಾ ವಾರಿಯರ್ಸ್​ಗೆ ಯಾವುದೇ ತೊಂದರೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಕಾಂಗ್ರೆಸ್​ನಿಂದ ಸಣ್ಣ ಪ್ರಯತ್ನ ಮಾಡಿದ್ದೇವೆ. ಈ ಸಂಬಂಧ ಕೊರೋನಾ ವಾರಿಯರ್ಸ್​ಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದ್ದು, ಒಂದೆರಡು ದಿನದಲ್ಲಿ ಮನೆ-ಮನೆ ಸರ್ವೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ಸಹಾಯವಾಣಿ ವೆಚ್ಚವನ್ನು ನಾವೇ ಭರಿಸುತ್ತೇವೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಕೋವಿಡ್ ಸಹಾಯವಾಣಿ ನಿರ್ವಹಣೆಗೆ ನಾವೇ ದುಡ್ಡು ಕೊಡುತ್ತೇವೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರಕ್ಕೆ ಟಾಂಗ್ ಕೊಡ್ಡಿದ್ದಾರೆ.

ಇದನ್ನೂ ಓದಿ: Independence Day: ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕ್ಷೇತ್ರಗಳಿಗೆ 3,187 ಕೋಟಿ ರೂ. ಪ್ಯಾಕೇಜ್; ಸಿಎಂ ಯಡಿಯೂರಪ್ಪ ಘೋಷಣೆ

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಿಂದುಳಿದ ಭಾಗದ ಅಭಿವೃದ್ಧಿಗೆಂದು ಅಸ್ತಿತ್ವಕ್ಕೆ ಬಂದಿದೆ. ಅದರ ಕೆಲಸಗಳು ಬೇರೆಯೇ ಇವೆ. ಆದರೆ ಕೊರೋನಾ ಕಾಣಿಸಿಕೊಂಡು ಐದು ತಿಂಗಳಾದ ನಂತರ ಮೊನ್ನೆ ಕೆ.ಕೆ.ಆರ್.ಡಿ.ಬಿ.ಯಿಂದ ಕೊವಿಡ್ ಸಹಾಯವಾಣಿ ಆರಂಭಿಸಲಾಗಿದೆ. ಅದಕ್ಕಾಗಿ ಒಂದು ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಕೇವಲ ಒಂದು ಲಕ್ಷ ರೂಪಾಯಿಗಳೂ ಜಿಲ್ಲಾಡಳಿತದ ಬಳಿ ಇಲ್ಲವೆ. ಹಾಗಿದ್ದರೆ ಕೋವಿಡ್ ಸೋಂಕು ನಿಯಂತ್ರಣಕ್ಕೆಂದು ಸರ್ಕಾರ ಬಿಡುಗಡೆ ಮಾಡಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

ಕೆಕೆಆರ್​ಡಿಬಿಯಿಂದ ತಡವಾಗಿ ಸಹಾಯವಾಣಿ ಆರಂಭಿಸಿರೋದಕ್ಕೆ ಕಿಡಿಕಾರಿರೋ ಪ್ರಿಯಾಂಕ್, ಬೇಕಿದ್ದರೆ ಸಹಾಯವಾಣಿ ನಿರ್ವಹಣೆಗೆ ಕಾಂಗ್ರೆಸ್​ನಿಂದಲೇ ಹಣ ಕೊಡ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ. ಕೆ.ಕೆ.ಆರ್.ಡಿ.ಬಿ. ಇಂತಹ ಸಹಾಯವಾಣಿ ಬಿಟ್ಟು, ತನ್ನ ಕೆಲಸ ಮಾಡಲಿ, ಹಿಂದುಳಿದ ಭಾಗದ ಅಭಿವೃದ್ಧಿಗೆ ಅದು ಶ್ರಮಿಸಲಿ ಎಂದು ಆಗ್ರಹಿಸಿದ್ದಾರೆ. ರಾಜ್ಯದ ಸಿಎಂ ಸೇರಿದಂತೆ ಹಲವು ಸಚಿವರಿಗೆ ಕೊರೋನಾ ಸೋಂಕು ಬಂದಿತ್ತು. ಆರೋಗ್ಯ ಸಚಿವರನ್ನು ಹೊರತುಪಡಿಸಿದರೆ ಉಳಿದವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸಚಿವರೂ ಒಂದೆರಡು ದಿನ ಮಾತ್ರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿದ್ದರೆ ಹೀಗೆ ಖಾಸಗಿ ಆಸ್ಪತ್ರೆಗೆ ಹೋಗೋ ಅವಶ್ಯಕತೆ ಬರುತ್ತಿರಲಿಲ್ಲ. ಸರ್ಕಾರದ ಪ್ರತಿನಿಧಿಗಳಿಗೇ ನಂಬಿಕೆ ಇಲ್ಲದ ಕಾರಣಕ್ಕೆ ವಿರೋಧ ಪಕ್ಷದ ನಾಯಕರೂ ಖಾಸಗಿ ಆಸ್ಪತ್ರೆ ಮೊರೆಹೋದರು. ಅಷ್ಟರಮಟ್ಟಿಗೆ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
Published by:Sushma Chakre
First published: