Oscar Fernandes: ಕಾಂಗ್ರೆಸ್​ ಹಿರಿಯ ನಾಯಕ ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ

ಕಾಂಗ್ರೆಸ್​ ಹಿರಿಯ ನಾಯಕ ಆಸ್ಕರ್​ ಫರ್ನಾಂಡಿಸ್​ ಇಂದು ವಿಧಿವಶರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ  

ಆಸ್ಕರ್​ ಫರ್ನಾಂಡಿಸ್​ ಅವರ ಹಳೆಯ ಚಿತ್ರ

ಆಸ್ಕರ್​ ಫರ್ನಾಂಡಿಸ್​ ಅವರ ಹಳೆಯ ಚಿತ್ರ

 • Share this:
  ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್​ ಫರ್ನಾಂಡಿಸ್​  (Oscar Fernandes) ಇಂದು ವಿಧಿವಶರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಯೋಗ ಮಾಡುತ್ತಿದ್ದ ವೇಳೆ ಆಸ್ಕರ್​ ಫರ್ನಾಂಡಿಸ್​ ಜಾರಿ ಬಿದ್ದಿದ್ದರು. ಈ ವೇಳೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಡಯಾಲಿಸಿಸ್​ ವೇಳೆ ಅವರ ರಕ್ತ ಹೆಪ್ಪುಗಟ್ಟಿರುವದು ಪತ್ತೆಯಾಗಿದೆ. ಅವರ ಮೆದುಳಿಗೆ ಪೆಟ್ಟು ಬಿದ್ದ ಹಿನ್ನಲೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. 80 ವರ್ಷದ ಆಸ್ಕರ್​ ಫರ್ನಾಂಡಿಸ್​ ಅಗಲಿಕೆಗೆ ಕಾಂಗ್ರೆಸ್​ ನಾಯಕರು ಕಂಬನಿ ಮಿಡಿದಿದ್ದಾರೆ. 

  ಆಸ್ಕರ್ ಫರ್ನಾಂಡಿಸ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ವರ್ಗದಲ್ಲಿ ಆಸ್ಕರ್ ಫರ್ನಾಂಡಿಸ್‌ ಗುರುತಿಸಿಕೊಂಡಿದ್ದರು.

  ಆಸ್ಕರ್ ಫರ್ನಾಂಡಿಸ್ ಅವರು ಮಾರ್ಚ್ 27, 1941ರಲ್ಲಿ ಉಡುಪಿಯಲ್ಲಿ ಜನಿಸಿದ್ದರು. ಜನವರಿ 18, 1980 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಒಟ್ಟು ಐದು ಬಾರಿ ಉಡುಪಿಯಿಂದ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಇವರಿಗೆ ಸಲ್ಲುತ್ತದೆ.

  ಇದನ್ನು ಓದಿ: Oscar Fernandes: ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್​ ಫರ್ನಾಂಡಿಸ್​​ ಆರೋಗ್ಯ ವಿಚಾರಿಸಿದ ಎಂಬಿ ಪಾಟೀಲ್​

  ಆಸ್ಕರ್​ ಫರ್ನಾಂಡಿಸ್​ ಮನಮೋಹನ್​ ನೇತೃತ್ವದ ಸರ್ಕಾರದಲ್ಲಿ ಸಾರಿಗೆ, ರಸ್ತೆ ಮತ್ತು ಹೆದ್ದಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದೇ ವೇಳೇ ಅವರು ಹೆಚ್ಚುವರಿಯಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು.  1980ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. 1983ರಲ್ಲಿ ಅವರು ಅಖಿಲ ಭಾರತ ಕಾಂಗ್ರೆಸ್​ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದರು​. 1983 ರಿಂದ 1997ರವರೆಗೆ ಐದು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 1998ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು.

  ನಾಯಕರ ಸಂತಾಪ

  ಕಾಂಗ್ರೆಸ್​ನ ಹಿರಿಯ ನಾಯಕರ ಸಾವಿಗೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

  ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ, ಯುಟಿ ಖಾದರ್​, ಎಸ್​ ಆರ್​ ಪಾಟೀಲ್​ ಸೇರಿದಂತೆ ಹಲವು ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.

  ಅವರ ನಿಧನ ಕುರಿತು ಸಂತಾಪ ವ್ಯಕ್ತಪಡಿಸಿ ಮಾತನಾಡಿದ ಯುಟಿ ಖಾದರ್​,  ಆಸ್ಕರ್ ಫರ್ನಾಂಡಿಸ್ ಅವರ ಅಗಲಿಕೆ ನಮಗೆ ನೋವು‌ತಂದಿದೆ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ ಬಂದ ಅವರು, ಹಲವು ಸ್ಥಾನಮಾನಗಳನ್ನ ನಿಭಾಯಿಸಿದವರು. ಎಲ್ಲ ಪಕ್ಷಗಳ‌ಜೊತೆ ಪ್ರೀತಿ ವಿಶ್ವಾಸದಿಂದ ಇದ್ದರು. ಕಾರ್ಮಿಕರಿಗೆ ಹಲವು‌ಯೋಜನೆ ತರಲು ಕಾರಣರಾಗಿದ್ದರು. ಶಿರಾಡಿ ಘಾಟ್ ರಸ್ತೆಗೆ ಕಾರಣರಾದವರು ಅವರು, ನಮ್ಮೆಲ್ಲರ ರಾಜಕೀಯ‌ಮಾರ್ಗದರ್ಶಕರಾಗಿದ್ದರು. ನಮಗೆ ರಾಜಕೀಯಕ್ಕೆ ಪುನರುಜ್ಜೀವನ‌ಕೊಟ್ಟವರು. ಬಲಗೈ ಮಾಡಿದ ಉಪಕಾರ ಎಡಗೈಗೆ ಗೊತ್ತಾಗುತ್ತಿರಲಿಲ್ಲ. ಅವರ ಅಗಲಿಕೆ ನಮಗೆ ತೀರ್ವ ನೋವು ತಂದಿದೆ ಎಂದರು.  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಕಾಂಗ್ರೆಸ್​ ಹಿರಿಯ ನಾಯಕನ ಅಗಲಿಕೆಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ.
  Published by:Seema R
  First published: